ಭಾನುವಾರ, ಫೆಬ್ರವರಿ 27, 2011

ಸಿಎಫ್‌ಐನ ರಾಜ್ಯ ಮಟ್ಟದ ವಿಚಾರ ಸಂಕಿರಣ




ಮಂಗಳೂರು, ಫೆ.27: ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರು ದೇಶದ ಹಲವು ಕೈಗಾರಿಕೆಗಳನ್ನು ನಾಶ ಮಾಡಿದರು. ಈಗ ವಿಶ್ವವಾಣಿಜ್ಯ ಒಪ್ಪಂದದ ಬಳಿಕ ಅಮೆರಿಕದ ಗುಲಾಮಗಿರಿಯತ್ತ ನಾವು ಸಾಗುತ್ತಿದ್ದೇವೆ. ಪ್ರಜಾಪ್ರಭುತ್ವದ ಪ್ರತಿಗಾಮಿ ಶಕ್ತಿಗಳು ವಿಜೃಂಭಿಸುತ್ತಿವೆ. ರಾಜರ ಪ್ರಭುತ್ವ ತರಲು ಹವಣಿಸುತ್ತಿವೆ. ಇಂತಹ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ದಲಿತರು, ನೋವುಂಡವರ ಧ್ವನಿಯಾಗಬೇಕು ಎಂದು ಖ್ಯಾತ ಚಿಂತಕ, ಅಂಕಣಕಾರ ಶಿವಸುಂದರ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.


ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಾವೇಶದ ಅಂಗವಾಗಿ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ರವಿವಾರ ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.


ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ವಿದ್ಯಾರ್ಥಿ ಶಕ್ತಿ ಮಹತ್ವದ ಪಾತ್ರ ವಹಿಸಿತ್ತು. ಕರ್ನಾಟಕವೂ ಸೇರಿ 9 ರಾಜ್ಯಗಳಲ್ಲಿ ವಿದ್ಯಾರ್ಥಿ ಚಳವಳಿ ಪ್ರಬಲವಾಗಿತ್ತು. ಆದರೆ, 1967ರಲ್ಲಿ ಅದು ತನ್ನ ಅಸಹನೆಯನ್ನು ಪ್ರದರ್ಶಿಸಿತ್ತು. 1991ರ ಬಳಿಕ ವಿದ್ಯಾರ್ಥಿ ಚಳವಳಿ ದೇಶದಲ್ಲಿ ಬಹುತೇಕ ದುರ್ಬಲಗೊಂಡಿವೆ. ದೇಶದ ಸಂವಿಧಾನದ ವೌಲ್ಯಗಳನ್ನು ದುರ್ಬಲಗೊಳಿಸುವ ಶಕ್ತಿಗಳನ್ನು ತಡೆಯುವಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಯೂ ವಿಫಲಗೊಂಡಿವೆ. ಸಂಘ ಪರಿವಾರದ ಶಕ್ತಿಗಳು ದೇಶದಲ್ಲಿ ಮತ್ತೆ ಶ್ರೇಣಿಕೃತ ಸಮಾಜ ವ್ಯವಸ್ಥೆ ಸ್ಥಾಪಿಸುವ ಯತ್ನದಲ್ಲಿವೆ. ಆ ಕಾರಣಕ್ಕಾಗಿ ಭಾರತದ ಸಂವಿಧಾನವನ್ನು ಬದಲಾಯಿಸುವ ಇಂಗಿತ ಹೊಂದಿವೆ. ಇನ್ನೊಂದೆಡೆ ಜಾಗತೀಕರಣದ ವಿಷ ವರ್ತುಲ ದೇಶದ ಜನಸಾಮಾನ್ಯರ ನಡುವೆ ಆರ್ಥಿಕ ಕಂದರ ನಿರ್ಮಿಸಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.


ಕರ್ನಾಟಕ ಬಜೆಟ್ 85 ಸಾವಿರ ಕೋಟಿ ರೂ.ಗಳಾದರೆ ಅಂಬಾನಿ ಸಹೋದರರ ಆದಾಯ ಅದಕ್ಕಿಂತ ಮೂರುವರೆ ಪಟ್ಟು ಹೆಚ್ಚು. ಬಳ್ಳಾರಿ ಜಿಲ್ಲೆಯೊಂದರಲ್ಲೇ 6,500 ಎಕರೆ ಭೂಮಿಯನ್ನು ಬೃಹತ್ ಕಂಪೆನಿಗಳಿಗೆ ನೀಡಲಾಗಿದೆ. ಸಾಚಾರ್, ರಂಗನಾಥ ಮಿಶ್ರ ವರದಿಯಲ್ಲಿ ತಿಳಿಸಿದಂತೆ ದೇಶದ ಮುಸಲ್ಮಾನರ, ದಲಿತರ ಸ್ಥಿತಿ ಸ್ವಾತಂತ್ರ ನಂತರದ ದಶಕಗಳಲ್ಲಿ ಸುಧಾರಣೆಯಾಗಲಿಲ್ಲ. ಸಂವಿಧಾನದ ಜಾತ್ಯತೀತ ವೌಲ್ಯ ವಾಸ್ತವದಲ್ಲಿ ಅನುಷ್ಠಾನ ಗೊಂಡಿಲ್ಲ. ಮಹಿಳೆಯರು, ಆದಿವಾಸಿ ಗಳು, ದಲಿತರ ಮೇಲಿನ ದೌರ್ಜನ್ಯ, ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದೆ. ಕಳೆದ ಒಂದು ವರ್ಷದಲ್ಲಿ ಪರೋಕ್ಷ ತೆರಿಗೆ ಎರಡೂವರೆ ಲಕ್ಷ ಕೋಟಿ ರೂ. ಹೆಚ್ಚಾಗಿದೆ. ಇನ್ನೊಂದು ಕಡೆ ನಾಲ್ಕು ಬೃಹತ್ ಕಂಪೆನಿಗಳಿಗೆ ಐದುವರೆ ಲಕ್ಷ ಕೋಟಿ ರೂ. ರಿಯಾಯಿತಿ ನೀಡಲಾಗಿದೆ. ಇದು ಕಲ್ಯಾಣ ರಾಜ್ಯದ ಮಾದರಿಯಲ್ಲ ಎಂದು ಶಿವಸುಂದರ್ ಟೀಕಿಸಿದರು.


ಚಿಂತಕ ಪಟ್ಟಾಭಿರಾಮ ಸೋಮಯಾಜಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ನುಸುಳಿರುವ ಜಾಗತೀಕರಣ, ಕೋಮುವಾದದೊಂದಿಗೆ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಿತಾಸಕ್ತಿಗಳ ವಿರುದ್ಧ ವಿದ್ಯಾರ್ಥಿಗಳು ಜಾಗೃತರಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಎಫ್‌ಐ ರಾಷ್ಟ್ರೀಯ ಸಲಹಾ ಸಮಿತಿ ಅಧ್ಯಕ್ಷ ಅನೀಸ್ ಅಹ್ಮದ್ ದಿಕ್ಸೂಚಿ ಭಾಷಣ ಮಾಡಿದರು. ಸಿಎಫ್‌ಐ ರಾಜಾಧ್ಯಕ್ಷ ಮುಹಮ್ಮದ್ ಶಾಕಿರ್ ಅಧ್ಯಕ್ಷತೆ ವಹಿಸಿದ್ದರು. ಸಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ಯೂಸುಫ್ ಉಪಸ್ಥಿತರಿದ್ದರು.

‘ಭಯೋತ್ಪಾದನೆಯ ಕಟ್ಟು ಕಥೆಗಳು’
ಭಯೋತ್ಪಾದನೆಗೆ ಸಂಬಂಧಿಸಿದಂತೆ ಮುಸಲ್ಮಾನರ ವಿರುದ್ಧ ಹೆಣೆಯಲಾದ ಕಟ್ಟುಕಥೆಗಳ ವಾಸ್ತವಗಳು ಇದೀಗ ಬಯಲಾಗುತ್ತಿದೆ. ಪ್ರಪಂಚದ ಎಲ್ಲ ಭಯೋತ್ಪಾದನಾ ಘಟನೆಗಳಿಗೆ ಮುಸಲ್ಮಾನರನ್ನೇ ಗುರಿಯಾಗಿಸಿ ಕಥೆಗಳನ್ನು ಸೃಷ್ಟಿಸಲಾಗಿದೆ. ಆದರೆ, ವಾಸ್ತವವಾಗಿ ಭಯೋತ್ಪಾದನೆಗೆ ಪ್ರಾಚೀನ ಇತಿಹಾಸ ಇದೆ. ವಿವಿಧ ಆಯಾಮಗಳು ಇವೆ. ಮಾಲೆಗಾಂವ್ ಸ್ಪೋಟದಲ್ಲಿ ಬಹಿರಂಗಗೊಂಡ ಅಭಿನವ ಭಾರತ್‌ನ ‘ಹಿಂದುತ್ವ ಭಯೋತ್ಪಾದನೆ’ಯಿಂದ ಭಯೋತ್ಪಾದನೆಯ ನಿಜ ಬಣ್ಣ ಬಯಲಿಗೆಳೆಯಲು ಸಾಧ್ಯವಾಗಿದೆ ಎಂದು ಚಿಂತಕ ಡಾ. ಶ್ರೀಧರ್ ತಿಳಿಸಿದರು.


ಸಂಘಪರಿವಾರ- ಇಸ್ರೇಲ್ ನಂಟು: ಅಭಿನವ ಭಾರತ ಸಂಘಟನೆ ಇಸ್ರೇಲ್ ಜತೆ ಸಂಪರ್ಕ ಹೊಂದಿದೆ. ಇಸ್ರೇಲ್‌ನಿಂದ ಭಾರತದ ಯೋಧರು ತರಬೇತಿ ಪಡೆಯಬೇಕು ಎಂಬ ಆಶಯವನ್ನು ಸಂಘ ಪರಿವಾರ ಹೊಂದಿದೆ. ಈ ಅಂಶಗಳಿಂದಾಗಿ ಸಂಘ ಪರಿವಾರ-ಇಸ್ರೇಲ್ ಪರಸ್ಪರ ನಂಟು ಹೊಂದಿರುವುದು ತಿಳಿದು ಬರುತ್ತದೆ. ಇದರಿಂದಾಗಿ ಜಾಗತಿಕ ಭಯೋತ್ಪಾದನೆ ಯನ್ನು ವಿಸ್ತರಿಸಲೂ ಸಾಧ್ಯವಿದೆ ಎಂದು ಡಾ.ಶ್ರೀಧರ್ ತಿಳಿಸಿದರು.


ಕಾನೂನಿನಿಂದ ಭಯೋತ್ಪಾದನ ನಿಗ್ರಹ ಕಷ್ಟ. ಧರ್ಮಾಂಧತೆ, ಸಾಮ್ರಾಜ್ಯ ಶಾಹಿ ಶಕ್ತಿಗಳನ್ನು ವಿರೋಧಿಸುವ ಚಳವಳಿ ಬಲಗೊಂಡಾಗ ಭಯೋತ್ಪಾದನಾ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂದು ಅವರು ನುಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ