ಕಳೆದ 2006ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ಕೇಸರಿ ಭಯೋತ್ಪಾದನಾ ಜಾಲದ ರೂವಾರಿ ಎಂದು ಗುರುತಿಸಲಾಗಿರುವ ಸ್ವಾಮಿ ಅಸೀಮಾನಂದನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲು ಸಿಬಿಐ ಚಿಂತಿಸಿದೆ. 2006ರ ಸ್ಫೋಟಕ್ಕೆ ಸಂಬಂಧಿಸಿ, 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಕೆಲವು ಕೇಸರಿ ಉಗ್ರರ ವಿಚಾರಣೆ ಸೇರಿದಂತೆ, ಸ್ವಾಮಿ ಅಸೀಮಾನಂದನ ತನಿಖೆಗೆ ಸಿಬಿಐ ಬಯಸಿದೆ ಎಂದು ಮೂಲಗಳು ತಿಳಿಸಿವೆ.
2008ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿಗಳಾದ ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಎಸ್.ಪಿ.ಪುರೋಹಿತ್, ದಯಾನಂದ್ ಪಾಂಡೆ, ಪ್ರವೀಣ್ ಮುತಾಲಿಕ್ ಮತ್ತು ರಾಕೇಶ್ ದಾವಡೆಯನ್ನು ಕೂಡ 2006ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ವಿಚಾರಣೆ ಗೊಳಪಡಿಸಲು ಸಿಬಿಐ ಚಿಂತಿಸಿದೆ ಎಂದು ಮೂಲಗಳು ಹೇಳಿವೆ.
ಈ ಸಂಬಂಧ ನ್ಯಾಯಾಲಯದ ಅನುಮತಿ ಪಡೆದ ಬಳಿಕ ತನಿಖೆ ನಡೆಸಲಾಗುವುದು ಎಂದು ಸಿಬಿಐ ಮೂಲವೊಂದು ತಿಳಿಸಿದೆ. ಸ್ವಾಮಿ ಅಸೀಮಾನಂದನನ್ನು ವಶಕ್ಕೆ ತೆಗೆದು ಕೊಂಡು ವಿಚಾರಣೆ ನಡೆಸಬೇಕಾಗಿದೆ. ಅದಕ್ಕಾಗಿ ಪಂಚ್‌ಕುಲ ನ್ಯಾಯಾಲಯದಿಂದ ಅನುಮತಿ ಯನ್ನು ಪಡೆಯಬೇಕಾಗಿದೆ.
ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪಂಚ್‌ಕುಲ ನ್ಯಾಯಾಲಯವು ಆತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ವಶಕ್ಕೊಪ್ಪಿಸಿದೆ. 2008ರ ಮಾಲೆಗಾಂವ್ ಸ್ಫೋಟ ಆರೋಪಿಗಳು ಸ್ಫೋಟದಲ್ಲಿ ತಮ್ಮ ಪಾತ್ರವನ್ನು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಾಮಿ ಅಸೀಮಾನಂದನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವುದು ಅನಿವಾರ್ಯವಾಗಿದೆ ಎಂದು ಹಿರಿಯ ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಸೀಮಾನಂದ ಇತ್ತೀಚೆಗೆ ಸಿಬಿಐನಿಂದಲೇ ಬಂಧನಕ್ಕೊಳಪಟ್ಟಿದ್ದನು. 2006ರ ಮಾಲೆಗಾಂವ್ ಸ್ಫೋಟದಲ್ಲಿ ಕೇಸರಿ ಉಗ್ರರ ಪಾತ್ರವಿದ್ದ ಬಗ್ಗೆ ಅಸೀಮಾನಂದ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾನೆ. 2006ರ ಮಾಲೆಗಾಂವ್ ಸ್ಫೋಟದಲ್ಲಿ ಆರೆಸ್ಸೆಸ್ ಪ್ರಚಾರಕ, ಕೊಲೆಯಾಗಿರುವ ಸುನೀಲ್ ಜೋಶಿಯ ಪ್ರಮುಖ ಪಾತ್ರವಿದೆ ಎಂಬುದಾಗಿ ಅಸೀಮಾನಂದ ತನ್ನ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾನೆ.
ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದ ಈ ಸ್ಫೋಟದಲ್ಲಿ 35 ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದರು. ಪ್ರಜ್ಞಾ ಸಿಂಗ್, ಪುರೋಹಿತ್, ಮುತಾಲಿಕ್, ಧಾವಡೆಕರ್ ಮತ್ತು ಪಾಂಡ್ಯ ಮಾತ್ರವಲ್ಲದೆ, ಅಜಯ್ ರಾಹಿರ್ಕರ್, ಶಿವನಾರಾಯಣ ಕಾಲ್ಸಂಗ್ರ, ಶ್ಯಾಮ್ ಶಾಹು, ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಜಗದೀಶ್ ಮತ್ತು ಸುಧಾಕರ್ ಚತುರ್ವೇದಿ ಮುಂತಾದ ವರನ್ನೂ ಸಿಬಿಐ ತನಿಖೆಗೊಳಪಡಿಸಲಿದೆ.
ಇವರೆಲ್ಲ ರನ್ನೂ 2008ರ ಸೆಪ್ಟಂಬರ್ 29ರಂದು ನಡೆದ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಎಟಿಎಸ್ ಬಂಧಿಸಿದೆ. ಈ ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿ, ಹಲವು ಮಂದಿ ಗಾಯ ಕ್ಕೊಳಗಾಗಿದ್ದರು. ಇವರೆಲ್ಲರ ಬಂಧನ ಭಯೋತ್ಪಾದನಾ ಜಾಲದ ಕುರಿತಂತೆ ಇದ್ದ ಪೂರ್ವಾಗ್ರಹಗಳ ಬದಲಾವಣೆಗೆ ಮಹತ್ವದ ದಿಕ್ಕು ತೋರಿಸಿತು.
ಮುಂಬೈ ದಾಳಿಯಲ್ಲಿ ಮಡಿದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಮೊತ್ತ ಮೊದಲ ಬಾರಿಗೆ ಕೇಸರಿ ಭಯೋತ್ಪಾದನಾ ಜಾಲವನ್ನು ಬಯಲಿಗೆಳೆದಿದ್ದರು. ಅಲ್ಲಿವರೆಗೂ ಸ್ಫೋಟ ಚಟುವಟಿಕೆಗಳೆಲ್ಲವೂ ಮುಸ್ಲಿಂ ಭಯೋತ್ಪಾದಕರ ಕತ್ಯವೆಂದು ಪರಿಗಣಿಸಿ, ಪ್ರತಿ ಸ್ಫೋಟದ ಸಂದರ್ಭವೂ ಅಮಾಯಕ ಮುಸ್ಲಿಮರನ್ನು ಬಂಧಿಸಿ ಹಿಂಸಿಸಲಾಗುತಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ