ಸೋಮವಾರ, ಜನವರಿ 31, 2011

ಚರ್ಚ್ ದಾಳಿ........ ಸೋಮಶೇಖರ್ ಆಯೋಗದ ವರದಿ .....: ಜನಾಭಿಪ್ರಾಯ

ಯಾರಿಗಿಷ್ಟ, ಯಾರಿಗೆ ಕಷ್ಟ ?
ಚರ್ಚ್ ಮೇಲಿನ ದಾಳಿಯ ಬಗ್ಗೆ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಆಯೋಗದ ವರದಿ ಬಗ್ಗೆ ಆಯ್ದ ಅಭಿಪ್ರಾಯ ಇಲ್ಲಿದೆ.
ನ್ಯಾಯವನ್ನು ನಿರೀಕ್ಷಿಸುತ್ತಿರುವ ಜನರಿಗೆ ಇಂತಹ ವರದಿಯಿಂದ ಭ್ರಮನಿರಸನವಾಗಿದೆ. ಆದುದರಿಂದ ಇದರ ತನಿಖೆಯನ್ನು ಸಿಬಿಐಗೆ ಒಪ್ಪಿಸಲಿ.
ಇಲ್ಯಾಸ್ ಮುಹಮ್ಮದ್ ತುಂಬೆ
ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ
ಬಲತ್ಕಾರದಿಂದಾಗಲಿ, ಆಮಿಷಕ್ಕೊಳಗಾಗಿ ಆಗಲಿ ಮತಾಂತರ ತಪ್ಪು. ಇದೇ ಕಾರಣದಿಂದ ದಾಳಿ ನಡೆದಿದೆ. ಅನಗತ್ಯ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎಂಬುದನ್ನು ವರದಿ ಉಲ್ಲೇಖಿಸಿದೆ. ವರದಿ ಸಹಜವಾಗಿದೆ.
ಪ್ರದೀಪ ಕುಮಾರ ಕಲ್ಕೂರ
ಕನ್ನಡ ಸಾಹಿತ್ಯ ಪರಿಷತ್ ದ.ಕ.ಜಿಲ್ಲಾ ಅಧ್ಯಕ್ಷ

ಇಂತಹ ವರದಿಯನ್ನು ಒಪ್ಪಲು ಸಾಧ್ಯವೇ? ಸೋಮಶೇಖರ್ ಸಿದ್ಧಪಡಿಸಿರುವ ವರದಿಯೇ ಅಲ್ಪಸಂಖ್ಯಾತರ ಮೇಲೆ ನಡೆದಿರುವ ಮತ್ತೊಂದು ದಬ್ಬಾಳಿಕೆ ಎನ್ನಬಹುದು.
ಐವನ್ ಡಿಸೋಜಾ, ಕಾಂಗ್ರೆಸ್ ನಾಯಕ
ಆಮಿಷ ಹಾಗೂ ಬಲವಂತದಿಂದ ಮತಾಂತರ ನಡೆಯುತ್ತಿದೆ ಎಂಬುದನ್ನು ಆಯೋಗ ಒಪ್ಪಿದೆ. ಸತ್ಯ ಈಗಲಾದರೂ ಹೊರ ಬಂದಿದೆ. ಇದನ್ನು ಓಟಿನ ರಾಜಕಾರಣಕ್ಕಾಗಿ ವಿರೋಧಿಸಿದರೆ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಮತಾಂತರದ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿ ಆಗಲೇಬೇಕು.
ಸತ್ಯಜಿತ್ ಸುರತ್ಕಲ್, ಬಿಜೆಪಿ ನಾಯಕ
ಸಂಪೂರ್ಣ ಗೊಂದಲಮಯ ವರದಿ. ಭ್ರಷ್ಟರ ಸರಕಾರ ರಚಿಸಿದ ಆಯೋಗವು ಭ್ರಷ್ಟ ವರದಿಯನ್ನೇ ನೀಡಿದೆ. ಈ ವರದಿಯಲ್ಲಿರುವ ಬಹಳಷ್ಟು ವಿಷಯಗಳ ಸ್ವಯಂ ಕಲ್ಪಿತ ವಿಚಾರಣೆ ಎಂಬುದಕ್ಕೆ ಅರ್ಥವೇ ಇಲ್ಲದಂತಾಗಿದೆ.
ಅಲಿಹಸನ್, ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ
ಇದು ಸರಿಯಾದ ವರದಿ ಅಲ್ಲ. ಒತ್ತಡಕ್ಕೆ ಮಣಿದು ಸಿದ್ಧಪಡಿಸಿದ ವರದಿ ಎಂಬುದರಲ್ಲಿ ಸಂಶಯವೇ ಇಲ್ಲ. ಇದೇ ಸೋಮಶೇಖರ ಆಯೋಗ ಸಲ್ಲಿಸಿದ ಮಧ್ಯಂತರ ವರದಿಗೂ ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆಯೋಗಗಳು ರಚನೆ ಮಾಡುವುದೇ ಆಡಳಿತರೂಢರ ಅನುಕೂಲಕ್ಕೆ ತಕ್ಕಂತೆ ವರದಿಗಳನ್ನು ಸಿದ್ಧಪಡಿಸುವುದು ಎಂಬುದನ್ನು ಈ ಆಯೋಗ ಮತ್ತೊಮ್ಮೆ ಸಾಬೀತು ಪಡಿಸಿದೆ. ಬಿಜೆಪಿಯ ಹಿಂದೆ ಬಿದ್ದಿರುವ ಅಲ್ಪ ಸಂಖ್ಯಾತರು ಒಮ್ಮೆ ಯೋಚಿಸಬೇಕಾಗಿದೆ.
ರೊಲ್ಪಿ ಡಿಕೋಸ್ತ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ
ಬಜರಂಗದಳದ ಅಂದಿನ ಸಂಚಾಲಕ ಮಹೇಂದ್ರ ಕುಮಾರ್‌ರವರೇ ದಾಳಿ ನಡೆಸಿದ್ದು ನಾವು ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವಾಗ ಬಜರಂಗದಳದ ಬಾಗೇದಾರಿಕೆ ಇಲ್ಲ ಎಂದು ಹೇಳಿರುವ ವರದಿ ಪೂರ್ವಗೃಹ ಪೀಡಿತ ಎನ್ನದಿರಲಾಗುತ್ತದೆಯೆ? ಇವರಲ್ಲ ಎಂದಾದರೆ ದಾಳಿ ನಡೆಸಿದ್ದು ಯಾರು? ದಾಳಿ ಯಾಕೆ ನಡೆಯಿತು?
ಹನುಮಂತ ಕಾಮತ್ , ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ
ದಾಳಿ ಸಂಘ ಪರಿವಾರ ಅಥವಾ ಬಿಜೆಪಿಗೆ ಗೊತ್ತಾಗಿ ನಡೆದುದಲ್ಲ. ಇದರಲ್ಲಿ ಮಾಸ್ಟರ್ ಪ್ಲಾನ್ ಇಲ್ಲ ಎಂಬ ಸತ್ಯವನ್ನು ಸೋಮಶೇಖರ್ ಆಯೋಗದ ವರದಿ ತಿಳಿಸಿದೆ. ಮತಾಂತರವನ್ನು ತಡೆಯಲು ಆಗದೆ ವ್ಯಕ್ತಪಡಿಸಿದ ಪ್ರತಿಕ್ರಿಯೆ ಇದು. ಅನ್ಯಾಯದ ವಿರುದ್ಧ ಹೋರಾಟ. ಇದನ್ನು ಕ್ರೈಸ್ತರು ಅರ್ಥಮಾಡಿಕೊಳ್ಳಬೇಕು. ಮತಾಂತರಕ್ಕೆ ಕಡಿವಾಣ ಹಾಕಲೇಬೇಕು.
ರಾಜಗೋಪಾಲ್ ರೈ , ಜಿಲ್ಲಾ ಬಿಜೆಪಿ ಮಾಧಮ ಪ್ರಮುಖ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ