ಮಂಗಳೂರು: ಸಮಾಜೋತ್ಸವ ಎಂದರೆ ಅದು ಹಿಂದೂಗಳ ಹಿತಕ್ಕಾಗಿ ಆಗಬೇಕು. ಆದರೆ ಆದಿತ್ಯ ವಾರ ನಡೆದ ಸಮಾಜೋತ್ಸವವು ಕೇವಲ ಓಟಿಗಾಗಿ ಮಾತ್ರವೇ ಹೊರತು ಹಿಂದೂಗಳ ಉದ್ಧಾರ ಕ್ಕಾಗಿ ಅಲ್ಲ ಎಂದಿದ್ದಾರೆ ಮಾಜಿ ರಾಜ್ಯ ಸಭಾ ಸದಸ್ಯ ಜನಾರ್ದನ ಪೂಜಾರಿ.
ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪೂಜಾರಿ ದೇವಸ್ಥಾನಗಳಲ್ಲಿ ದಲಿತರು, ಹಿಂದುಳಿದವರು, ಮೇಲ್ಜಾತಿ ಎಂದು ಬೇರೆ ಪಂಕ್ತಿ ಮಾಡಿ ಊಟಕ್ಕೆ ಕುಳಿತುಕೊಳ್ಳುವಂತಹ ಪದ್ದತಿ ಹಿಂದೂ ಸಮಾಜದಲ್ಲಿದೆ. ಇಂತಹ ಪದ್ದತಿಯನ್ನು ಕಿತ್ತೆಸೆದು ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ನಿರ್ಣಯ ಸಮಾಜೋತ್ಸವದಲ್ಲಿ ತರುವ ತಾಕತ್ತು ಆಯೋಜಕರಿಗೆ ಇದೆಯೇ ಎಂದು ಪ್ರಶ್ನಿಸಿದ ಪೂಜಾರಿ ಕುದ್ರೋಳಿ ದೇವಸ್ಥಾನದಲ್ಲಿ ಎಲ್ಲಾ ಜಾತಿಯವರು ಒಟ್ಟಿಗೆ ಕುಳಿತು ಊಟ ಮಾಡುವ ಪದ್ಧತಿ ಇದ್ದು ಇದರಿಂದ ನಾವೇನು ಸಾಯಲಿಲ್ಲ ಎಂದು ಕಟಕಿಯಾಡಿದ್ದಾರೆ.
ದೇಶದಲ್ಲಿ ಕೇವಲ ೧೩ ಶೇಕಡಾ ಅಲ್ಪಸಂಖ್ಯಾತರಿದ್ದಾರೆ. ಕಾಂಗ್ರೆಸ್ ಪಕ್ಷ ಇವರೆಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುತ್ತಿದ್ದು ಇದನ್ನು ಓಟಿಗಾಗಿ ತುಷ್ಟೀಕರಣ ಎಂದು ಸಂಘ ಪರಿವಾರ ಹೇಳುತ್ತಿದೆ. ಆದರೆ ಓಟಿಗಾಗಿ ೧೩ ಶೇಕಡಾ ಇರುವ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ಪೂಜಾರಿ ಸಂಘ ಪರಿವಾರ ಓಟಿಗಾಗಿ ಹಿಂದೂಗಳ ತುಷ್ಟೀಕರಣ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಮುಸ್ಲಿಂ ಪರ ನೀತಿಗಳನ್ನು ಜಾರಿಗೆ ತರುವ ಮೂಲಕ ಜಿನ್ನಾ ಮಾದರಿಯ ಆಡಳಿತ ಜಾರಿಗೆ ತರುತ್ತಿದೆ. ರಾಹುಲ್ ಗಾಂಧಿ ಶರೀರದಲ್ಲಿ ಜಿನ್ನಾ ಭೂತ ಕುಣಿಯುತ್ತಿದೆ ಎಂದು ಹಿಂದೂ ಸಮಾಜೋತ್ಸವದಲ್ಲಿ ತೊಗಾಡಿಯಾ ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ ಪೂಜಾರಿ, ಕೇಂದ್ರದಲ್ಲಿ ಎನ್.ಡಿ.ಎ. ಆಡಳಿತಲ್ಲಿದ್ದ ಸಂದರ್ಭದಲ್ಲಿ ಅಡ್ವಾಣಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದರು. ಅವರ ಮೈಯಲ್ಲಿ ಜಿನ್ನಾ ಭೂತ ಇತ್ತೇ ಎಂಬುದನ್ನು ಅವರ ಬಳಿಯೇ ತೊಗಾಡಿಯಾ ಪ್ರಶ್ನಿಸಬೇಕಾಗಿದೆ ಎಂದರು.
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪರ ವಿರುದ್ಧ ೧೬೦೦ಕ್ಕೂ ಹೆಚ್ಚು ಪುಟಗಳ ದಾಖಲೆಯನ್ನು ತಯಾರಿಸಿರುವ ಇಬ್ಬರು ನ್ಯಾಯವಾದಿಗಳು ೧೮ ಚಾರ್ಜ್‌ಶೀಟ್‌ಗಳನ್ನು ಹಾಕಿ ಖಾಸಗಿಯಾಗಿ ಕೇಸು ದಾಖಲಿಸಲು ಅವಕಾಶ ನೀಡುವಂತೆ ರಾಜ್ಯಪಾಲರ ಅನುಮತಿ ಕೇಳಿದ್ದಾರೆ. ಹಿಂದೆ ಸುಪ್ರಿಂಕೋರ್ಟ್‌ನ ನ್ಯಾಯಾಧೀಶರಾಗಿದ್ದ ಸಂತೋಷ್ ಹೆಗ್ಡೆ ಸಹಿತ ಐವರು ನ್ಯಾಯಾಧೀಶರು ನೀಡಿದ ಆದೇಶದಂತೆ ಮುಖ್ಯಮಂತ್ರಿ ವಿರುದ್ಧ ಖಾಸಗಿಯಾಗಿ ಕೇಸು ದಾಖಲಿಸಲು ರಾಜ್ಯಪಾಲರಿಗೆ ಅಧಿಕಾರ ನೀಡಿದ್ದಾರೆ. ಇದನ್ನು ಪರಿಗಣಿಸಿ ಮುಖ್ಯಮಂತ್ರಿ ವಿರುದ್ಧ ಕೇಸು ದಾಖಲಿಸಲು ಮುಂದಾಗಿರುವ ನ್ಯಾಯವಾದಿಗಳಿಗೆ ರಾಜ್ಯಪಾಲರು ಅನುಮತಿ ನೀಡಬೇಕೆಂದು ಪೂಜಾರಿ ಒತ್ತಾಯಿಸಿದ್ದಾರೆ.
ಯಡ್ಡಿಗಿಂತ ಅಶ್ರಫ್ ಬೆಟರ್
ಮುಖ್ಯಮಂತ್ರಿ ಯಡಿಯೂ ರಪ್ಪರ ವಿರುದ್ಧ ಭ್ರಷ್ಟಾಚಾರದ ಸಾಕಷ್ಟು ಆರೋಪಗಳು ಇದೆ. ಆದರೆ ಅವರು ಅದನ್ನು ನಿರಾಕರಿಸುತ್ತಲೇ ಬಂದಿ ರುವುದಲ್ಲದೆ ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಲು ಮುಂದಾಗಿಲ್ಲ. ಆದರೆ ಮಾಜಿ ಮೇಯರ್ ಅಶ್ರಫ್ ವಿರುದ್ಧ ತಾನು ಯಾವುದೇ ರೀತಿಯ ಆರೋಪವನ್ನು ಮಾಡದೆ ಅವರ ಮೇಯರ್ ಅವಧಿಯಲ್ಲಿನ ಆಡಳಿತವನ್ನು ಕೊಂಡಾಡಿದ್ದರೂ ಅವರು ತಮ್ಮನ್ನು ತಾವೇ ಭ್ರಷ್ಟರೆಂದು ಕಲ್ಪಿಸಿಕೊಂಡು ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನು ಗಮನಿಸಿದಾಗ ಮುಖ್ಯಮಂತ್ರಿಯವರಿಗಿಂತ ಅಶ್ರಫ್‌ರವರು ಬೆಟರ್ ಎಂದು ಪೂಜಾರಿ ಅಶ್ರಫ್‌ರ ರಾಜೀನಾಮೆ ಪ್ರಹಸನವನ್ನು ಪ್ರಸ್ತಾಪಿಸಿದರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ