ಮಂಗಳೂರು: ಅನ್ಯಾಯದ ವಿರುದ್ಧ ಒಂಟಿಯಾಗಿ ಹೋರಾಟ ನಡೆಸುವ ಮೂಲಕ ಬಿಲ್ಡರ್‌ಗಳ ಸಹಿತ ಭೂಮಾಫಿಯಾದಿಂದ ಹಗೆತನವನ್ನು ಕಟ್ಟಿ ಕೊಂಡಿದ್ದ ಮಾಜಿ ಸೈನಿಕ, ಹಾಲಿ ರಿಕ್ಷಾ ಚಾಲಕನಾಗಿರುವ ರೋನಾಲ್ಡ್ ಪೌಲ್ ಎಂಬವರನ್ನು ನಿನ್ನೆ ಹಾಡಹಗಲೇ ಬರ್ಬರ ರೀತಿಯಲ್ಲಿ ಕೊಲೆ ಮಾಡಲಾಗಿದೆ.
ಶಕ್ತಿನಗರ ಸಮೀಪದ ರಾಜೀವ್ ನಗರದ ಮಾಜಿ ಸೈನಿಕ ರೋನಾಲ್ಡ್ ಪೌಲ್ (೫೫) ಈ ಮಧ್ಯೆ ಸರಕಾರಿ ಭೂಕಬಳಿಕೆ, ತನಗಾಗುತ್ತಿರುವ ಅನ್ಯಾಯದ ವಿರುದ್ಧ ಒಂಟಿಯಾಗಿ ಹೋರಾಟ ನಡೆಸುತ್ತಾ ಬಂದಿದ್ದು ಇದರಿಂದಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.
ಒಂದೂವರೆ ವರ್ಷದ ಹಿಂದೆ ಮಾಹಿತಿ ಹಕ್ಕು ಕಾಯ್ದೆಯಡಿ ಶಾಂತಿನಗರದ ಸರಕಾರಿ ಭೂಮಿಯಲ್ಲಿ ಮನೆಕಟ್ಟಿ ಮಾರಾಟ ಮಾಡ ಲಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೌಲ್ ಪಾಲಿಕೆಗೆ ದೂರು ನೀಡಿ ಮನೆಗಳನ್ನು ಕೆಡವಿ ಹಾಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಸಂದರ್ಭದಲ್ಲಿ ಪೌಲ್ ಮೇಲೆಯೂ ಸುಳ್ಳು ಹೇಳಿ ಜಾಗವನ್ನು ಮಾರಾಟ ಮಾಡಿದ್ದಾರೆನ್ನುವ ಬಗ್ಗೆ ಆರೋಪಗಳೂ ಕೇಳಿ ಬಂದಿ ದ್ದವು. ಯುವತಿಗೆ ವಂಚನೆ ಮಾಡಿದ ಆರೋಪದಲ್ಲಿ ಬಜಪೆ ಠಾಣೆಯಲ್ಲಿಯೂ ಪೌಲ್ ವಿರುದ್ಧ ಕೇಸು ದಾಖಲಾಗಿದ್ದವು. ಮೊದಲ ಪತ್ನಿಯ ಮೇಲೆ ದೈಹಿಕ ದೌರ್ಜನ್ಯ ಮಾಡಿದ ಕೇಸು ಕೂಡಾ ಪೌಲ್ ಮೇಲಿದ್ದವು. ಪೊಲೀ ಸರನ್ನೂ ಬಿಡದಿದ್ದ ಪೌಲ್ ಅವರ ಮೇಲೆಯೂ ಕೇಸು ಹಾಕಿ ತಾನೇ ಸ್ವತ: ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದರು.
ನಿನ್ನೆ ಸಂಜೆ ಮನೆಯಿಂದ ರಿಕ್ಷಾದಲ್ಲಿ ನೀತಿ ನಗರಕ್ಕೆ ಬಂದಿದ್ದ ಪೌಲ್ ಅಲ್ಲಿರುವ ಕಮಲಾಕ್ಷ ಎಂಬ ವರ ಅಂಗಡಿಯಲ್ಲಿ ಕುಳಿತಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ನೆರೆಯ ವ್ಯಕ್ತಿ ಯೊಬ್ಬ ತಲ್ವಾರಿನಿಂದ ಕೈಗೆ ಕಡಿದು ಬಳಿಕ ತಲೆಗೆ ಕಲ್ಲೊಂದನ್ನು ಹಾಕಿ ಭೀಕರ ರೀತಿಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣ ಇನ್ನೂ ಸಿಕ್ಕಿಲ್ಲ. ರೋನಾಲ್ಡ್‌ಗೆ ಮೊದಲ ವಿಚ್ಛೇದಿತ ಪತ್ನಿಯಿಂದ ಒಂದು ಮಗುವಿದ್ದು ಎರಡನೇ ಪತ್ನಿಯಿಂದ ಎಂಟು ವರ್ಷದ ಹೆಣ್ಣು ಮಗುವಿದೆ.
ನೆರೆಮನೆಯಾತನೇ ಆರೋಪಿ
ಸರಕಾರಿ ಜಾಗದಲ್ಲಿ ಮನೆಕಟ್ಟಿ ವಾಸಿಸುವವರ ವಿರುದ್ಧವೂ ಪೌಲ್ ಹೋರಾಟ ನಡೆಸುತ್ತಿದ್ದರೆನ್ನಲಾಗಿದೆ. ಇದು ಅಲ್ಲಿನ ನಿವಾಸಿಗರ ವಿರೋಧಕ್ಕೂ ಕಾರಣವಾಗಿತ್ತು ಎಂದು ಸ್ಥಳೀಯರು ದೂರಿದ್ದಾರೆ. ಆದರೂ ಅವರ ವಿರೋಧವನ್ನು ಗಣನೆಗೆ ತೆಗೆದು ಕೊಳ್ಳದ ಪೌಲ್ ತಮ್ಮ ಒಂಟಿ ಹೋರಾಟವನ್ನು ಮುಂದುವರಿಸಿದ್ದರು. ಇದೇ ದ್ವೇಷದಲ್ಲಿ ಅವರ ನೆರೆಮನೆಯಾತನೇ ಆಗಿರುವ ಸಂತೋಷ್ ಎಂಬಾತ ನಿನ್ನೆ ಸಂಜೆ ವೇಳೆ ಅಂಗಡಿಯ ಎದುರು ರಿಕ್ಷಾ ಇಟ್ಟು ಕುಳಿತಿದ್ದ ಪೌಲ್‌ರನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ನಂತರ ಶಕ್ತಿನಗರಕ್ಕೆ ಬಂದಿದ್ದ ಹಂತಕ ಆನಂತರ ಮೊಬೈಲ್ ಸ್ವಿಚ್‌ಅಫ್ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ