ಶುಕ್ರವಾರ, ಡಿಸೆಂಬರ್ 03, 2010

ಹರೇಕಳದಲ್ಲಿ ಕಾಲೇಜು ಆರಂಭಿಸಲು ಹಾಜಬ್ಬರಿಂದ ಶಿಕ್ಷಣ ಸಚಿವರಿಗೆ ಮನವಿ

ಮಂಗಳೂರು: ಹರೇಕಳದ ನ್ಯೂಪಡ್ಪುವಿನಲ್ಲಿ ಇದ್ದ ಪ್ರಾಥಮಿಕ ಶಾಲೆಯನ್ನು ಈಗ ಪ್ರೌಢ ಶಾಲೆಯನ್ನಾಗಿ ವಿಸ್ತರಿಸಲಾಗಿದೆ. ಇಲ್ಲಿ ಪ್ರಥಮ ದರ್ಜೆ ಕಾಲೇಜು ಇಲ್ಲದ ಕಾರಣ ಜನರು ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಕೊಡಿಸಲು ಪರದಾಡುವಂತಾಗಿದೆ. ಇದನ್ನು ಗಮನಿಸಿ ಈ ಪ್ರದೇಶದಲ್ಲೊಂದು ಕಾಲೇಜು ಆರಂಭಿಸಿ ಹೀಗೆಂದು ಮನವಿ ಮಾಡಿದ್ದಾರೆ ಹರೇಕಳ ಹಾಜಬ್ಬ.

ನಿನ್ನೆ ಮಂಗಳೂರಿಗೆ ಬಂದಿದ್ದ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರನ್ನು ಭೇಟಿ ಮಾಡಿದ ಹಾಜಬ್ಬ ಮೇಲಿನ ಮನವಿಯನ್ನು ಮಾಡಿದ್ದಾರೆ. ಶಾಲೆಗೆ ಅಗತ್ಯವಿದ್ದ ಒಂದು ಎಕ್ರೆ ಭೂಮಿಯನ್ನು ಖರೀದಿಸಲಾಗಿದ್ದು ಕಾಲೇಜು ನಿರ್ಮಾಣಕ್ಕಾಗಿ ಒಂದು ಎಕ್ರೆ ಭೂಮಿಯ ಅಗತ್ಯವಿದೆ. ತಾವು ಮನಸ್ಸು ಮಾಡಿ ಭೂಮಿಯನ್ನು ಖರೀದಿಸಿ ಕಾಲೇಜು ನಿರ್ಮಾಣಕ್ಕೆ ಸಹಕರಿಸಬೇಕೆಂದು ಕಳಕಳಿಯಿಂದ ವಿನಂತಿಸಿದರು. ಈ ಸಂದರ್ಭದಲ್ಲಿ ಅವರ ಮನವಿಗೆ ಸ್ಪಂದಿಸಿದ ಕಾಗೇರಿ ಈಗಾಗಲೇ ಆ ಪ್ರದೇಶದಲ್ಲಿ ಕಾಲೇಜಿನ ಅಗತ್ಯವಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಸ್ಥಳವನ್ನು ಹುಡುಕಲಾಗುತ್ತಿದ್ದು ಅದಾದ ಬಳಿಕ ಕಾಲೇಜು ನಿರ್ಮಾಣಕ್ಕೆ ಅಸ್ತು ನೀಡಲಾಗುವುದೆಂದರು. ಇದೇ ವೇಳೆ ಫಲಿತಾಂಶದಲ್ಲಿ ಕುಂಠಿತವಾಗಿರುವ ಬಗ್ಗೆ ಹಾಜಬ್ಬರನ್ನು ಪ್ರಶ್ನಿಸಿದ ಸಚಿವರು ಮುಂದೆ ಅದು ಮರುಕಳಿಸದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ