ಮಂಗಳೂರು: ಯೆಯ್ಯಾಡಿಯ ಶರಬತ್‌ಕಟ್ಟೆ ಎಂಬಲ್ಲಿ ವಾಮಾಚಾರ ತಂತ್ರ ಪ್ರಯೋಗಕ್ಕಾಗಿ ಮೂರು ವರುಷದ ಮಗುವನ್ನು ಬಲಿ ನೀಡಿದ ಮುಖ್ಯ ಆರೋಪಿಯನ್ನು ಮಾನಸಿಕ ಅಸ್ವಸ್ಥ್ಯನನ್ನಾಗಿ ಚಿತ್ರಿಸುವ ಯತ್ನ ನಡೆಯುತ್ತಿದೆ. ಆರೋಪಿ ೨೪ಗಂಟೆಯೊಳಗೆ ಪೊಲೀಸ್ ಠಾಣೆಯಿಂದ ಹೊರಬರುವುದಾಗಿ ಸಾರ್ವಜನಿಕರಿಗೆ ಚಾಲೆಂಜ್ ಹಾಕಿದ್ದರಿಂದ ಅಕ್ರೋಶಿತ ನಾಗರಿಕರು ಠಾಣೆಗೆ ಮುತ್ತಿಗೆ ಹಾಕಿ ಆರೋಪಿ ಕಮಲಾಕ್ಷನನ್ನು ತಮ್ಮ ಕೈಗೆ ಒಪ್ಪಿಸುವಂತೆ ಒತ್ತಾಯಿಸಿದ ಘಟನೆಯೂ ಕದ್ರಿ ಠಾಣೆಯಲ್ಲಿ ನಿನ್ನೆ ಸಂಜೆ ಹೊತ್ತು ನಡೆಯಿತು.
ಗುರುವಾರ ಸಂಜೆಯಿಂದ ಮಗುವನ್ನು ತನ್ನ ಮನೆಯಲ್ಲೇ ಇರಿಸಿಕೊಂಡಿದ್ದ ಹಂತಕ ಮುಂಜಾನೆ ನಾಲ್ಕರ ಸುಮಾರಿಗೆ ಮಲಗಿದ್ದ ಮಗುವನ್ನು ಅದೇ ಸ್ಥಿತಿಯಲ್ಲಿ ಕತ್ತುಹಿಸುಕಿ ಕೊಲೆಗೈದು ಬಳಿಕ ತೋಟದ ತೋಡಿಗೆ ಎಸೆದಿದ್ದಾನೆ.
ಬಿಹಾರ ಮೂಲದ ಧೀರನ್ ಹಾಗೂ ಅಂಜಲಿದೇವಿ ಎಂಬವರ ಪುತ್ರಿ ಪ್ರಿಯಾಂಕ(೩) ಎಂಬ ಬಾಲೆಯೇ ನೆರೆಮನೆಯ ನಿವಾಸಿ ಕಮಲಾಕ್ಷ ಪುರುಷ(೭೫) ಹಾಗೂ ಚಂದ್ರ ಕಲಾ(೩೫) ಎಂಬವರ ವಾಮಾಚಾರಕ್ಕೆ ಬಲಿಯಾಗಿದ್ದಾಳೆ.
ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸಿದ ಘಟನೆಯ ಇನ್ನೋರ್ವ ಆರೋಪಿ ಚಂದ್ರಕಲಾ ಈತನಿಗೆ ಹೆಂಡತಿಯಲ್ಲ. ಈತ ತನ್ನ ಮೊದಲ ಹೆಂಡತಿಯನ್ನು ಇದೇ ರೀತಿ ಕೊಂದಿದ್ದಾನೆ ಎನ್ನುತ್ತಾರೆ ಸ್ಥಳೀಯರು. ಹೀಗಿರುವಾಗ ಆತನಿಗೆ ಆರು ವರ್ಷಗಳ ಹಿಂದೆ ಮರೋಳಿಯ ಚಂದ್ರಕಲಾಳ ಪರಿಚಯವಾಗಿತ್ತು. ತಾನು ಉಡುಪಿಯಲ್ಲಿದ್ದ ವೇಳೆ ಮುಸ್ಲಿಂ ಯುವಕನನ್ನು ಪ್ರೀತಿಸಿ, ಆತನಿಂದ ಮಗುವನ್ನು ಪಡೆದಿದ್ದ ಚಂದ್ರಕಲಾ ಕಮಲಾಕ್ಷನಿಗೆ ಪರಿಚಯವಾಗಿ ಆತನ ಜೊತೆಗೇ ಇದ್ದಾಳೆ. ಆರೋಪಿಗಳು ತಂದೆ-ಮಗಳೆಂದು ಹೇಳಿಕೊಂಡು ತಿರುಗಾಡುತ್ತಿದ್ದರೂ ಅವರ ನಡುವಿನ ಸಂಬಂಧ ಮಾತ್ರ ಎಲ್ಲ ಎಲ್ಲೆಗಳ ಮೀರಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕದ್ರಿ ಠಾಣೆಗೆ ಅಕ್ರೋಶಿತರ ಮುತ್ತಿಗೆ
ಆರೋಪಿ ಕಮಲಾಕ್ಷ ತಾನು ಕೊಲೆ ಮಾಡಿಯೇ ಇಲ್ಲ ಎನ್ನುತ್ತಿದ್ದ ನಾದರೂ, ಆತನ ಪತ್ನಿ ಮಾತ್ರ ನಿನ್ನೆ ಮುಂಜಾನೆ ನನ್ನ ಕಣ್ಣೆದುರೇ ಪತಿ ಮಹಾಶಯ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನುತ್ತಿದ್ದಾಳೆ. ಹೀಗಿದ್ದರೂ ಹಂತಕ ಕಮಲಾಕ್ಷ ಮಾನಸಿಕ ಅಸ್ವಸ್ಥ ಎನ್ನುವುದನ್ನು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಊರವರು ರೊಚ್ಚಿಗೆದ್ದು, ಹಂತಕನನ್ನು ಪೊಲೀಸರು ಬಿಟ್ಟರೆ ತಾವೇ ಆತನನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.ಈ ವೇಳೆ ಉದ್ರಿಕ್ತ ಸ್ಥಿತಿ ನಿರ್ಮಾಣವಾದ ಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ನಿತ್ಯ ಅಂಗನವಾಡಿಗೆ ಹೋಗಿ ಬಂದ ಬಳಿಕ ಪ್ರಿಯಾಂಕ ಕಮಲಾ ಕ್ಷನ ಮನೆಗೆ ಆಡಲು ಹೋಗುತ್ತಿದ್ದಳು. ಸ್ಥಳೀಯ ನಿವಾಸಿಗಳಾದ ಕಾರಣ ಪ್ರಿಯಾಂಕ ಅಲ್ಲಿಗೆ ಆಡಲು ಹೋದರೂ ತಾಯಿ ಏನನ್ನೂ ಹೇಳುತ್ತಿರಲಿಲ್ಲ. ಇದೇ ನೆವನದಲ್ಲಿ ಗುರುವಾರ ಮಧ್ಯಾಹ್ನ ಪ್ರಿಯಾಂಕಾ ಳನ್ನು ಚಂದ್ರಕಲಾ ಕರೆದುಕೊಂಡು ಹೋಗಿದ್ದಳು. ಇದನ್ನು ಅಂಜಲಿ ಗಮನಿಸಿದ್ದಾರೆ. ಆದರೆ ರಾತ್ರಿಯಾದರೂ ಮಗು ಮನೆಗೆ ಬಂದಿರಲಿಲ್ಲ ಇದರಿಂದ ಕಂಗಾಲಾದ ಅಂಜಲಿ, ಕಮಲಾಕ್ಷನ ಮನೆಗೆ ಹೋಗಿ ವಿಚಾರಿಸಿದ್ದರು. ಆದರೆ ಆತ ಮಾತ್ರ ಮಗು ನಮ್ಮ ಮನೆಯಲ್ಲಿಲ್ಲ. ಬೇಕಾದರೆ ಹುಡುಕಿ ಎಂದಿದ್ದ. ಈ ವೇಳೆ ಆತನ ಮನೆ ಹುಡುಕಾಡಿದರೂ ಮಗು ಪತ್ತೆಯಾಗಿರಲಿಲ್ಲ. ಇದರಿಂದ ಆತಂಕಗೊಂಡ ಹೆತ್ತವರು ಊರವರ ಜೊತೆ ಕದ್ರಿ ಠಾಣೆಗೆ ಬಂದು ಮಗು ನಾಪತ್ತೆ ದೂರು ನೀಡಿದ್ದರು.
ಇತ್ತ ಬೆಳಗಾದರೂ ಮಗುವಿನ ಸುಳಿವಿಲ್ಲದ ಕಾರಣ ಊರವರು ಕಮಲಾಕ್ಷನ ಮೇಲೆ ಶಂಕೆ ವ್ಯಕ್ತ ಪಡಿಸಿ ಪೊಲೀಸರಿಗೆ ದೂರು ನೀಡಿ ದರು. ಹೀಗಾಗಿ ಪೊಲೀಸರು ತಮ್ಮ ಭಾಷೆಯಲ್ಲಿ ವಿಚಾರಿಸಿದಾಗಲೂ ಆತ ಬಾಯ್ಬಿಟ್ಟಿರಲಿಲ. ಆದರೆ ಆತನ ಪತ್ನಿ ಮಾತ್ರ ಕೊಲೆ ಮಾಡಿರುವು ದನ್ನು ಒಪ್ಪಿ ತೋಡಿಗೆ ಎಸೆದಿದ್ದ ಮಗುವಿನ ಶವವನ್ನು ತೋರಿಸಿದಳು. ಕಮಲಾಕ್ಷ ಮತ್ತಾತನ ಪತ್ನಿ ಮಗುವನ್ನು ಹತ್ಯೆಗೈದಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅಕ್ರೋಶಗೊಂಡ ಗ್ರಾಮಸ್ಥರು ಕಮಲಾಕ್ಷನ ಮನೆ ಮತ್ತು ಆತ ಪೂಜೆ ಮಾಡುವ ಗುಡಿಯನ್ನು ಪುಡಿಗೈದಿದ್ದಾರೆ.
ಅಲ್ಲಿ ಕ್ಷುದ್ರಶಕ್ತಿಯ ಉಪಾಸನೆ ನಡೆದಿತ್ತೇ?
ಮಗುವನ್ನು ಕೊಲೆ ಮಾಡಿದ್ದು ಕಮಲಾಕ್ಷನೇ ಎನ್ನುವುದು ಖಚಿತವಾಗುತ್ತಿ ರುವಂತೆ ತನಿಖೆ ನಡೆಸಿದ ಪೊಲೀಸರು ಹಂತಕರಿಂದ ಹೊರತಂದ ಕೊಲೆಯ ರಹಸ್ಯ ಇಷ್ಟು. ಪ್ರಿಯಾಂಕಳನ್ನು ಮಧ್ಯಾಹ್ನ ಮನೆಗೆ ಕರೆ ತಂದಿದ್ದ ಚಂದ್ರಕಲಾ ಗಂಡನ ಆಣತಿಯಂತೆ ಮಗುವನ್ನು ರಾತ್ರಿಯ ತನಕ ಮನೆಯ ಎದುರು ಭಾಗದಲ್ಲಿರುವ ನಾಯಿಯ ಗೂಡಿನಲ್ಲಿ ಬಚ್ಚಿಟ್ಟಿದ್ದರು. ಬಳಿಕ ತಡರಾತ್ರಿ ದೈವದ ಎದುರು ಕುಳ್ಳಿರಿಸಿ ಬಳಿಕ ಮಗುವಿನ ಬಾಯಿಗೆ ಪ್ರಸಾದವನ್ನು ಸುರಿದು ಕುತ್ತಿಗೆಯನ್ನು ಕೈಯಿಂದ ಒತ್ತಿ ಹಿಡಿದು ಉಸಿರುಗಟ್ಟಿಸಿ ಹತ್ಯೆ ಮಾಡಿದರು.
ಇಷ್ಟನ್ನು ಮಾಡಿದ್ದು ಕಮಲಾಕ್ಷ ಪುರುಷ ಒಬ್ಬನೇ. ವಾಮಾಚಾರದ ವಿಧಿ, ವಿಧಾನ ಪೂರ್ತಿಗೊಳಿಸಿದ ಬಳಿಕ ಮಗುವಿನ ಶವವನ್ನು ಇಲ್ಲಿಯೇ ಇಟ್ಟರೆ ಆಗದು ಎಂದರಿತ ಹಂತಕರು ಮನೆಯ ಹಿಂಭಾಗದ ತೋಟದಲ್ಲಿನ ಸಣ್ಣ ತೋಡಿಗೆ ಎಸೆದು ಬಂದು ನಿಶ್ಚಿಂತೆಯಿಂದ ಮಲಗಿದ್ದಾರೆ. ಈ ಕೆಲಸವನ್ನು ಗಂಡನೇ ಮಾಡಿದ್ದು ಎಂದು ಚಂದ್ರಕಲಾ ಪೊಲೀಸರ ಮುಂದೆ ತಪ್ಪೊಪ್ಪಿ ಕೊಂಡಿದ್ದಾಳೆ.
ಕೊಲೆ ನಡೆದಿರುವ ಕಮಲಾಕ್ಷ ಮನೆಯಲ್ಲಿ ವಾಮಾಚಾರ ಪ್ರಯೋಗ ನಡೆದಿತ್ತು ಎನ್ನುವುದನ್ನು ಮನೆಯ ಅಂಗಳದಲ್ಲಿನ ದೈವದ ಗುಡಿಯ ಬಳಿ ಕುಂಕುಮ, ದೀಪ, ಹಾಗೂ ಅಲ್ಲಿಯೇ ಒಲೆಯನ್ನು ಉರಿಸಿ ನೈವೇದ್ಯವನ್ನುತಯಾರಿಸಿರುವುದು ಸಾರಿ ಹೇಳುತ್ತದೆ. ನಾಗರಿಕ ಸಮಾಜದಲ್ಲಿ ಇಂದಿಗೂ ಮೂಢನಂಬಿಕೆಯ ಆಚಾರವನ್ನು ಪರಿ ಪಾಲಿಸಿಕೊಂಡು ಏನೂ ಅರಿಯದ ಮುಗ್ಧ ಬಾಲೆಯನ್ನು ಹತ್ಯೆಗೈದಿರುವ ಹೇಯ ಕೃತ್ಯ ನಾಗರಿಕ ಸಮಾಜದ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಮಗು ನಾಪತ್ತೆ ಬಗ್ಗೆ ಗುರುವಾರ ಸಂಜೆಯೇ ಪೊಲೀಸರಿಗೆ ದೂರು ನೀಡಲಾಗಿದೆ ಕಮಲಾಕ್ಷನ ಬಗ್ಗೆ ಶಂಕೆಯನ್ನೂ ವ್ಯಕ್ತ ಪಡಿಸಲಾಗಿದೆ, ಆಗಲೇ ಪೊಲೀಸರು ಕಮಲಾಕ್ಷನನ್ನು ವಿಚಾರಿಸುತ್ತಿದ್ದರೆ ಅನ್ಯಾಯವಾಗಿ ಮಗು ಸಾಯುತ್ತಿರಲಿಲ್ಲ ಇಲ್ಲಿ ಪೊಲೀಸರು ನಿರ್ಲಕ್ಷ್ಯ ತಾಳಿದ್ದಾರೆ ಎನ್ನುವ ದೂರು ಸ್ಥಳೀಯರದ್ದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ