ಬೆಂಗಳೂರು, ಡಿ.26: ರಾಜ್ಯದ 12 ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಿಗೆ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ.
ಹಲವೆಡೆ ಚುನಾವಣಾ ಬಹಿಷ್ಕಾರ, ಅಭ್ಯರ್ಥಿಗಳ ಚಿಹ್ನೆ ಅದಲು ಬದಲು, ನಕಲಿ ಮತದಾನದ ಆರೋಪ ಸೇರಿದಂತೆ ಹಲವು ಗೊಂದಲಗಳ ನಡುವೆ ಮತದಾನ ಪ್ರಕ್ರಿಯೆ ಮುಂದುವರಿದಿದೆ.
ನಕಲಿ ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮತಯಂತ್ರವನ್ನು ನೆಲಕ್ಕೆ ಎಸೆದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗಡಿಗವಾರಪಲ್ಲಿ ಗ್ರಾಮದಲ್ಲಿ ನಡೆದಿದೆ.
ಅಭ್ಯರ್ಥಿಗಳಿಬ್ಬರ ಚಿಹ್ನೆ ಅದಲುಬದಲಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಭುಜಂಗ ನಗರದಲ್ಲಿ ವರಿದಿಯಾಗಿದೆ. ಇಲ್ಲಿ ಚುನಾವಣಾ ಸ್ಪರ್ಧಾ ಕಣದಲ್ಲಿದ್ದ ಜೆಡಿಎಸ್ ಅಭ್ಯರ್ಥಿಯ ಚಿಹ್ನೆಯ ಬದಲು ಬಿಎಸ್ಪಿಯ ಚಿಹ್ನೆ ಮುದ್ರಿಸಲ್ಪಟ್ಟಿದ್ದರೆ, ಬಿಎಸ್ಪಿ ಅಭ್ಯರ್ಥಿಯ ಹೆಸರಿನ ಎದುರು ಜೆಡಿಎಸ್‌ನ ಚಿಹ್ನೆ ಮುದ್ರಿತವಾಗಿದೆ. ಈ ಗೊಂದಲದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಡಿ.31ಕ್ಕೆ ಮುಂದೂಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮದ ಹಳ್ಳಿಯೊಂದರಲ್ಲಿ ಹಾಗೂ ತುಮಕೂರು ತಾಲೂಕಿನ ದೊಣ್ಣೇನಹಳ್ಳಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕಾರಿಸಿದ್ದಾರೆ.
ಯಾದಗಿರಿ ತಾಲೂಕಿನಲ್ಲಿ ಚುನಾವಣೆಗೆ ತೆರಳಲು ವಾಹನಗಳ ವ್ಯವಸ್ಥೆ ಮಾಡಿರುವುದನ್ನು ಪತ್ತೆ ಹಚ್ಚಿರುವ ಚುನಾವಣಾಧಿಕಾರಿ ಶಂಕರ ಪಾಟೀಲ್ ಎರಡು ಟಂಟಂ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಯಾದಗಿರಿ ತಾಲೂಕಿನ ಮುಸಲೇಪರ ಗ್ರಾಮದಲ್ಲಿ ಮತದಾನಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿರುವ ಘಟನೆ ವರದಿಯಾಗಿದೆ. ಸಾದಹಳ್ಳಿಯಲ್ಲಿ ನಕಲಿ ಮತದಾನ ನಡೆದಿರುವ ಬಗ್ಗೆ ಜೆಡಿಎಸ್ ಅಭ್ಯರ್ಥಿಯೊಬ್ಬರು ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಮತದಾನಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆಲಗೊಂಡನಹಳ್ಳಿ ಹಾಗೂ ದೊಡ್ಡದೇನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎರಡು ಮತಯಂತ್ರಗಳನ್ನು ನಾಶಪಡಿಸಿದ ಘಟನೆ ವರದಿಯಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಬೆಸ್ತರಹಳ್ಳಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರನ್ನು ಓಲೈಸಲು ಜೆಡಿಎಸ್ ಕಾರ್ಯಕರ್ತರು ಹಣ ವಿತರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿಯಲ್ಲಿ ಮತದಾನಕ್ಕೆ ಅವಶ್ಯವಾದ ದಾಖಲೆಗಳನ್ನು ಪರಿಶೀಲಿಸದೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಆರೋಪಿಸಿ ಚುನಾವಣಾಧಿಕಾರಿ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಛತ್ರಕೋಡಿಹಳ್ಳಿಯಲ್ಲಿ ಮತದಾನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಈ ರೀತಿಯಾದ ಗೊಂದಲಗಳ ನಡುವೆಯು ಬಿರುಸಿನ ಮತದಾನ ಮುಂದುವರಿದಿದೆ. ಸಂಜೆ 5 ಗಂಟೆಯವರೆಗೆ ನಡೆಯಲಿರುವ ಮತದಾನದಲ್ಲಿ 374 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಮತ್ತು 1335 ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈ ಚುನಾವಣೆಯು 6331 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ