ಪೋಸ್ಟ್: ಮುಹಮ್ಮದ್ ರಿಯಾಜ್ Dubai - UAE +971557398
ನಿರ್ದೋಷಿಯೊಬ್ಬನ ಖುಲಾಸೆ ಸಂಭ್ರಮಕ್ಕೆ ಕಾರಣವಾಗಬಾರದು. ಅದು ನಿರ್ದೋಷಿಯನ್ನು ಅಪರಾಧಿಯಾಗಿಸುವ ವ್ಯವಸ್ಥೆಯ ಬಗ್ಗೆ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚಬೇಕು.
-ಗಿಲಾನಿ, (ಪಾರ್ಲಿಮೆಂಟ್ ದಾಳಿಯ ಆರೋಪಕ್ಕೆ ಗುರಿಯಾಗಿ ನಂತರ ಸುಪ್ರೀಂ ಕೋರ್ಟಿನಿಂದ ಖುಲಾಸೆಯಾದ ಸಂದರ್ಭದಲ್ಲಿ) ಸ್ವಲ್ಪಜ್ಞಾಪಿಸಿಕೊಳ್ಳಿ. ಕೇವಲ ಎರಡು ವರ್ಷಗಳ ಹಿಂದೆ ಈ ಡಾ. ಹನೀಫ್ ಎಂಬ ಬೆಂಗಳೂರು ಸಂಜಾತ ಆಸ್ಟ್ರೇಲಿಯನ್ ವೈದ್ಯನನ್ನು ನಮ್ಮ ಮಾಧ್ಯಮಗಳು ಕೋರ್ಟಿನಲ್ಲಿ ಭಯೋತ್ಪಾದಕನೆಂದು ಘೋಷಿಸಿ ಮರಣದಂಡನೆ ನೀಡಿಯಾಗಿತ್ತು. ಈಗ ಒಂದು ನಿಷ್ಪಕ್ಷಪಾತ ವಿಚಾರಣೆ ನಡೆದ ನಂತರ ಡಾ. ಹನೀಫ್ ನಿರಪರಾಧಿ ಎಂದು ಸಾಬೀತಾಗಿದೆ. ತಾನು ಮಾಡಿದ ತಪ್ಪಿಗೆ ಆಸ್ಟ್ರೇಲಿಯನ್ ಸರಕಾರ ಹನೀಫ್‌ಗೆ 5-10 ಕೋಟಿ ರೂಪಾಯಿ ಪರಿಹಾರವನ್ನು ಕಟ್ಟಿಕೊಡುತ್ತಿರುವುದು ಮಾತ್ರವಲ್ಲದೆ ಬಹಿರಂಗವಾಗಿ ಕ್ಷಮಾಪಣೆಯನ್ನೂ ಕೋರುತ್ತಿದೆ. ಇದು ಡಾ. ಹನೀಫ್‌ಗೆ ಮತ್ತವರ ಕುಟುಂಬಕ್ಕೆ ನಿರಾಳ ತಂದಿರುವುದು ಸಹಜವೇ. ಆದರೆ ಭಾರತೀಯ ಮಾಧ್ಯಮಗಳು ಮತ್ತು ಸರಕಾರ ತಮ್ಮ ಬೇಜವಾಬ್ದಾರಿಯಿಂದ ಒಬ್ಬ ಮುಗ್ಧನನ್ನು ಶೂಲಕ್ಕೆ ಏರಿಸಿಬಿಡುತ್ತಿದ್ದಿವಲ್ಲ ಎಂಬ ಬಗ್ಗೆ ಕಿಂಚಿತ್ತೂ ಆತ್ಮನಿರೀಕ್ಷಣೆ ಮಾಡಿಕೊಳ್ಳ ದಿರುವುದು ಇದೇ ಸಂದರ್ಭದಲ್ಲಿ ಆತಂಕ ವನ್ನೂ ಹುಟ್ಟುಹಾಕುತ್ತಿದೆ. 2007ರ ಜುಲೈನಲ್ಲಿ ಗ್ಲಾಸ್ಗೋ ಏರ್‌ಪೋರ್ಟ್ ಬಳಿ ವಿಫಲ ಬಾಂಬ್ ಬ್ಲಾಸ್ಟ್ ಪ್ರಯತ್ನದಲ್ಲಿ ಕಫೀಲ್ ಮತ್ತು ಇನ್ನೊಬ್ಬ ‘‘ಶಂಕಿತ’’ ಭಯೋತ್ಪಾದಕರು ಸತ್ತರು. ಅವರ ಬಳಿ ಇದ್ದ ಮೊಬೈಲ್ ಸಿಮ್ ಒಂದು ಅವರ ಸಂಬಂಧಿಯಾದ ಡಾ. ಹನೀಫ್ ಎಂಬ ಬೆಂಗಳೂರು ಸಂಜಾತ ಆಸ್ಟ್ರೇಲಿಯನ್ ವೈದ್ಯನಿಗೆ ಸೇರಿದ್ದು ಎಂಬ ಸುದ್ದಿ ಬರುತ್ತಿದ್ದದ್ದೇ ತಡ ಬೆಂಗಳೂರು ಮತ್ತು ಭಾರತದ ಎಲ್ಲಾ ಮಾಧ್ಯಮಗಳು ಈ ಡಾಕ್ಟ ರರ ಮಾರಿ ಹಬ್ಬ ಮಾಡಲು ಪ್ರಾರಂಭಿಸಿದರು. ‘‘ಡಾಕ್ಟರ್ ಭಯೋತ್ಪಾದನೆಯ ಬಗ್ಗೆ ಇಸ್ರೇಲಿ ಮೂಲಗಳು ಮೊದಲೇ ವರದಿ ಕೊಟ್ಟಿದ್ದವು’’, ‘‘ಭಾರತದಾಚೆ ನೆಲಸಿರುವ ಎನ್‌ಆರ್‌ಐ ಮುಸ್ಲಿಮರಲ್ಲಿ ಬಹಳಷ್ಟು ಜನ ಭಯೋತ್ಪಾದಕರಾಗಿರಬಹುದೇ’’ ಇವೇ ಇನ್ನಿತ್ಯಾದಿ ಶೀರ್ಷಿಕೆಗಳಲ್ಲಿ ಪುಂಖಾ ನುಪುಂಖವಾಗಿ ಲೇಖನಗಳು, ಸುದ್ದಿ ‘‘ಕಥೆ’’ಗಳು ಪ್ರಕಟವಾಗಲಾರಂಭಿಸಿದವು. ಹಲವು ಮಾಧ್ಯಮ ಸಂಸ್ಥೆಗಳು ತಮ್ಮ ಸುದ್ದಿಗಾರರಿಗೆ ‘‘ಡಾ.ಹನೀಫ್ ಮತ್ತು ಭಯೋತ್ಪಾದನೆಯ ಬಗ್ಗೆ’’ ದಿನಕ್ಕೆ ಒಂದೆರಡಾ ದರೂ ಸುದ್ದಿಯನ್ನು ಫೈಲ್ ಮಾಡಲೇ ಬೇಕೆಂದು ತಾಕೀತು ಮಾಡಿದ್ದರು. ಹೀಗಾಗಿ ಸುದ್ದಿ ವರದಿ ಮಾಡಬೇಕಾದ ಪತ್ರಕರ್ತರು ಈ ವಿಷಯದಲ್ಲಿ ಸುದ್ದಿ ಸೃಷ್ಟಿ ಮಾಡುವ ಸೃಷ್ಟಿಕರ್ತರೂ ಆಗಿಬಿಟ್ಟರು. ಡಾ. ಹನೀಫ್ ಭಯೋತ್ಪಾದಕರೇ ಎಂಬುದಕ್ಕೆ ಸಾಕ್ಷಿ ಪುರಾವೆಗಳನ್ನು ಕಂಡು ಹಿಡಿಯಲಾರಂಭಿಸಿ ದರು. ಅದರಲ್ಲಿ ಡಾ. ಹನೀಫ್ ಮನೆಯಲ್ಲಿ ಕುರ್‌ಆನ್‌ನ ಹಲವು ಪ್ರತಿಗಳು ಇರುವುದೂ ಮತ್ತು ಅವರು ದಿನಕ್ಕೆ ಐದು ಬಾರಿ ನಮಾಜು ಮಾಡುವುದೂ ಸಹ ಸಾಕ್ಷಿ ಪುರಾವೆಯಾಗಿ ಬಿಟ್ಟಿತು. ಆದರೆ ಭಾರತೀಯ ಮಾಧ್ಯಮಗಳ ಈ ಹುಸಿ ಸತ್ಯಶೋಧನೆ ಮತ್ತು ವರದಿಗಳ ಅಬ್ಬರದ ನಡುವೆ ಆಸ್ಟ್ರೇಲಿಯನ್ ತನಿಖಾಧಿಕಾರಿಗಳೇ ಡಾ. ಹನೀಫ್‌ಗೆ ಭಯೋತ್ಪಾದಕರ ಜೊತೆ ಸಂಬಂಧವಿತ್ತೆಂದು ಸಾಬೀತು ಮಾಡು ವಂಥ ಯಾವುದೇ ಪುರಾವೆಯಿಲ್ಲ ಎಂದು ಘೋಷಿಸಿ ಅವರ ಮೇಲಿದ್ದ ‘‘ಭಯೋತ್ಪಾದನೆ’’ ಸಂಬಂಧಿ ಆರೋಪಗಳನ್ನು ಕೈಬಿಟ್ಟರು. ಹೀಗಾಗಿ ಅನಿವಾರ್ಯವಾಗಿ ಭಾರತದ ಮಾಧ್ಯಮಗಳೂ ಸಹ ಅವರ ಮೇಲೆ ಹಾಕಿದ್ದ ಚಾರ್ಜ್ ಶೀಟನ್ನು ಕೈಬಿಟ್ಟವು. ಆದರೆ ತಾವು ವಿನಾಕಾರಣ ಒಬ್ಬ ನಿರಪರಾಧಿಯನ್ನು ಕೊಲೆ ಮಾಡುತ್ತಿದ್ದ ಹಂತಕರಾಗಿಬಿಡುತ್ತಿದ್ದೆವೆಂಬ ಬಗ್ಗೆ ಕಿಂಚಿತ್ತೂ ಆತ್ಮ ನಿರೀಕ್ಷಣೆಯಂಥ ನಾಗರಿಕ ಸಂಸ್ಕೃತಿಯನ್ನು ಭಾರತೀಯ ಮಾಧ್ಯಮಗಳು ತೋರಲಿಲ್ಲ. ಈಗ ಆಸ್ಟ್ರೇಲಿಯನ್ ಸರಕಾರ ತಾವು ವಿನಾಕಾರಣ ಒಬ್ಬ ಮುಗ್ಧನಿಗೆ ಚಿತ್ರ ಹಿಂಸೆ ಕೊಟ್ಟು ಆತನ ಪ್ರತಿಷ್ಟೆಯನ್ನು ಡ್ಯಾಮೇಜು ಮಾಡಿದ್ದರ ಬಗ್ಗೆ ಸಾರ್ವಜನಿಕ ಕ್ಷಮಾಪಣೆ ಕೋರುತ್ತಿದ್ದಾರೆ. ಅದರ ಬಗ್ಗೆಯೂ ನಿರ್ಲಿಪ್ತವಾಗಿ ವರದಿ ಮಾಡುತ್ತಿರುವ ಮಾಧ್ಯಮಗಳ ಈ ಮೌನದ ಹಿಂದೆ ಒಂದು ದೊಡ್ಡ ಅಪಾಯವಿದೆ. ಏಕೆಂದರೆ ಎಲ್ಲರೂ ಡಾ. ಹನೀಫ್‌ರಷ್ಟು ಅದೃಷ್ಟಶಾಲಿಗಳಾಗಿರುವುದಿಲ್ಲವಲ್ಲ! ಹನೀಫರ ಬಗ್ಗೆ ಮಾಧ್ಯಮಗಳ ಅಪಪ್ರಚಾರ ಪ್ರಾರಂಭ ವಾಗುವುದಕ್ಕೆ ಮುಂಚೆಯೂ ಹಲವಾರು ಪ್ರಕರಣಗಳಲ್ಲಿ ಸಾವಿರಾರು ಸ್ಥಳೀಯ ಮುಸ್ಲಿಮರ ಬಗ್ಗೆ ಮಾಧ್ಯಮಗಳು ಅಪಪ್ರಚಾರ ನಡೆಸಿ ಒಂದು ‘‘ಪಬ್ಲಿಕ್ ಮೂಡ್’’ ಅನ್ನು ಸೃಷ್ಟಿಸಿದ್ದವು. ಈ ಪಬ್ಲಿಕ್ ಮೂಡ್ ಕೇವಲ ಸಾರ್ವಜನಿಕರ ಮೂಡಾಗಿ ಮಾತ್ರ ಉಳಿ ಯದೇ ನ್ಯಾಯಾಧೀಶರ ಮೂಡ್ ಮತ್ತು ಸೆಂಟಿಮೆಂಟ್ ಆಗಿಯೂ, ನ್ಯಾಯಾದೇಶಗಳಾ ಗಿಯೂ ಪರ್ಯಾವಸನಗೊಂಡಿರುವ ಹಲ ವಾರು ಪ್ರಕರಣಗಳು ನಮ್ಮ ಮುಂದಿವೆ. ಅಫ್ಝಲ್‌ಗುರು ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟು ಸಹ ಆತನನ್ನು ನೇರವಾಗಿ ಸಂಸತ್ ದಾಳಿ ಆರೋಪದ ಜೊತೆ ಸಂಬಂಧ ಏರ್ಪಡಿಸು ವಂತಹ ಸಾಕ್ಷಿಗಳು ದೊರೆತಿಲ್ಲವೆಂದೇ ಪರೋಕ್ಷ ವಾಗಿ ಒಪ್ಪಿಕೊಂಡಿವೆ. ಆದರೂ ಆತನಿಗೆ ಅತ್ಯಂತ ಅಪರೂಪದಲ್ಲಿ ಅಪರೂಪದ ಪ್ರಕರಣ ಗಳಲ್ಲಿ ಮಾತ್ರ ನೀಡುವಂತಹ ಶಿಕ್ಷೆಯಾದ ಮರಣದಂಡನೆಯನ್ನು ವಿಧಿಸಲು ಕಾರಣ ವೇನು? ಅದಕ್ಕೆ ಸುಪ್ರೀಂ ಕೋರ್ಟೇ ತನ್ನ ತೀರ್ಪಿನಲ್ಲಿ ಕಾರಣ ನೀಡಿದೆ: ‘‘ತೀವ್ರ ಸ್ವರೂಪದ ಅನಾ ಹುತಗಳಿಗೆ ಎಡೆ ಮಾಡಿಕೊಟ್ಟ ಈ ಪ್ರಕರಣ ರಾಷ್ಟ್ರದ ಸಮಷ್ಟಿಪ್ರಜ್ಞೆಯನ್ನು ವಿಚಲಿತಗೊಳಿಸಿದೆ. ಅಪರಾಧಿಗಳಿಗೆ ತಲೆದಂಡದ ಶಿಕ್ಷೆಯನ್ನು ಕೊಡುವುದರ ಮೂಲಕ ದೇಶದ ಸಮಷ್ಟಿಪಜ್ಞೆಗೆ ಸಮಾಧಾನ ತಂದುಕೊಡಲು ಸಾಧ್ಯ.’’ ಹೀಗೆ ಅಪರೂಪದಲ್ಲಿ ಅಪರೂಪದ ಪ್ರಕರಣ ಗಳಲ್ಲಿ ವಿಧಿಸಬೇಕಾದ ಮರಣದಂಡನೆಯಂಥ ಶಿಕ್ಷೆಯನ್ನು ಅಫ್ಝಲ್‌ಗುರುಗೆ ವಿಧಿಸಬೇಕಾ ದರೂ ಈ ದೇಶದ ವರಿಷ್ಟ ನ್ಯಾಯಾಲಯ ಪರಿಗಣಿಸಿರುವುದು ದೇಶದ ಸಾರ್ವಜನಿಕರ ಸಮಷ್ಟಿ ಪ್ರಜ್ಞೆ, ಮೂಡ್ ಮತ್ತು ಅದಕ್ಕೆ ಸಮಾಧಾನವಾಗುವಂತೆ ತಮ್ಮ ತೀರ್ಮಾನ. ಆದರೆ ಈ ಸಾರ್ವಜನಿಕ ಪ್ರಜ್ಞೆ ಹೇಗೆ ರೂಪುಗೊಳ್ಳುತ್ತದೆ? ಮಾಧ್ಯಮಗಳ ಮೂಲಕವೇ! ಹೀಗಾಗಿ ಮಾಧ್ಯಮಗಳಿಗೆ ವ್ಯಕ್ತಿಗಳ ಮತ್ತು ಸಮುದಾಯಗಳ ಬದುಕನ್ನು ಅದರಲ್ಲೂ ದಮನಿತರ ಮತ್ತು ಶೋಷಿತರ ಬದುಕು ಮತ್ತು ಭವಿಷ್ಯವನ್ನೇ ಪ್ರಭಾವಿಸು ವಂತಹ ಶಕ್ತಿ ಇರುತ್ತದೆ. ಆದ್ದರಿಂದಲೇ ಅವು ಹೆಚ್ಚು ಜವಾಬ್ದಾರಿಯನ್ನು ತೋರಿಸಬೇಕಾಗುತ್ತದೆ. ಆದರೆ ಮುಸ್ಲಿಮರಿಗೆ ಮತ್ತು ಭಯೋತ್ಪಾದನೆಗೆ ಸಂಬಂಧಪಟ್ಟ ವಿಷಯದಲ್ಲಿ ಮಾಧ್ಯಮಗಳು ಅದರಲ್ಲೂ ಅದರಲ್ಲಿ ವಿಶೇಷವಾಗಿ ತೂರಿಕೊಂಡಿರುವ ಕೋಮುವಾದಿ ಗಣಗಳು ಎಂತಹ ಬೇಜವಾಬ್ದಾರಿ ಮತ್ತು ಉದ್ದೇಶಪೂರಿತ ವರದಿಯನ್ನು ಮಾಡುತ್ತಿವೆ ಯೆಂದರೆ ಇಂದು ಇಡೀ ಅಲ್ಪಸಂಖ್ಯಾತ ಜನರ ಮೇಲೆ ನಡೆಯುತ್ತಿರುವ ಹತ್ಯೆಗಳ ಕ್ತ ಅವರ ಪೆನ್ನಿಗೂ ಸಾಕಷ್ಟು ಮೆತ್ತಿಕೊಂಡಿದೆ. ಉದಾಹರಣೆಗೆ ಹುಬ್ಬಳ್ಳಿ ಮತ್ತು ದೇಶದ ಇತರೆಡೆಗಳಲ್ಲಿ ನಡೆದ ಬಾಂಬ್ ಬ್ಲಾಸ್ಟ್‌ಗಳ ಹೆಸರಿನಲ್ಲಿ ಬಂಧಿಸಲ್ಪಟ್ಟಿರುವ ಗೌಸ್ ಮತ್ತು ಅಸಾದುಲ್ಲರನ್ನು 2008ರ ಫೆಬ್ರವರಿಯಲ್ಲಿ ಮಂಪರು ಪರೀಕ್ಷೆಗೆ ಗುರಿಪಡಿಸಲಾಯಿತು. ಪೊಲೀಸರ ಪ್ರಕಾರ ಮಂಪರು ಪರೀಕ್ಷೆಲ್ಲಿ ಅಸಾದುಲ್ಲಾ ನಿದ್ದೆ ಮಾಡಿದರೆ, ಗೌಸ್ ಏನನ್ನೂ ಹೇಳಲಿಲ್ಲ. ಈಗ ಮಂಪರು ಪರೀಕ್ಷೆಯ ಫಲಿತಾಂಶಗಳು ನಂಬಲರ್ಹ ಪುರಾವೆಯಲ್ಲ ಎಂದು ಕೋರ್ಟೇ ನಿರ್ಧಾರ ಮಾಡಿದೆ. ಆದರೆ ಮರುದಿನ ಮಾಧ್ಯಮದಲ್ಲಿ ಗೌಸ್ ತನಗೂ ಬಿನ್ ಲಾಡೆನ್‌ಗೂ ಸಂಬಂಧವಿದೆಯೆಂದು ಒಪ್ಪಿಕೊಂಡನೆಂದೂ, ಹಲವಾರು ಪ್ರಮುಖ ಮಾಹಿತಿಗಳನ್ನು ಹೊರಹಾಕಿದನೆಂದೂ ವರದಿ ಯಾಯಿತು. ಮಾಧ್ಯಮಗಳ ಪ್ರಕಾರ ಅವ ರಿಬ್ಬರೂ ನಿಸ್ಸಂದಿಗ್ಧವಾಗಿ ಭಯೋತ್ಪಾದಕರು. ಏಕೆಂದರೆ ‘‘ಅಸಾದುಲ್ಲಾ ಮಂಪರು ಪರೀಕ್ಷೆಯಲ್ಲಿ ನಿದ್ದೆ ಮಾಡಿಬಿಡುವಷ್ಟು ಚಾಣಾಕ್ಷ. ಗೌಸ್ ಜೈಲಿನಲ್ಲೂ ದಿನಕ್ಕೆ ಐದು ಬಾರಿ ನಮಾಜು ಮಾಡುತ್ತಿದ್ದ ಮತ್ತು ಅವರಿಬ್ಬರು ಪರಸ್ಪರ ಮೆಲುದನಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು ಹಾಗೂ ತಮಗೆ ಪೊಲೀಸರು ಚಿತ್ರಹಿಂಸೆ ಕೊಟ್ಟಿದ್ದನ್ನು ಕೋರ್ಟಿನ ಮುಂದೆ ಹೇಳುವಷ್ಟು ಪರಿಣಿತರು.’’ ಇವೇ ಮಾಧ್ಯಮಗಳು ನೀಡಿದ ಪುರಾವೆಗಳು. ಇಷ್ಟಲ್ಲದೆ ಪೊಲೀಸ್ ಮೂಲಗಳಿಂದ ಎಂಬ ಹೆಸರಿನಲ್ಲಿ ಪೊಲೀಸರು ಹೇಳದೇ ಇದ್ದದ್ದನ್ನೆಲ್ಲಾ ಮಾಧ್ಯಮಗಳು ಪ್ರಕಟಿಸಿದವು. ಪೊಲೀಸರು ಅವರನ್ನು ಬಂಧಿಸಿದಾಗ ಅವರ ಬಳಿ ಎಕೆ-47 ಇತ್ಯಾದಿ ಮಾರಕ ಆಯುಧಗಳು ಸಿಕ್ಕವೆಂಬುದು ಅದರಲ್ಲಿ ಒಂದು. ಇದು ಎಂಥ ಹಸಿಸುಳ್ಳೆಂದರೆ ಟ್ರೀಗರ್ ಹ್ಯಾಪಿ ಪೊಲೀಸ್ ಕಮಿಷನರ್ ಎಂದು ಹೆಸರು ಮಾಡಿರುವ ಶಂಕರ್ ಬಿದರಿಯವರೇ ತಾವು ಬಂಧಿಸಿದ ವ್ಯಕ್ತಿಗಳ ಬಳಿ ಯಾವುದೇ ಆಯುಧಗಳಿರಲಿಲ್ಲವೆಂದು ಹೇಳಿಕೆ ನೀಡಬೇಕಾಯಿತು. ಮಾಧ್ಯಮಗಳ ಈ ಬೇಜವಾಬ್ದಾರಿ ಮತ್ತು ಗುಪ್ತ ಕೋಮುವಾದಿ ವರದಿಗಾರಿಕೆಗೆ ದೊಡ್ಡ ಉದಾಹರಣೆಯೆಂದರೆ 2008ರ ಫೆಬ್ರವರಿ 3ರಂದು ಪೊಲೀಸರು ನಡೆಸಿದ ಬಂಧನ ಮತ್ತು ವಶಪಡಿಸಿಕೊಂಡ ಆಯುಧಗಳ ಬಗ್ಗೆ ಪೊಲೀಸ್ ಪತ್ರಿಕಾ ಗೋಷ್ಠಿಯನ್ನು ವರದಿ ಮಾಡಿದ ಬಗೆ! ಅಂದು ಪೊಲೀಸರು ನೀಡಿದ ಅಧಿಕೃತ ಪತ್ರಿಕಾ ಹೇಳಿಕೆಯ ಪ್ರಕಾರ ಬಂಧನಕ್ಕೊಳಗಾದ ‘‘ಶಂಕಿತ’’ ಕೇರಳ ಮೂಲದ ಮುಸ್ಲಿಂ ಭಯೋತ್ಪಾದಕರಿಂದ ‘‘ನಕಲಿ ಸಂಖ್ಯಾ ಫಲಕಗಳು, ಕಪ್ಪು ಬಣ್ಣದ ಪರ್ಸುಗಳು, ರಸ್ತೆ ಹಾಗೂ ರೈಲ್ವೆ ನಕ್ಷೆಗಳು, ಎಟಿಎಂ ಕಾರ್ಡು, ಎರಡು ಚಾಕು, ಎರಡು ಚಿಕ್ಕ ಬ್ಯಾಟರಿ, ಇಸ್ಲಾಮಿಕ್ ಸಾಹಿತ್ಯ, ಏರ್‌ಗನ್ ಪೆಲೆಟ್ಸ್ ಹಾಗೂ ಒಂದು ಡಿಜಿಟಲ್ ಡೈರಿ.’’ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಹೇಳಿದ್ದು ಇಷ್ಟೆ. ಆದರೆ ಮಾರನೇ ದಿನ ಹಲವು ಪ್ರಮುಖ ದಿನಪತ್ರಿಕೆಗಳ ಪ್ರಕಾರ ‘‘ಬಂಧಿತ ಉಗ್ರಗಾಮಿಗಳಿಂದ ಪ್ರಪಂಚದ ನಂಬರ್ ಒನ್ ಶಕ್ತಿಶಾಲಿ ಸ್ಫೋಟಕ ಪೆನೆಟೈಟ್ ಆಯುಧ, ಆರ್‌ಡಿಎಕ್ಸ್, ಇಸ್ರೇಲಿ ಗನ್, ಅಪಾರ ಪ್ರಮಾಣದ ಮದ್ದು ಗುಂಡು ಮತ್ತು ರಾಜ್ಯದ ಮಠ-ಮಾನ್ಯಗಳ ಮತ್ತು ಡ್ಯಾಂಗಳ ನಕ್ಷೆಗಳು!’’ ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇದು ಕೇವಲ ಬೇಜವಾಬ್ದಾರಿ ಪತ್ರಿಕೋದ್ಯಮವಲ್ಲ. ಇದೊಂದು ಕೋಮುವಾದಿ ಪತ್ರಿಕೋದ್ಯಮ. ಇದರ ಪರಿಣಾಮ? ಹುಬ್ಬಳ್ಳಿಯ ಕೋರ್ಟ್ ಹಾಲ್‌ನಲ್ಲಿ ನಾಡ ಬಾಂಬೊಂದು ಬ್ಲಾಸ್ಟ್ ಆದರೆ ಹೊನ್ನಾಳಿಯಲ್ಲಿ ಸ್ಕೂಟರ್ ಕಳ್ಳತನದ ಕೇಸಲ್ಲಿ ಬಂಧಿತರಾದ ಮುಸ್ಲಿಮರು ಹುಬ್ಬಳ್ಳಿ ಬ್ಲಾಸ್ಟಿನಲ್ಲಿ ಆರೋಪಿತ ಭಯೋತ್ಪಾದಕರಾಗುತ್ತಾರೆ. ಅದಕ್ಕೆ ಸಾಕ್ಷ್ಯ ಅವರ ಬಳಿ ಹುಬ್ಬಳ್ಳಿಯ ಮ್ಯಾಪಿದ್ದದ್ದು ಮತ್ತು ಅವರು ಪೊಲೀಸರು ತಮಗೆ ಲಾಕಪ್ಪಿನಲ್ಲಿ ಚಿತ್ರಹಿಂಸೆ ಕೊಟ್ಟು ತಮ್ಮ ಮಾನವ ಹಕ್ಕು ಹರಣ ಮಾಡಿದ್ದಾರೆಂದು ದೂರು ನೀಡಿದ್ದು. ಒಬ್ಬ ಬಂಧಿತ ಮುಸ್ಲಿಮ್ ಮಾನವ ಹಕ್ಕಿನ ಬಗ್ಗೆ ಮಾತನಾಡುತ್ತಾನೆಂದರೆ ಅವನು ಭಯೋತ್ಪಾದಕನೇ ಇರಬೇಕೆಂದು ನಿರ್ಧಾರಕ್ಕೆ ಬರುವ ಹೊನ್ನಾಳಿಯ ಮ್ಯಾಜಿಸ್ಟ್ರೇಟರು ಅವರನ್ನು ಭಯೋತ್ಪಾದನೆಯ ವಿಷಯದ ಬಗ್ಗೆ ತನಿಖೆ ಮಾಡಬೇಕೆಂದು ತಾವೇ ಖುದ್ದಾಗಿ ಪೊಲೀಸರಿಗೆ ಸೂಚಿಸುತ್ತಾರೆ. ಅಲ್ಲಿಂದ ಪ್ರಾರಂಭಗೊಳ್ಳುವ ಅಮಾಯಕ ಮುಸ್ಲಿಮರ ಚಿತ್ರಹಿಂಸೆ ಆ ಬಾಂಬ್ ಬ್ಲಾಸ್ಟ್ ಮಾಡಿದ್ದು ನಿಜಕ್ಕೂ ಹಿಂದೂತ್ವ ಭಯೋತ್ಪಾದಕ ಮುತಾಲಿಕನ ಶಿಷ್ಯರು ಎಂಬುದು ಗೊತ್ತಾಗುವವರೆಗೂ ಮುಂದುವರಿಯುತ್ತದೆ. ಇದು ಕೋಮುವಾದಿ ಮತ್ತು ಬೇಜವಾಬ್ದಾರಿ ಮಾಧ್ಯಮಗಳು ಈ ದೇಶದಲ್ಲಿ ಅಲ್ಪಸಂಖ್ಯಾತರ ಬದುಕಿನ ಮೇಲೆ ಮತ್ತು ಅವರ ಅಸ್ತಿತ್ವದ ಮೇಲೆ ಮಾಡಬಹುದಾದ ಪರಿಣಾಮ. ಒಂದು ಕೋಮುವಾದೀಕರಣಗೊಂಡ ಮಾಧ್ಯಮ, ಸಾರ್ವಜನಿಕ ಪೂರ್ವಗ್ರಹಗಳಿಂದ ಮುಕ್ತವಾಗಿಲ್ಲದ ನ್ಯಾಯಾಂಗ ಇರುವ ದೇಶದಲ್ಲಿ ಈಗಲಾದರೂ ಡಾ. ಹನೀಫ್ ಪ್ರಕರಣ ಒಂದಷ್ಟು ಎಚ್ಚರಿಕೆಯನ್ನು ಒಂದಷ್ಟು ಜವಾಬ್ದಾರಿಯನ್ನು ಮಾಧ್ಯಮಗಳಿಗೂ ಮತ್ತು ನ್ಯಾಯಾಲಯಗಳಿಗೂ ತರುವಂತಾಗಲಿ.
-ಗಿಲಾನಿ, (ಪಾರ್ಲಿಮೆಂಟ್ ದಾಳಿಯ ಆರೋಪಕ್ಕೆ ಗುರಿಯಾಗಿ ನಂತರ ಸುಪ್ರೀಂ ಕೋರ್ಟಿನಿಂದ ಖುಲಾಸೆಯಾದ ಸಂದರ್ಭದಲ್ಲಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ