ಮಂಗಳವಾರ, ಜನವರಿ 25, 2011

ಕಾಶ್ಮೀರದ ಜನ ಮನದಲ್ಲಿ ಹಾರಲಿ ರಾಷ್ಟ್ರಧ್ವಜ

‘ಮಾಡುವುದಕ್ಕೆ ಕೆಲಸವಿಲ್ಲದ ಬಡಿಗ ಮಗು ವಿನ ಅದಾವುದೋ ಭಾಗವನ್ನು ಕೆತ್ತಿದನಂತೆ’. ಸದ್ಯಕ್ಕೆ ಬಿಜೆಪಿ ಜಮ್ಮುವಿನ ಲಾಲ್ ಚೌಕ್‌ನಲ್ಲಿ ‘ರಾಷ್ಟ್ರಧ್ವಜ ಹಾರಿಸುವ’ ನೆಪದಲ್ಲಿ ಇದನ್ನೇ ಮಾಡುತ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ನಿರುದ್ಯೋಗಿಗಳಾಗಿ ಅಲೆದಾಡುತ್ತಿರುವ ಬಿಜೆಪಿ ನಾಯಕರು, ಇನ್ನೇನು ಮಾಡುವುದು ಎಂದು ಮಗುವಿನ ‘ಅಂಡು’ ಕೆತ್ತುವುದಕ್ಕೆ ಹೊರಟಿದ್ದಾರೆ. ಕೈಯಲ್ಲಿರುವ ‘ರಾಷ್ಟ್ರಧ್ವಜ’ವನ್ನು ಅವರು ಬಡಿಗನ ಕೈಯಲ್ಲಿರುವ ‘ಉಳಿ’ಯಂತೆ ಬಳಸುವುದಕ್ಕೆ ಹೊರಟಿದ್ದಾರೆ. ಉರಿಯುತ್ತಿರುವ ಜಮ್ಮು ಕಾಶ್ಮೀರ ಅವರಿಗೆ ಅನಾಯಾಸವಾಗಿ ಸಿಕ್ಕಿದ ‘ಪಾಪದ ಮಗು’. ಸರಿ, ಇದೀಗ ಉಳಿ ಹಿಡಿದುಕೊಂಡು ಮೆರವಣಿಗೆಯಲ್ಲಿ ಹೊರಟೇ ಬಿಟ್ಟಿದ್ದಾರೆ.
ರಾಷ್ಟ್ರಪ್ರೇಮ, ದೈವ ಪ್ರೇಮ, ನೆಲ, ಜಲ ಎಲ್ಲವನ್ನೂ ಕಲುಷಿತಗೊಳಿಸಿದ ಖ್ಯಾತಿ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸೇರಬೇಕು. ಗಾಂಧೀಜಿಯ ರಾಮನನ್ನು ಬಳಸಿಕೊಂಡು ದೇಶದಲ್ಲಿ ರಕ್ತವನ್ನು ಹರಿಸಿದರು. ಸ್ವಾತಂತ್ರ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ‘ವಂದೇಮಾತರಂ’ನ್ನೂ ತಮ್ಮ ರಾಜಕೀಯಕ್ಕೆ ಬಳಸಿ, ಅಸ್ಪಶ್ಯವನ್ನಾಗಿಸಿದರು. ಇದೀಗ ಅವರ ಕೈಗೆ ಸಿಕ್ಕಿರುವುದು ರಾಷ್ಟ್ರಧ್ವಜ. ಅದನ್ನು ಹಿಡಿದುಕೊಂಡು ಲಂಕೆಗೆ ನುಗ್ಗುವ ಕಪಿ ಸೇನೆಯಂತೆ ಜಮ್ಮುವಿಗೆ ನುಗ್ಗಲು ಹೊರಟಿದ್ದಾರೆ. ಜಮ್ಮು-ಕಾಶ್ಮೀರಕ್ಕೇನಾದರೂ ಆಗಲಿ, ಅದರ ಹೆಸರಲ್ಲಿ ಮತ್ತೆ ಅಧಿಕಾರ ಹಿಡಿಯುವುದನ್ನು ಅವರು ಗುರಿ ಮಾಡಿದಂತಿದೆ.
‘ರಾಷ್ಟ್ರಧ್ವಜ’ವನ್ನು ಹಿಡಿದುಕೊಂಡು ಬಿಜೆಪಿ ಜಮ್ಮುವಿನಲ್ಲಿ ಮಾಡಲು ಹೊರಟಿರುವ ದಾಂಧಲೆ ಕಾಶ್ಮೀರದ ಗಾಯಗಳಿಗೆ ಉಪ್ಪು ಸುರಿಯುವುದೇ ಹೊರತು, ಆ ಗಾಯವನ್ನು ಒಣಗಿಸಲಾರದು. ಅವರಿಗೆ ಬೇಕಾಗಿರುವುದೂ ಅದೇ ಆಗಿದೆ. ಗಾಯವನ್ನು ಇನ್ನಷ್ಟು ಕೆರಳಿಸಬೇಕು. ಗಾಯ ಮಾಯಲೇ ಬಾರದು. ಅದು ಜೀವವಿದ್ದಷ್ಟು ಬಿಜೆಪಿಗೆ ಲಾಭ. ಒಂದು ವೇಳೆ, ಕಾಶ್ಮೀರ ಈ ದೇಶದಿಂದ ಸಿಡಿದರೂ ಅದರ ಲಾಭವನ್ನು ತನ್ನದಾಗಿಸಿ ಕೊಳ್ಳಲು ಆರೆಸ್ಸೆಸ್-ಬಿಜೆಪಿ ಹೊಂಚು ಹಾಕಿ ಕುಳಿತಿದೆ. ಅದರ ಭಾಗವಾಗಿಯೇ ಇದೀಗ ಗಣರಾಜ್ಯೋತ್ಸವದ ದಿನ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ಜಜವನ್ನು ಹಾರಿಸಲು ಹೊರಟಿದೆ.
ತಮ್ಮ ನೆಲದಲ್ಲಿ ಏನನ್ನು, ಯಾವಾಗ ಹಾರಿಸಬೇಕು ಎನ್ನುವುದನ್ನು ತೀರ್ಮಾಸುವವರು ಜಮ್ಮು ಕಾಶ್ಮೀರದ ಜನ. ಅಲ್ಲೊಂದು ಸರಕಾರ ವಿದೆ. ಅದನ್ನು ಆರಿಸಿರುವುದು ಅಲ್ಲಿನ ಜನರು. ಯಾವಾಗ ಎಲ್ಲಿ ರಾಷ್ಟ್ರಧ್ವಜವನ್ನು, ಹಾರಿಸಬೇಕು ಎನ್ನುವುದು ಆ ಸರಕಾರಕ್ಕೆ ಚೆನ್ನಾಗಿ ತಿಳಿದಿದೆ. ಲೂಟಿ, ದಾಂಧಲೆ ಇತ್ಯಾದಿಗಳಲ್ಲೇ ಪರಿಣತರಾಗಿ ರುವ ಬಜರಂಗದಳ, ಆ ಸೇನೆ, ಈ ಸೇನೆಯ ಜನರಿಂದ ಅಲ್ಲಿನ ಜನರು ದೇಶಪ್ರೇಮದ ಪಾಠವನ್ನು ಕಲಿಯಬೇಕಾಗಿಲ್ಲ.
ಬೇರೆ ರಾಜ್ಯ ಗಳಿಂದ, ದುಷ್ಕರ್ಮಿಗಳ ಗುಂಪುಗಳನ್ನು ಕಟ್ಟಿಕೊಂಡು ಬಾಬರೀ ಮಸೀದಿಯನ್ನು ಧ್ವಂಸ ಮಾಡಿದಂತೆಯೇ, ಕಾಶ್ಮೀರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತೇವೆ ಎಂದು ಬಿಜೆಪಿ ತಿಳಿದುಕೊಂಡಿದೆ. ಆದರೆ ರಾಷ್ಟ್ರಧ್ವಜ ಎನ್ನುವುದು ಒಂದು ಸಂಕೇತ. ಅದನ್ನು ಮೊದಲು ಹಾರಿಸಬೇಕಾದುದು ನಮ್ಮ ನಮ್ಮ ಎದೆಯಲ್ಲಿ. ಬಳಿಕ ಆ ಭಾವನೆಗಳಿಗೆ ರಾಷ್ಟ್ರಧ್ವಜದ ಮೂಲಕ ಮೂರ್ತ ರೂಪವನ್ನು ಕೊಡುತ್ತೇವೆ. ಈ ದೇಶದ ಮೇಲಿನ ಪ್ರೀತಿಯನ್ನು ಯಾರಲ್ಲೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಅದು ನಮ್ಮಿಳಗೆ ಸ್ವಾಭಾವಿಕವಾಗಿ ಹುಟ್ಟುವಂತಹದು. ಯಾರೋ ಬಲವಂತವಾಗಿ ಲಾಲ್ ಚೌಕದಲ್ಲಿ ಬಾವುಟ ಹಾರಿಸಿದಾಕ್ಷಣ ಕಾಶ್ಮೀರ ನಮ್ಮದಾಗಿ ಬಿಡುವುದಿಲ್ಲ.
ಹಾರಿಸಿದ ಧ್ವಜವನ್ನು ಮರು ದಿನ ಇಳಿಸಲಾಗುತ್ತದೆ. ಆದರೆ ಕಾಶ್ಮೀರ ನಮ್ಮದಾಗ ಬೇಕಾದರೆ ಅಲ್ಲಿಯ ಜನರು ಈ ದೇಶವನ್ನು, ಈ ದೇಶದ ಬಾವುಟವನ್ನು ಒಪ್ಪಬೇಕು. ಕೋವಿಯಿಂದ, ತ್ರಿಶೂಲದಿಂದ ನಮ್ಮ ರಾಷ್ಟ್ರಧ್ವಜವನ್ನು ಅವರು ಒಪ್ಪುವಂತೆ ಮಾಡಲು ಸಾಧ್ಯವಿಲ್ಲ. ಮೊತ್ತ ಮೊದಲು, ಈ ದೇಶ ನನ್ನದು ಎನ್ನುವ ಭಾವನೆಯನ್ನು ಅವರಲ್ಲಿ ಹುಟ್ಟಿಸುಂತಹ ಕೆಲಸ ನಡೆಯಬೇಕು. ಒಳ್ಳೆಯ ಬದುಕು, ಭಯ ರಹಿತ ಬದುಕು, ಹಸಿವು ರಹಿತ ಬದುಕು, ಹಿಂಸಾ ರಹಿತ ಬದುಕು, ಸ್ವಾಭಿಮಾನ ಸಹಿತ ಬದುಕು ಮಾತ್ರ ಅವರಲ್ಲಿ ದೇಶದ ಕುರಿತಂತೆ ಪ್ರೀತಿಯನ್ನು ಉಕ್ಕಿಸಬಹುದು.
ಬಿಜೆಪಿ ಮತ್ತು ಆರೆಸ್ಸೆಸ್‌ನ ಪುಂಡರು ಕಾಶ್ಮೀರದಲ್ಲಿ ಮಾಡುವ ಕೃತ್ಯಗಳು ಅವರೊಳಗೆ ದೇಶದ ಮೇಲೆ ಇನ್ನಷ್ಟು ಆಕ್ರೋಶವನ್ನು ಬಿತ್ತ ಬಹುದೇ ಹೊರತು, ಇನ್ನಾವ ಪರಿಣಾಮವನ್ನೂ ಉಂಟು ಮಾಡಲಾರವು. ಯಾಕೆಂದರೆ, ನಾವು ‘ಕಾಶ್ಮೀರ ನಮ್ಮದು’ ಎಂದು ಎಷ್ಟು ಬೊಬ್ಬಿರಿದರೂ, ಕಾಶ್ಮೀರದಲ್ಲಿ ಯಾರು ಬದುಕುತ್ತಿರುವರೋ ಅವರದೇ ಕಾಶ್ಮೀರ. ನಾವು ಅವರಿಗೆ ಹೊರಗಿನವರು. ಬಲವಂತವಾಗಿ ಅಲ್ಲಿಗೆ ಪ್ರವೇಶಿಸಿ, ನಾವು ಅವರಿಗೆ ಅಮೃತವನ್ನು ಕುಡಿಸಿ ದರೂ ಅದು ವಿಷವೇ ಆಗಿ ಪರಿಣಮಿಸುತ್ತದೆ. ಆದರೆ ಬಿಜೆಪಿ ಅಮೃತದ ಹೆಸರಿನಲ್ಲಿ ವಿಷವನ್ನು ಕುಡಿಸಲು ಮುಂದಾಗಿದೆ. ಹೀಗಿರುವಾಗ, ಅದು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.
ಬಿಜೆಪಿಯ ಕೃತ್ಯ ಕಾಶ್ಮೀರದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಗಣರಾಜ್ಯೋತ್ಸವದ ದಿನ ಜಮ್ಮುವಿಗೆ ನುಗ್ಗಿ ಅದು ರಾಷ್ಟ್ರಧ್ವಜವನ್ನು ಹಾರಿಸಿ, ಮತ್ತೆ ದಿಲ್ಲಿಯನ್ನು ಸೇರಬಹುದು. ಆದರೆ, ಅದನ್ನೇ ಬಳಸಿಕೊಂಡು ಕಾಶ್ಮೀರದ ಪ್ರತ್ಯೇಕವಾದಿಗಳು ಸ್ಥಳೀಯರನ್ನು ಪ್ರಚೋದಿಸಬಹುದು. ಈಗಾಗಲೇ ಕಾಶ್ಮೀರದಲ್ಲಿ ಸೇನೆಯ ಗುಂಡಿಗೆ ನೂರಾರು ತರುಣರು ಪ್ರಾಣ ತೆತ್ತಿದ್ದಾರೆ. ಅಲ್ಲಿನ ಜನರು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಳೆದುಕೊಂಡು ಹತಾಶರಾಗಿದ್ದಾರೆ. ಗಣರಾಜ್ಯೋತ್ಸವದ ದಿನ ಅವರ ಹತಾಶೆಯನ್ನು ಇನ್ನಷ್ಟು ಹೆಚ್ಚಿಸುವ ಕೆಲಸ ನಡೆಯ ಬಾರದು.
ಬದಲಿಗೆ ಅವರಲ್ಲಿ ಭರವಸೆಯನ್ನು ಬಿತ್ತಬೇಕು. ‘ಭಾರತ ನಿಮ್ಮದು’ ಎನ್ನುವುದನ್ನು ಅವರಿಗೆ ಸ್ಪಷ್ಟಪಡಿಸುವಂತಹ ಕಾರ್ಯಕ್ರಮಗಳ ಘೋಷಣೆಯಾಗಬೇಕು. ರಾಷ್ಟ್ರಧ್ವಜ ಹಾರಬೇಕಾದುದು ಲಾಲ್‌ಚೌಕ್‌ನಲ್ಲಲ್ಲ. ಜಮ್ಮು- ಕಾಶ್ಮೀರದ ಪ್ರತಿ ಜನ ಮನದಲ್ಲಿ ರಾಷ್ಟ್ರಧ್ವಜ ಹಾರುವಂತಾಗಬೇಕು. ಕಾಶ್ಮೀರ ಎಂದೆಂದಿಗೂ ಭಾರತದಲ್ಲೇ ಉಳಿಯಬೇಕು. ಇದಕ್ಕಾಗಿ ನಾವು ಪ್ರಾಮಾಣಿಕ ಹೆಜ್ಜೆಗಳನ್ನಿಡಬೇಕೇ ಹೊರತು, ದುಷ್ಕರ್ಮಿಗಳ ಗುಂಪುಗಳನ್ನು ಕಟ್ಟಿಕೊಂಡು ಅಪ್ರಾಮಾಣಿಕ ದೇಶಪ್ರೇಮದ ಘೋಷಣೆಗಳನ್ನು ಕೂಗುವುದಲ್ಲ. ಬಿಜೆಪಿ ಇನ್ನಾದರೂ ಇದನ್ನು ಅರ್ಥಮಾಡಿಕೊಳ್ಳಬೇಕು. ಗದ್ದುಗೆ ಹಿಡಿಯು ವುದಕ್ಕಾಗಿ ದೇಶದ ಜನರ ಮನಸ್ಸನ್ನು ಒಡೆಯುವ ಕೆಲಸವನ್ನು ಯಾವತ್ತೂ ಮಾಡುವುದಕ್ಕೆ ಮುಂದಾಗಬಾರದು.
                                                                                                                
                                                                                                             ಕ್ರಪೆ :ಸಂಪಾದಕೀ ಯ varthabharathi

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ