ಶನಿವಾರ, ಜನವರಿ 15, 2011

ಸಾತ್ವಿಕರು ಕಟ್ಟಿ ಬೆಳಸಿದ ಜಾಮಿಯ: ನೂರಿಯ: – ಒಂದು ಅನನ್ಯ ಶಿಕ್ಷಣ ಕ್ರಾಂತಿ

ಜಾಮಿಅ: ನೂರಿಯ್ಯಾ: ಅರೆಬಿಕ್ ಕಾಲೇಜು, ಪಟ್ಟಿಕ್ಕಾಡ್
ಪಟ್ಟಿಕ್ಕಾಡ್: ನಾಲ್ಕೂವರೆ ದಶಕಗಳ ಹಿಂದೆ ಅದೊಂದು ದುರ್ಗಮ ಬೆಟ್ಟಗಳಿಂದ ಕೂಡಿದ ಪ್ರದೇಶ. ಮನುಷ್ಯ ಮಾತ್ರನ ಸಹವಾಸಕ್ಕೆ ಒಗ್ಗದ ಯಾರೂ ನೆಚ್ಚಿಕೊಳ್ಲದ ಪರ್ವತ ಬೆಟ್ಟಗಳ ನಾಡು. ಪ್ರಾಣಿಗಳ ಊಳುಡುವಿಕೆಯ ಮಾರ್ದನಿ ಬಿಟ್ಟರೆ ಅಲ್ಲಿ ಬೇರೇನೂ ಕೇಳಿಸುತ್ತಿರಲಿಲ್ಲ. ಆದರೆ ಇಂದು  ಆ ನಾಡು ಸುಂದರ ಜ್ಞಾನ ದೇಗುಲದಿಂದ ಜಗಜ್ನಾಹೀವಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್‍ಮಣ್ಣ ನಗರದಿಂದ ಊಟಿ ರಸ್ತೆಯಲ್ಲಿರುವ ಪಟ್ಟಿಕ್ಕಾಡ್‍ನ ಪ್ರಶಾಂತ ವಾತಾವರಣ ಫೈಝಾಬಾದ್‍ನಲ್ಲಿ ಬೆಳೆದುನಿಂತ ಜಾಮಿಅ: ನೂರಿಯ್ಯಾ: ಅರೆಬಿಕ್ ಕಾಲೇಜಿನಲ್ಲಿ ಜ್ಞಾನ ತಪಸ್ಸಿನ ಮಂತ್ರೋಚ್ಯಾರಣೆಯ ಪ್ರತಿಧ್ವನಿ ಮೊಳಗಿ 48 ವರ್ಷ ಸಲ್ಲುತ್ತಿದೆ.
ಇಂದು ಇಸ್ಲಾಮೀ ಪದವಿ ಕಾಲೇಜುಗಳಿಗೆ ಕೊರತೆ ಇಲ್ಲ. ಶರೀಅತ್ ಕಾಲೇಜಿನಿಂದ ಧಾರ್ಮಿಕ-ಲೌಕಿಕ ಸಮನ್ವಯ ಪದವಿ ಕಾಲೇಜುಗಳವರೆಗೆ ಬರೋಬ್ಬರಿ ವಿದ್ಯಾಸಂಸ್ಥೆಗಳು ನಮ್ಮ ಕರ್ನಾಟಕ ಹಾಗೂ ಕೇರಳದಲ್ಲಿ ಇದೆ. ಆದರೆ ಅದೊಂದು ಕಾಲವಿತ್ತು. ಅಂದು ಪದವಿ ಪಡೆಯಬೇಕಿದ್ದರೆ ಒಂದೋ ಉತ್ತರ ಭಾರತದ ದೇವ್‍ಬಂದ್‍ಗೆ ಹೋಗಬೇಕು ಇಲ್ಲವೆ ತಮಿಳುನಾಡಿನ ಬಾಕಿಯಾತ್‍ಗೆ ಹೋಗಬೇಕು ಅಷ್ಟು ದೂರಕ್ಕೆ ಹೋಗಿ ವಿಧ್ಯಾರ್ಜನೆ ಮಾಡುವುದು ಎಲ್ಲರಿಗೊ ಸಾಧ್ಯವಗುತ್ತಿರಲಿಲ್ಲ. ಇನ್ನು ಅದೂ ಇದೂ ಮಾಡಿ ಹೋದರೆಂದು ಇಟ್ಟುಕೊಳ್ಳೋಣ-ಅಲ್ಲಿ ಸೀಮಿತ ಸೀಟುಗಳಿದ್ದರೆ ಹೋದವರಿಗೆಲ್ಲ ಕೊಡಲು ಸೀಟು ಲಭ್ಯವಿಲ್ಲದೆ  ಕೆಲವರು ಬರಿಗೈಲಷ್ಟೆ ಮರಳಬೇಕು!.
ಇಂತಹ ಸಂಕಷ್ಟದಲ್ಲಿ ಕಿಲುಕಿದ ಸಮುದಾಯದ ವಿದ್ಯಾರ್ಥಿಗಳು ಏನು ಮಾಡಬೇಕು ? ಉಳಿದದ್ದು ಒಂದೇ ದಾರಿ “ಸಮಸ್ತ”ದ ಉಲಮಾಗಳತ್ತ ಧಾವಿಸುವುದು ಹಾಗೇ ಅಯಿತು. ಆಗಲೇ ಸಮಸ್ತ ಎಚ್ಚೆತ್ತುಕೊಂಡಿತು. ಕೇರಳದಲ್ಲಿ ಒಂದು ಪದವಿ ಕಾಲೇಜು ಸ್ಥಾಪಿಸಬೇಕು ಎಂದು ಹಗಲಿರುಳು ಕಾರ್ಯಪ್ರವ್ರತರಾದ ಉಲಮಾಗಳು ಮೊಟ್ಟಮೊದಲ ಬಾರಿಗೆ ಕೇರಳದ ಮಲಪ್ಪುರಂ ಪಟ್ಟಿಕ್ಕಾಡಿನಲ್ಲಿ ಜಾಮಿಯ: ನೂರಿಯ್ಯ: ಎಂಬ ಪದವಿ ಕಾಲೇಜನ್ನು ಹುಟ್ಟು ಹಾಕಿದರು.
ಸಮಸ್ತ“ದ ಕರೆಗೆ ಸ್ಪಂದಿಸಿ ಅಪ್ಪಟ ಧರ್ಮಭಕ್ತ ಉದ್ಯಮಿ ಕೊಡುಗೈ ದಾನಿ ಬಾಪು ಹಾಜಿಯವರು ದಾನವಾಗಿ ನೀಡಿದ ಬಹಳಷ್ಟು ಎಕ್ಕರೆಗಳಷ್ಟು ವಿಸ್ತೀರ್ಣದ ಜಮೀನಿನಲ್ಲಿ 1963 ಫೆಬ್ರವರಿಯಲ್ಲಿ ಕಾಲೇಜು ಕಟ್ಟಡಕ್ಕೆ ಅಂದಿನ ಕಲ್ಲಿಕೋಟೆಯ ಹಿರಿಯ ಖಾಝಿಯವರಾಗಿದ್ದ ಸಯ್ಯದ್ ಶಿಹಾಬುದ್ಧೀನ್ ಇಂಬಿಚ್ಚಿಕೋಯ ತಂಙಳ್ ಶಿಲನ್ಯಾಸಗೈದು ಇತಿಹಾಸವೊಂದರ ನಿರ್ಮಾಣಕ್ಕೆ ಅಡಿಗಾಲಾಕಿದ್ದರು. ಒಂದೇ ವರ್ಷದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಂಡಿತು. ಆದರೆ ಕಟ್ಟಡಪೂರ್ಣಗೊಳ್ಲಲು ಕಾಯದೆ ಶಿಲನ್ಯಾಸಗೈದ ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ಕಾಲೇಜ್‍ಗೆ ವಕ್ಫ್ ಮಾಡಿದ ಸ್ಥಳದಲ್ಲೇ ಬಾಪು ಹಾಜಿ ಸ್ವಂತವಾಗಿ ನಿರ್ಮಿಸಿದ್ದ ರಹ್ಮಾನಿಯಾ ಮಸೀದಿಯಲ್ಲಿ ಹಿರಿಯ ವಿದ್ವಾಂಸ ಕುತುಬಿ ಮುಹಮ್ಮದ್ ಮುಸ್ಲಿಯಾರ್ ಅವರಿಂದ ಕಾಲೇಜ್ ತರಗತಿ ಉದ್ಘಾಟನೆಗೊಂಡಿತು. ಅಂದು ಬರೀ 31 ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಕಾಲೇಜು ಇಂದು ದೇಶದ ವಿವಿಧ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳ ಅಭಿಮಾನದ ವಿದ್ಯಾದೇಗುಲವಾಗಿ ವೈಭವಗೊಂಡಿದೆ.
ಸದ್ಯ ಶರೀಅತ್ ಕಾಲೇಜಿನಲ್ಲಿ 700 ಮಿಕ್ಕಿದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಪದವಿ ಪಡೆದವರು ಅದೆಷ್ಟೋ ಸಾವಿರ. ಇಲ್ಲಿ ಪದವಿ ಪಡೆದ ವಿದ್ಯಾರ್ಥಿಗಳೇ ಇಂದು ಸ್ವಂತ ಪದವಿ ಕಾಲೇಜುಗಳನ್ನು ಸ್ಥಾಪಿಸಿದ್ದಲ್ಲದೆ ಮೊಹಲ್ಲಾ ಗಳಿಗೆ ಖಾಝಿಗಳಾಗಿ, ಮುದರ್ರಿಸರಾಗಿ, ಖತೀಬರಾಗಿ, ಸಂಘಟನಾ ನಾಯಕರಾಗಿ, ದೀನಿ ಪತ್ರಿಕಾ ಸಂಪಾದಕರಾಗಿ, ಬೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಕಡೆಯ ಸರ್ವ ಧಾರ್ಮಿಕ ಕಾಲೇಜುಗಳ ಮಾತೆಯಾಗಿ ಗುರುತಿಸಿಕೊಂಡಿರುವ ಪಟ್ಟಿಕ್ಕಾಡ್ ಜಾಮಿಯ: ನುರಿಯ:ದಲ್ಲಿ ಸಮಕಾಲಿನ ಆಗ್ರಗಣ್ಯ ವಿದ್ವಾಂಸ ಅಂತರಾಷ್ಟ್ರೀಯ ಖ್ಯಾತಿಯ ಸಾಹಿತಿ ಆಲಿಕುಟ್ಟಿ ಉಸ್ತಾದ್ ಪ್ರಾಂಶುಪಾಲರಾಗಿದ್ದು, “ಸಮಸ್ತ”ದ ಅಧ್ಯಕ್ಷ ಸಾತ್ವಿಕತೆಯ ಪ್ರತಿರೂಪ ಕಾಳಂಬಾಡಿ ಉಸ್ತಾದ್ ಸಹಿತ ಪ್ರಖ್ಯಾತ ವಿದ್ವಾಂಸರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾಣಕ್ಕಾಡ್ ಸಯ್ಯದ್ ಹೈದರಲಿ ಶಿಹಾಬ್ ತಂಙಳ್ ನೇತ್ರತ್ವದ ಸಮಿತಿಯ ಸಾರಥ್ಯ ವಹಿಸಿದೆ.
ಅಧುನಿಕ ವೈಜ್ಞಾನಿಕ ಯುಗದಲ್ಲಿ ಯಾವುದೇ ಅವಿಷ್ಕಾರದ ಮುಂದೆಯೊ ಧರ್ಮ ಸಂದೇಶದ ಪಾರಮತ್ಯೆಯನ್ನು ಜತತ್ತಿನ ಯಾವುದೇ ಸ್ಥಳಗಲ್ಲೊ ಎತ್ತಿ ತೋರಿಸಲು ಪಕ್ವವಾದ ಯುವ ವಿದ್ವಾಂಸರನ್ನು ಸ್ರಷ್ಟಿಸಲು ಪಟ್ಟಿಕ್ಕಾಡ್ ಜಾಮಿಅವು ಮುಂದಾಗಿದೆ. ಕೇರಳದದ್ಯಾಂತ ಈ ನೂತನ ಪಠ್ಯ ಪದ್ದತಿಯಲ್ಲಿ ಬಹಳಷ್ಟು ಕಾಲೇಜುಗಳು ಪ್ರವರ್ತಿಸುತ್ತಿದ್ದು ಜಾಮಿಅ: ನೂರಿಯಾದ ಮೇಲ್ನೋಟದಲ್ಲಿದೆ.
ದರ್ಸ್ ಸಂಪ್ರದಾಯವು ಕೊನೆಯುಸಿರೆಳೆಯುವ ಸ್ಥಿತಿಯಲ್ಲಿರುವುದು ಗಮನಿಸಿ ಪ್ರಚಲಿತ ವಿದ್ಯಮಾನಕ್ಕೆ ಹೊಂದಿಕೊಂಡು ಹೊಸತನವನ್ನು ಕಂಡುಕೊಳ್ಳುವ ರೀತಿಯ ಪಠ್ಯ ಪದ್ಧತಿಯನ್ನು ಆವಿಷ್ಕರಿಸಿ ಇಸ್ಲಾಮಿನ ಜೀವಕಲೆಯನ್ನು ಉಳಿಸುವಂತೆ ಮಾಡುವ ಈ ಪದ್ಧತಿಯ ಯಶಸ್ಸನ್ನು ಗಳಿಸುತ್ತಿದೆ ಇದರ ಒಂದು ಶಾಖೆಯಾಗಿ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಮೂಡೆಬಿದ್ರೆಯ ತೋಡಾರಿನಲ್ಲಿ ಶಂಸುಲ್ ಉಲಮಾ ಅರಬಿಕ್ ಕಾಲೇಜು ಸಜ್ಜುಗೊಂಡಿದೆ. ನೂತನ ಪಠ್ಯ ಪದ್ಧತಿಯಂತೆ ವರ್ಷಂಪ್ರತಿ ಎಸ್.ಎಸ್.ಎಲ್.ಸಿ. ಹಾಗೂ ತತುಲ್ಯ ಮದ್ರಸ ಶಿಕ್ಷಣ ಪಡೆದ 40 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿ ಆರು (6) ವರ್ಷಗಳ ಕಾಲ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡಲಾಗುತ್ತದೆ. ಪ್ರಾದೇಶಿಕ ಹಾಗು ಜಾಗತಿಕ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆಯುವ ತರಬೇತಿ ನೀಡಲಾಗುತ್ತಿದೆ. ಆರು ವರ್ಷಗಳ ನಂತರ ಜಾಮಿಯ: ನೂರಿಯ: ದಲ್ಲಿ ಪ್ರವೇಶಾತಿ ನೀಡಲಿದ್ದು ಎರಡು ವರ್ಷಗಳ ಅಧ್ಯಯನ ವರ್ಷವನ್ನು ಅಲ್ಲಿ ಪೂರ್ತಿಗೊಳಿಸಿದಾಗ “B.A’. ಪಧವಿ ಹಾಗೂ “ಫೈಝಿ” ಬಿರುದನ್ನು ನೀಡಿ ಗೌರವಿಸಲಾಗುತ್ತದೆ.
ಮಾಹಿತಿ ತಂತ್ರಜ್ಞಾನದ ಸರ್ವಸಾದ್ಯತೆ ಗಳನ್ನು ವಿವರಿಸುವ ವಿವಿಧ ಕೋರ್ಸುಗಳು ವೈಜ್ಞಾನಿಕ ಯುಗದಲ್ಲಿ ಹೊಸ ಲೋಕವನ್ನೇ ನಿರ್ಮಿಸಿದ COMPUTER SCIENCE AND ENGINEERING, ELECTRICAL COMMUNICAL ENGINEERING , ಮುಂತಾದ ಅಧುನಿಕ ಲೌಕಿಕ ಜ್ಞಾನದ ಉನ್ನತ ವಿದ್ಯಾ ಕೇಂದ್ರವು ಜಾಮಿಯ: ನೂರಿಯ: ಅಧೀನದಲ್ಲಿ ಕಾರ್ಯಚರಿಸುತ್ತಿದೆ.
ಸಯ್ಯದ್ ಅಬ್ದುರ್ರಹ್‍ಮಾನ್ ಬಾಫಕಿ ತಂಙಳ್, ಸಯ್ಯದ್ ಪಿ.ಎಂ.ಎಸ್.ಎ. ಪೂಕೋಯ ತಂಙಳ್, ಶೈಖುನಾ ಶಂಸುಲ್ ಉಲಮಾ ಮೊದಲಾದವರ ಸಾರಥ್ಯದಲ್ಲಿ ಹಾಗೂ ಕಣ್ಣೀಯತ್ ಉಸ್ತಾದ್, ಕೋಟುಮಲ ಉಸ್ತಾದ್, ಕೆ.ಕೆ. ಹಝ್ರತ್ ಮೊದಲಾದ ಶ್ರೇಷ್ಟ ಉಲಮಾಗಳ ಸೇವೆಯಲ್ಲಿ ಧನ್ಯಗೊಂಡ ಈ ವಿಧ್ಯಾದೇಗುಲ ಇಂದು 48ನೇ ವಾರ್ಷಿಕ ಹಾಗೂ 46ನೇ ಸನದುದಾನ ಸಮ್ಮೇಳನದ ಸಂಭ್ರಮದಲ್ಲಿದ್ದು ಮೂರು ದಿನಗಳ ಕಾಲದ ಕಾರ್ಯಕ್ರಮ ಆರಂಭಗೊಂಡಿದೆ. ನಾಳೆ ಭಾನುವಾರ ಜನವರಿ 16ರಂದು ಸಾಯಂಕಾಲ ಜಾಮಿಯ: ನೂರಿಯ:ದ ಕ್ಯಾಂಪಸ್ ಪಿ.ಎಂ.ಎಸ್.ಎ ಪೂಕೋಯ ತಂಙಳ್ ನಗರದಲ್ಲಿ ಈ ಐತಿಹಾಸಿಕ ಸಮ್ಮೇಳನವು ನಡೆಯಲಿದೆ. ರಾಷ್ಟ್ರೀಯ ಅಂತರಾಷ್ಟ್ರೀಯ ಖ್ಯಾತಿಯ ಉಲಮಾಗಳು, ಸಮಸ್ತದ ನೇತಾರರೂ, ಕೆಂದ್ರ ಹಾಗೂ ರಾಜ್ಯ ಸಚಿವರುಗಳು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ವಿದ್ಯಾರ್ಜನೆ ಪೂರ್ತಿಗೊಳಿಸಿದ ಪಾರಂಗಿತ ವಿದ್ಯಾರ್ಥಿಗಳಿಗೆ “ಮೌಲವಿ ಫಾಝಿಲ್ ಫೈಝಿ” ಬಿರುದು ನೀಡಲಾಗುವುದು. ಲಕ್ಷೋಪಲಕ್ಷ ವಿಶ್ವಾಸಿಗಳು ತಮ್ಮ ಕರ್ತವ್ಯ ಪೊರೈಕೆ ಎಂಬ ನಂಬಿಕೆಯಲ್ಲಿ ಭಾಗವಹಿಸಿ ಶೈಕ್ಷಣಿಕ ಬದಲಾವಣೆಗೆ ನಾಂದಿ ಹಾಡಿದ ಈ ವಿದ್ಯಾ ದೇಗುಲಕ್ಕೆ ಋಣ ತೀರಿಸುವಾಗ ನಾವು ಕೂಡ ಅದೇ ಋಣ ಸಂದಾಯಕ್ಕೆ ಸಜ್ಜರಗೋಣ.



ಲೇಖನ: ಅಲ್‍ಹಾಜ್ ಸಿರಾಜುದ್ಧೀನ್ ಫೈಝಿ (ಖತೀಬರು, ಬಪ್ಪಳಿಗೆ ಮಸೀದಿ, ಪುತ್ತೂರು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ