ಶುಕ್ರವಾರ, ಜನವರಿ 14, 2011

ಶಬರಿಮಲೆ: ಕಾಲ್ತುಳಿತಕ್ಕೆ 100 ಬಲಿ?: ಮೃತರಲ್ಲಿ ತ.ನಾಡು, ಆಂಧ್ರ ಹಾಗೂ ಕರ್ನಾಟಕದ ಭಕ್ತರು

ಇಡುಕ್ಕಿ, ಜ.14: ಮಕರಜ್ಯೋತಿಯನ್ನು ವೀಕ್ಷಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟು, 75ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ದುರಂತ ಇಡುಕ್ಕಿ ಜಿಲ್ಲೆಯ ವಂಡಿಪೆರಿಯಾರ್ ಎಂಬಲ್ಲಿ ಇಂದು ರಾತ್ರಿ 8:30ರ ಸುಮಾರಿಗೆ ಸಂಭವಿಸಿದೆ. ಈ ಸಂದರ್ಭದಲ್ಲಿ ಬಸ್ಸೊಂದು ಅಪಘಾತಕ್ಕೀಡಾಗಿದೆ ಎಂದೂ ವರದಿಯೊಂದು ತಿಳಿಸಿದೆ.
ಘಟನೆಯಲ್ಲಿ ಕನಿಷ್ಠ 43ಮಂದಿ ಮೃತಪಟ್ಟಿರು ವುದು ದೃಢಪಟ್ಟಿದೆ ಎಂದು ರಾಜ್ಯ ಮುಜರಾಯಿ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ತಿಳಿಸಿದ್ದಾರೆ. 52 ಮಂದಿ ಬಲಿಯಾಗಿರುವುದಾಗಿ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಆದರೆ ಪೊಲೀಸ್ ವರದಿಗಳ ಪ್ರಕಾರ 100ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಮಕರ ಜ್ಯೋತಿ ವೀಕ್ಷಿಸಲು ವಾಹನವೊಂದರ ಮೇಲೆ ಕೆಲವು ಭಕ್ತಾದಿಗಳು ಏರಿದ್ದರಿಂದ ವಾಹನ ಮಗುಚಿದ ಪರಿಣಾಮ ಸ್ಥಳದಲ್ಲಿ ಗೊಂದಲ ಉಂಟಾಗಿ ನೂಕುನುಗ್ಗಲು ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಸ್ತೆಯ ಎರಡೂ ಬದಿಯಲ್ಲಿ ಇಕ್ಕಟ್ಟಾದ ಪ್ರದೇಶವಾದುದರಿಂದ ಹಾಗೂ ಸ್ಥಳದಲ್ಲಿ ಯಾವುದೇ ಆಸ್ಪತ್ರೆಗಳು ಇಲ್ಲದ ಕಾರಣ ಮೃತರ ಸಂಖ್ಯೆ ಇನ್ನೂ ಅಧಿಕವಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರಲ್ಲಿ ಹೆಚ್ಚಿನವರು ತಮಿಳುನಾಡಿಗೆ ಸೇರಿದ ವರಾಗಿದ್ದು, ಉಳಿದಂತೆ ಕರ್ನಾಟಕ, ಹಾಗೂ ಆಂಧ್ರಪ್ರದೇಶದ ಭಕ್ತರೂ ಇದ್ದಾರೆ ಎಂದು ವರದಿ ತಿಳಿಸಿದೆ. ಮೈಸೂರು ನಿವಾಸಿ ಸುರೇಶ್, ಮಲಪ್ಪುರಂನ ಕೋರುಕುಟ್ಟಿ ಎಂಬವರ ಮೃತದೇಹ ವನ್ನು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಡಿಜಿಪಿ ಸಹಿತ ಉನ್ನತ ಅಧಿಕಾರಿಗಳು ಧಾವಿಸಿದ್ದಾರೆ. ‘ಇದೊಂದು ಮಹಾದುರಂತವಾಗಿದೆ’ ಎಂದು ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಪ್ರತಿಕ್ರಿಯಿಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಮಕರಜ್ಯೋತಿ ವೀಕ್ಷಿಸಲು ಈ ವರ್ಷ 2ಲಕ್ಷ ಜನರು ಸೇರಿದ್ದರು.
ಗೃಹ ಸಚಿವರ ಹೇಳಿಕೆ: ದುರಂತ ಶಬರಿಮಲೆ ದೇವಳದಿಂದ 30 ಕಿ.ಮೀ. ದೂರದ ಪುಲ್‌ಮೇಡು ಎಂಬಲ್ಲಿ ನಡೆದಿದೆ. ಜನ ನಿವಾಸ ಇಲ್ಲದ ಈ ಪ್ರದೇಶದಲ್ಲಿ ಸಂವಹನ ಕಷ್ಟ ಸಾಧ್ಯವಾಗಿದ್ದು ಮೃತ ಪಟ್ಟವರ ಸಂಖ್ಯೆ ಇನ್ನೂ ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಡಿಜಿಪಿ ಜೇಕಬ್ ಪುನ್ನೊಸ್‌ರಿಗೆ ಕೂಡಲೇ ಸ್ಥಳಕ್ಕೆ ತಲುಪುವಂತೆ ತಿಳಿಸಿದ್ದೇನೆ ಎಂದು ಕೇರಳದ ಗೃಹ ಸಚಿವ ಕೋಡಿಯೇರಿ ಬಾಲಕೃಷ್ಣನ್ ತಿಳಿಸಿದ್ದಾರೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ದುರಂತಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ