ಬೆಂಗಳೂರು: ಲಿಬಿಯಾದ ಮೇಲೆ ಅಮೆರಿಕ ನೇತೃತ್ವದ ಮೈತ್ರಿ ಪಡೆ ಹಾಗೂ ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ನಡೆಸುತ್ತಿರುವ ವಾಯು ದಾಳಿಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಚಯರ್‌ಮ್ಯಾನ್ ಇ.ಎಂ.ಅಬ್ದುಲ್ ರಹ್ಮಾನ್ ತೀವ್ರವಾಗಿ ಖಂಡಿಸಿದ್ದಾರೆ.
ಯಾವುದೇ ರಾಷ್ಟ್ರದ ಆಂತರಿಕ ವಿಷಯವನ್ನು ಪರಿಹರಿಸುವುದಕ್ಕಾಗಿ ಬಾಹ್ಯ ಪಡೆಗಳನ್ನು ಉಪಯೋಗಿಸುವುದು ಆ ದೇಶದ ಸಾರ್ವಭೌಮತೆಯ ಮೇಲೆ ದಾಳಿಯಾಗಿದೆ. ಸರ್ವಾಧಿಕಾರಿ ಗದ್ದಾಫಿಯ ಆಡಳಿತದಿಂದ ಲಿಬಿಯಾವನ್ನು ಸ್ವತಂತ್ರಗೊಳಿಸಿ ರಾಜಕೀಯ ಸುಧಾರಣೆಯನ್ನು ತರುವ ಉದ್ದೇಶವನ್ನು ಲಿಬಿಯಾದ ಜನ ಬಂಡಾಯವು ಹೊಂದಿತ್ತು. ಬಂಡಾಯವನ್ನು ಶಮನಗೊಳಿಸಲು ಗದ್ದಾಫಿ ಅನುಸರಿಸಿದ ರೀತಿಯು ಖಂಡಿಸಲ್ಪಡಬೇಕಾಗಿದೆ ಮತ್ತು ವಿರೋಧಿಸಲ್ಪಡಬೇಕಾಗಿದೆ. ಆದರೆ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಲಿಬಿಯಾದ ಮೇಲೆ ದಾಳಿ ನಡೆಸಲು ಇದನ್ನು ನೆಪವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಹಲವು ರಾಷ್ಟ್ರಗಳ ಆಂತರಿಕ ವಿಷಯಗಳಲ್ಲಿ ಅಮೆರಿಕವು ಬಲಯುಕ್ತವಾಗಿ ಹಸ್ತಕ್ಷೇಪ ಮಾಡಿದ ಉದಾಹರಣೆಗಳು ನಮ್ಮ ಮುಂದಿವೆ. ಸ್ಥಳೀಯ ಜನರನ್ನು ರಕ್ಷಿಸುವುದಕ್ಕಾಗಿ ಎಂದು ಈ ಹಸ್ತಕ್ಷೇಪಗಳನ್ನು ಬಣ್ಣಿಸಲಾಗಿತ್ತು. ಆದರೆ ವಾಸ್ತವದಲ್ಲಿ ಆ ದೇಶಗಳ ಮೇಲೆ ಅಮೆರಿಕದ ಪ್ರಾಬಲ್ಯವನ್ನು ಹೇರುವುದು ಮತ್ತು ಆ ದೇಶಗಳ ಸಂಪನ್ಮೂಲಗಳನ್ನು ನಿಯಂತ್ರಿಸುವುದು ಇಂತಹ ದಾಳಿಗಳ ಪ್ರಮುಖ ಉದ್ದೇಶವಾಗಿದೆ. ಇರಾಕ್ ಹಾಗೂ ಅಫ್ಘಾನ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ವಾಯು ದಾಳಿಯು ಲಿಬಿಯಾವನ್ನು ಯುದ್ಧ ವಲಯವನ್ನಾಗಿ ಪರಿವರ್ತಿಸಿದ್ದು, ಗದ್ದಾಫಿಯ ವಿರುದ್ಧದ ಜನರ ಬಂಡಾಯಕ್ಕೂ ಇದು ದೊಡ್ಡ ಹಿನ್ನಡೆಯುಂಟುಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಲಿಬಿಯಾದ ಮೇಲೆ ಅಮೆರಿಕ ನೇತೃತ್ವದ ವಾಯು ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಇ.ಎಂ.ಅಬ್ದುಲ್ ರಹ್ಮಾನ್ ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ. ಲಿಬಿಯಾದಲ್ಲಿ ಹೋರಾಟ ನಡೆಸುತ್ತಿರುವ ಹಲವು ಸಂಘಟನೆಗಳೊಂದಿಗೆ ಶಾಂತಿ ಮಾತುಕತೆಯನ್ನು ನಡೆಸುವ ಮೂಲಕ ಅಲ್ಲಿನ ಆಂತರಿಕ ವಿವಾದವನ್ನು ಶಮನಗೊಳಿಸುವಲ್ಲಿ ಸಕಾರಾತ್ಮಕ ಪಾತ್ರವನ್ನು ವಿಶ್ವಸಂಸ್ಥೆ ವಹಿಸಬೇಕು ಅವರು ಹೇಳಿದ್ದಾರೆ.
ಲಿಬಿಯಾದೊಂದಿಗೆ ಭಾರತವು ಉತ್ತಮ ರಾಯಭಾರಿ ಸಂಬಂಧವನ್ನು ಹೊಂದಿದೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲಿ ಅದು ಲಿಬಿಯಾದಲ್ಲಿ ವಿದೇಶಿ ಸೇನೆಯ ನಿಯೋಜಿಸುವುದನ್ನು ಬೆಂಬಲಿಸದಿರುವುದು ಸ್ವಾಗತಾರ್ಹವಾಗಿದೆ. ಇಂತಹ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಭಾರತವು ಕೇವಲ ಮೂಕ ಪ್ರೇಕ್ಷಕನಾಗಿ ಉಳಿಯದೆ ರಾಯಭಾರಿಸಂಬಧಗಳ ಮೂಲಕ ಲಿಬಿಯಾ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸಬೇಕು ಮತ್ತು ಶಾಂತಿಯನ್ನು ನೆಲೆಗೊಳಿಸುವುದಕ್ಕಾಗಿ ಲಿಬಿಯಾದಲ್ಲಿ ಕಚ್ಛಾಟ ನಡೆಸುತ್ತಿರುವ ಗುಂಪುಗಳ ನಡುವೆ ಮಧ್ಯಸ್ಥಿಕೆಯ ಪಾತ್ರವನ್ನು ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ