ಶನಿವಾರ, ಮಾರ್ಚ್ 26, 2011

ಮಕ್ಕಾ ಮಸೀದಿ ಸ್ಫೋಟ ಪ್ರಕರಣ: ದೇವೇಂದ್ರ ಗುಪ್ತಾ, ಲೊಕೇಶ್ ಶರ್ಮಾಗೆ ಜಾಮೀನು ನಿರಾಕರಣೆ

ಕಳೆದ 2007ರ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಇಬ್ಬರು ಆರೋಪಿ ಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯವೊಂದು ತಳ್ಳಿ ಹಾಕಿದೆ. ನಂಪಳ್ಳಿಯ ಮೆಟ್ರೊಪಾಲಿಟನ್ ಸೆಶನ್ಸ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರಕರಣದ ಆರೋಪಿಗಳಾದ ದೇವೇಂದ್ರ ಗುಪ್ತಾ ಮತ್ತು ಲೋಕೇಶ್ ಶರ್ಮಾರ ಜಾಮೀನು ಅರ್ಜಿಯನ್ನು ತಳ್ಳಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಂಗ ಬಂಧನದಲ್ಲಿರುವ ಗುಪ್ತಾ ಮತ್ತು ಶರ್ಮಾಗೆ ಕಳೆದ ನವೆಂಬರ್‌ನಲ್ಲಿಯೂ ಜಾಮೀನು ನಿರಾಕರಿಸಲಾಗಿತ್ತು. ಮಸೀದಿ ಸ್ಫೋಟ ಪ್ರಕರಣದ ತನಿಖೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಜಾಮೀನು ನಿರಾಕರಿಸಲಾಗಿತ್ತು. ಇದೀಗ ಎಂಎಸ್‌ಜೆ ನ್ಯಾಯಾ ಲಯದಲ್ಲಿ ಕಳೆದವಾರ ಮತ್ತೆ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು ಎಂದು ಪ್ರತಿವಾದಿಗಳ ಪರ ನ್ಯಾಯ ವಾದಿ ಎನ್ ರಾಮಚಂದರ್ ರಾವ್ ತಿಳಿಸಿದ್ದಾರೆ. ದೇಶದ ವಿವಿಧ ಕಡೆಗಳ ಸ್ಫೋಟ ಪ್ರಕರಣಗಳಲ್ಲಿ ಗುಪ್ತಾ ಮತ್ತು ಶರ್ಮಾರ ಪಾತ್ರದ ಬಗ್ಗೆ ತನಿಖೆ ನಡೆಯಬೇಕಾಗಿರುವುದರಿಂದ ಮತ್ತು ಪ್ರಕರಣದ ಪ್ರಮುಖ ಆರೋಪಿಗಳು ಇನ್ನಷ್ಟೇ ಬಂಧಿಸಲ್ಪಡ ಬೇಕಾಗಿರುವುದರಿಂದ ನ್ಯಾಯಾಧೀಶರು ಅವರಿಗೆ ಜಾಮೀನು ನಿರಾಕರಿಸಿದರು ಎಂದು ರಾವ್ ಹೇಳಿದ್ದಾರೆ. ‘‘ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ. ತನಿಖೆ ಮುಂದು ವರಿಯುತ್ತಿದೆ. ತನಿಖೆ ನಡೆಯುತ್ತಿರುವ ಈ ಹಂತದಲ್ಲಿ ಇವರನ್ನು (ಶರ್ಮಾ ಮತ್ತು ಗುಪ್ತಾ) ಬಿಡುಗಡೆಗೊಳಿಸಿದರೆ, ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಇಬ್ಬರೂ ಸಾಕ್ಷಿಗಳನ್ನು ಬೆದರಿಸುವ ಸಾಧ್ಯತೆಗಳಿವೆ’’ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿರುವುದಾಗಿ ರಾವ್ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ