ಬುಧವಾರ, ಫೆಬ್ರವರಿ 23, 2011

ಒಂಬತ್ತು ವರ್ಷ ನಮ್ಮನ್ನು ಜೈಲಿನಲ್ಲಿ ಯಾಕೆ ಕೂಡಿ ಹಾಕಲಾಯಿತು? ಗೋಧ್ರಾ ರೈಲು ದಹನ ಪ್ರಕರಣದಲ್ಲಿ ದೋಷಮುಕ್ತ ಆರೋಪಿಗಳ ಪ್ರಶ್ನೆ

ಗೋಧ್ರಾ, ಫೆ. 23: ಒಂಬತ್ತು ವರ್ಷಗಳ ಬಳಿಕ, ಗೋಧ್ರಾ ರೈಲು ದಹನ ಪ್ರಕರಣದ ಆರೋಪ ಹೊತ್ತಿದ್ದ 63 ಮಂದಿ ಕೊನೆಗೂ ದೋಷಮುಕ್ತರಾಗಿದ್ದಾರೆ. ಅವರೆಲ್ಲರನ್ನೂ ಮಂಗಳವಾರ ರಾತ್ರಿಯೇ ಗೋಧ್ರಾಗೆ ಕರೆ ತರಲಾಗಿತ್ತು. ಅವರು ಗೋಧ್ರಾಕ್ಕೆ ಆಗಮಿಸುವಾಗ ಮಧ್ಯರಾತ್ರಿಯಾಗಿದ್ದರೂ, ಅವರ ಬಂಧುಗಳು ಅವರಿಗಾಗಿ ಕಾಯುತ್ತಿದ್ದರು ಮತ್ತು ಅವರನ್ನು ಮುಕ್ತವಾಗಿ ಸ್ವಾಗತಿಸಿದರು. ಒಂಬತ್ತು ವರ್ಷಗಳ ಕಹಿ ಅನುಭವವನ್ನು ಬಿಚ್ಚಿಟ್ಟ ಕೆಲವು ದೋಷಮುಕ್ತರು, ತಮ್ಮ ಹೀನಾಯ ಬದುಕಿನ ಬಗ್ಗೆ ವ್ಯಥೆ ಪಟ್ಟರು.
‘‘ಒಂಬತ್ತು ವರ್ಷಗಳಿಂದ ನಾನು ನರಕದಲ್ಲಿದ್ದೆ. ಬೇರೇನೂ ನಾನು ಹೇಳಲಾರೆ’’ ಎಂದು ಮುಹಮ್ಮದ್ ಇಸಾಕ್ ಮಮ್ದು ಹೇಳಿದರು. ಅವರು ಅಮಾಯಕ ರಾಗಿರುವಾಗ, ಯಾವ ಕಾರಣಕ್ಕಾಗಿ ಅವರನ್ನು ಒಂಬತ್ತು ವರ್ಷಗಳಿಂದ ಜೈಲಿನಲ್ಲಿ ಕೂಡಿ ಹಾಕಿ ಅವರ ಬದುಕನ್ನು ನರಕಮಯವಾಗಿಸಲಾಯಿತು ಎಂಬ ಪ್ರಶ್ನೆ ಮಾತ್ರ ಇದೀಗ ಎಲ್ಲರನ್ನೂ ಕಾಡುತ್ತಿದೆ. ‘‘ನನಗೆ ನ್ಯಾಯದ ಮೇಲೆ ಭರವಸೆ ಇರಲಿಲ್ಲ. ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ, ಆದರೆ ವಿವಿಧ ಅಪರಾಧಗಳಿಗೆ ಸಂಬಂಧಿಸಿ ನನ್ನ ಮೇಲೆ ಆರೋಪ ಹೊರಿಸಿದರು’’ ಎಂದು ಕಮಾಲ್ ಬಾದ್‌ಶಾ ಹೇಳುತ್ತಾರೆ.
‘‘ಹೌದು, ನ್ಯಾಯ ತುಂಬಾ ತಡವಾಗಿ ದೊರಕಿದೆ’’ ಎಂದು ಫರೂಕ್ ಕೇಸರಿ ಅಭಿಪ್ರಾಯ ಪಟ್ಟಿದ್ದಾರೆ. ಆದಾಗ್ಯೂ, ಸಂಚಿನ ಪ್ರಮುಖ ರೂವಾರಿ ಎಂದು ಪರಿಗಣಿಸಲಾಗಿದ್ದ ವೌಲಾನ ಉಮರ್‌ಜೀ ಮಾತ್ರ ತೀರ್ಪಿನ ಕುರಿತು ತಕ್ಷಣಕ್ಕೆ ಮಾತನಾಡಲು ನಿರಾಕರಿಸಿದ್ದಾರೆ.
‘‘ಈ ವೇಳೆ ನಾನು ಏನು ಪ್ರತಿಕ್ರಿಯೆ ನೀಡಲೂ ಇಚ್ಚಿಸುವುದಿಲ್ಲ’’ ಎಂದು ಉಮರ್‌ಜೀ ಹೇಳಿದ್ದಾರೆ. ಒಂಬತ್ತು ವರ್ಷಗಳ ಸುದೀರ್ಘ ಹೋರಾಟದ ಬಳಿಕ ನ್ಯಾಯ ತಮ್ಮ ಪರವಾಗಿ ಲಭಿಸಿದುದರಿಂದ, ದೋಷಮುಕ್ತರು ಭಾವನಾತ್ಮಕವಾಗಿ ಕರಗಿ ಹೋಗಿದ್ದರು. ಅವರು ಹೆಚ್ಚೇನೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ಎಲ್ಲರೂ ಒಂದು ಪ್ರಶ್ನೆ ಕೇಳುತ್ತಿದ್ದರು. ನ್ಯಾಯ ನೀಡಲು ಒಂಬತ್ತು ವರ್ಷ ಯಾಕೆ ತೆಗೆದುಕೊಳ್ಳಲಾಯಿತು? ಎಂಬ ಪ್ರಶ್ನೆ ಪ್ರತಿಯೊಬ್ಬ ದೋಷಮುಕ್ತನಲ್ಲಿ ಎದ್ದಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ