ಗುರುವಾರ, ಫೆಬ್ರವರಿ 24, 2011

ಬಜರಂಗಿಗಳಿಂದ ಅಂಗಡಿಗೆ ನುಗ್ಗಿ ದಾಂಧಲೆ:ತಲವಾರಿನಿಂದ ಹಲ್ಲೆ, ಲಕ್ಷ ರೂ. ದರೋಡೆ

ಬಜರಂಗ ದಳದ ಕಾರ್ಯಕರ್ತರು ಅಂಗಡಿಯೊಂದಕ್ಕೆ ನುಗ್ಗಿ ವ್ಯಕ್ತಿಯೋರ್ವರಿಗೆ ತಲವಾರಿನಿಂದ ಹಲ್ಲೆ ನಡೆಸಿ, ಒಂದು ಲಕ್ಷ ರೂ. ದರೋಡೆಗೈದು ಪರಾರಿಯಾದ ಘಟನೆ ಗುರುವಾರ ನಗರದ ಕೊಟ್ಟಾರ ಚೌಕಿಯಲ್ಲಿ ನಡೆದಿರುವ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಟ್ಟಾರ ಚೌಕಿಯಲ್ಲಿ ಅಂಗಡಿ ಮತ್ತು ಗ್ಯಾರೇಜ್ ಹೊಂದಿರುವ ನೆಲ್ಸನ್ ಡಿಸೋಜ ಎಂಬವರ ಬಳಿ ಸುನೀಲ್ ಸಾಲ್ಯಾನ್ ಎಂಬಾತ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೆಲಸ ಬಿಟ್ಟು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.

ಇದಕ್ಕೆ ಪ್ರತೀಕಾರ ಎಂಬಂತೆ ಸುನೀಲ್ ಸಾಲ್ಯಾನ್ ಬಜರಂಗ ದಳದ ಪ್ರಮುಖ ಶರಣ್ ಪಂಪ್‌ವೆಲ್ ಮತ್ತಿತರ ಜತೆಗೂಡಿ ಗುರುವಾರ ಮಧ್ಯಾಹ್ನ 3:30ರ ವೇಳೆಗೆ ನೆಲ್ಸನ್ ಡಿಸೋಜರ ಅಂಗಡಿಗೆ ಬಂದಿದ್ದ. ಈ ವೇಳೆ ಇತ್ತಂಡದ ಮಧ್ಯೆ ಹೊಡೆದಾಟ ಸಂಭವಿಸಿದೆ.
ಈ ಬಗ್ಗೆ ಉರ್ವ ಪೊಲೀಸರಿಗೆ ದೂರು ನೀಡಿರುವ ನೆಲ್ಸನ್ ಡಿಸೋಜ ‘ಗುರುವಾರ ಮಧ್ಯಾಹ್ನ 3:30ಕ್ಕೆ ಬಜರಂಗ ದಳದ ಶರಣ್ ಪಂಪ್‌ವೆಲ್ ಮತ್ತಿತರ ಕೆಲವು ಮಂದಿ ಅಂಗಡಿಗೆ ನುಗ್ಗಿ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದರಲ್ಲದೆ, ತಲವಾರು, ಕಬ್ಬಿಣದ ರಾಡ್, ವಿಕೆಟ್‌ನಿಂದ ಹಲ್ಲೆ ನಡೆಸಿ, ಅಂಗಡಿಯ ಕ್ಯಾಶ್ ಕೌಂಟರ್‌ನಲ್ಲಿದ್ದ ಒಂದು ಲಕ್ಷ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದಿದ್ದಾರೆ.
ಅದರಂತೆ ಪೊಲೀಸರು ಶರಣ್ ಪಂಪ್‌ವೆಲ್ ಸಹಿತ ಹಲವರ ವಿರುದ್ಧ ದರೋಡೆ ಮತ್ತು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 ನೆಲ್ಸನ್ ಡಿಸೋಜರ ಸಂಗಡಿಗರು ಕೂಡ ಬಜರಂಗ ದಳದ ಕಾರ್ಯಕರ್ತರ ಮೇಲೆ ಮುಗಿಬಿದ್ದಿದ್ದು, ತಂಡದಲ್ಲಿದ್ದ ಅನಿಲ್ ಎಂಬಾತನನ್ನು ಹಿಡಿದಿಟ್ಟು ಹೊಡೆದಿದ್ದಾರೆನ್ನಲಾಗಿದೆ. ಈ ಬಗ್ಗೆ ಅನಿಲ್ ನಾಲ್ವರು ಅಪರಿಚಿತರ ವಿರುದ್ಧ ಉರ್ವ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ