ಮುಂಬಯಿ: ಸಂಝೌತಾ ಎಕ್ಸ್‌ಪ್ರೆಸ್ ಮತ್ತು ಮಾಲೇಗಾಂವ್ ಬಾಂಬ್ ಸ್ಪೋಟದಲ್ಲಿ ತನ್ನ ಪಾತ್ರವಿರುವುದಾಗಿ ಸ್ವಾಮೀ ಅಸೀಮಾನಂದ ತಪ್ಪೊಪ್ಪಿಕೊಂಡ ಬೆನ್ನಿಗೆ ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್.ಪಾಟೀಲ್ ಅವರನ್ನು ಮುಸ್ಲಿಮ್ ನಿಯೋಗ ಭೇಟಿಯಾಗಿ ಮಾಲೇಗಾಂವ್ ಸ್ಪೋಟ ಸಂಬಂಧ ಸೆರೆಯಲ್ಲಿರುವ 12ಕ್ಕೂ ಹೆಚ್ಚಿನ ಮುಸ್ಲಿಂ ಯುವಕರನ್ನು ಬಿಡುಗಡೆಗೊಳಿಸಲು ಆಗ್ರಹಿಸಿದ್ದಾರೆ.
ಮಾಲೇಗಾಂವ್ ಬಾಂಬ್ ಸ್ಪೋಟದಲ್ಲಿ ಸ್ಥಳೀಯ 14-15ಯುವಕರನ್ನು ಪೊಲೀಸರು ಬಂಧಿಸಿದ್ದರು. ಆದರೆ ಸ್ಪೋಟದಲ್ಲಿ ಆರೆಸ್ಸೆಸ್ ಸದಸ್ಯರು ಒಳಗೊಂಡಿದ್ದಾರೆಂದು ಅಸೀಮಾನಂದ ತಪ್ಪೊಪ್ಪಿಕೊಂಡ ಬಳಿಕ ಮುಸ್ಲಿಮ್ ಯುವಕರನ್ನು ತತ್‌ಕ್ಷಣ ಬಿಡುಗಡೆಗೊಳಿಸಬೇಕು ಎಂದು ನಿಯೋಗದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಸುಹೈಲ್ ಲೋಖಂಡವಾಲಾ ಹೇಳಿದರು.
ಸಿಮಿಯಂತೆ ಆರೆಸ್ಸೆಸ್‌ಗೂ ಸರಕಾರ ನಿಷೇಧ ಹೇರುವುದೇ ಎಂದು ಪಾಟೀಲ್ ಅವರಲ್ಲಿ ಕೇಳಲಾಯಿತು ಎಂದರು.
ಮುಸ್ಲಿಮ್ ಯುವಕರನ್ನು ಬಂಧಮುಕ್ತಗೊಳಿಸಲು ಕೋರಿ ಮಾಜಿ ಕಾರ್ಮಿಕ ಸಚಿವ ಮತ್ತು ಎನ್‌ಸಿಪಿ ಶಾಸಕ ನವಾಬ್ ಮಲಿಕ್ ಅವರೂ ಮುಖ್ಯಮಂತ್ರಿ ಪೃಥ್ವೀರಾಜ್ ಚವಾಣ್ ಮತ್ತು ಆರ್.ಆರ್.ಪಾಟೀಲ್‌ಗೆ ಪತ್ರ ಬರೆದಿದ್ದಾರೆ.
ಆಗಿರುವ ಪ್ರಮಾದಗಳನ್ನು ಉತ್ತಮ ಮನಸ್ಸಿನಿಂದ ಸರಿಪಡಿಸಿ ಅಮಾಯಕ ಯುವಕರಿಗೆ ಸರಕಾರ ಪುನರ್ವಸತಿ ಒದಗಿಸಬೇಕಾಗಿದೆ ಎಂದು ಮಲಿಕ್ ಹೇಳಿದ್ದಾರೆ.
ಸಮಾಜವಾದಿ ಪಾರ್ಟಿ ಶಾಸಕ ಅಬು ಆಸೀಂ ಆಜ್ಮಿ ಅವರೂ ಇತ್ತೀಚೆಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಇದೇ ರೀತಿ ಆಗ್ರಹಿಸಿದ್ದಾರೆ.
ಇನ್ನೋರ್ವ ಎನ್‌ಸಿಪಿ ಶಾಸಕ ಜೀತೇಂದ್ರ ಅವ್ಹಾಡ್ ಅವರು ಬಾಂಬ್ ಸ್ಪೋಟ ಆರೋಪಿಗಳ ಕುಟುಂಬ ಸದಸ್ಯರೊಂದಿಗೆ ಪಾಟೀಲ್ ಅವರನ್ನು ಭೇಟಿಯಾಗಿ ಬಂಧಿತ ಯುವಕರನ್ನು ಬಿಡುಗಡೆಗೊಳಿಸಲು ಆಗ್ರಹಿಸಲಿದ್ದಾರೆ.
ಮಾಲೇಗಾಂವ್, ಸಂಝೌತಾ ಎಕ್ಸ್‌ಪ್ರೆಸ್, ಅಜೆ¾àರ್ ಮತ್ತು ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಪೋಟಗಳನ್ನು ನಡೆಸಲು ತಾನು ಮತ್ತು ಅನೇಕ ಆರೆಸ್ಸೆಸ್ ಕಾರ್ಯಕರ್ತರು ನಿರ್ದೇಶನ ನೀಡಿರುವುದಾಗಿ ಅಸೀಮಾನಂದ ತಪ್ಪೊಪ್ಪಿಕೊಂಡಿದ್ದಾರೆ.
ಈ ಹೇಳಿಕೆಯನ್ನು ಜೈಲಿನಲ್ಲಿರುವ ಸ್ವಾಮೀ ಅಸೀಮಾನಂದ ವೈಯಕ್ತಿಕ ಸಾಮಾರ್ಥ್ಯದಲ್ಲಿ ಇಲ್ಲವೇ ಆರೆಸ್ಸೆಸ್ ಪರವಾಗಿ ನೀಡಿದ್ದರೇ ಎನ್ನುವುದನ್ನು ತಿಳಿಯಲು ತಾನು ಸಿಬಿಐಗೆ ಪತ್ರ ಬರೆಯುವುದಾಗಿ ಪಾಟೀಲ್ ಹೇಳಿದ್ದಾರೆ.
ಉಗ್ರ ಚಟುವಟಿಕೆ ನಡೆಸುವ ಯಾವುದೇ ಸಂಘಟನೆಯನ್ನು ನಿಷೇಧಿಸಬೇಕಾಗಿದೆ. ಉಗ್ರ ಕೃತ್ಯಗಳಲ್ಲಿ ಒಳಗೊಂಡ ಸಂಘಟನೆಗಳ ದಾಖಲೆ ಪಡೆಯಲು ಎಟಿಎಸ್‌ಗೆ ತಾನು ತಿಳಿಸಿರುವುದಾಗಿ ಪಾಟೀಲ್ ಅಂದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ