ಬುಧವಾರ, ಜನವರಿ 19, 2011

ಸ್ಫೋಟಗಳ ಮರುತನಿಖೆಗೆ ಪಾಪ್ಯುಲರ್ ಫ್ರಂಟ್ ಆಗ್ರಹ

ಹಿಂದುತ್ವ ಭಯೋತ್ಪಾದನೆಯ ವಿರುದ್ಧ ಅಭಿಯಾನಕ್ಕೆ ಸಂಘಟನೆಯ ತೀರ್ಮಾನ
ಕ್ಯಾಲಿಕಟ್: 1992ರ ನಂತರದ ಎಲ್ಲಾ ಬಾಂಬ್ ಸ್ಫೋಟಗಳನ್ನು ಮರು ತನಿಖೆ ನಡೆಸುವುದಕ್ಕಾಗಿ ಕೇಂದ್ರ ಸರಕಾರವು ಸ್ವತಂತ್ರ ತನಿಖಾ ಸಂಸ್ಥೆಯೊಂದನ್ನು ರಚಿಸಬೇಕು ಮತ್ತು ದೇಶದಲ್ಲಿ ನಡೆದ ಇತ್ತೀಚಿಗಿನ ಎಲ್ಲಾ ಭಯೋತ್ಪಾದಕ ಕೃತ್ಯಗಳ ಬಗ್ಗೆ ವರದಿಯನ್ನು ಸಿದ್ಧಪಡಿಸಬೇಕು ಎಂದು ಜನವರಿ 16ರಂದು ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯು ಪುನರ್ ಒತ್ತಾಯಿಸಿದೆ. ಪೊಲೀಸ್ ಹಾಗೂ ಆಡಳಿತ ವರ್ಗದಲ್ಲಿ ಕೋಮುವಾದಿಗಳ ಗುಂಪೊಂದು ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿಯೂ ಬಾಂಬ್ ಸ್ಫೋಟಗಳ ಹಿಂದಿನ ಶಕ್ತಿಗಳನ್ನು ಬೆಳಕಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯು ಅಭಿಪ್ರಾಯಿಸಿದೆ.
ಸಂಘಪರಿವಾರ ನಡೆಸಿದ ಸ್ಫೋಟ  ಪ್ರಕರಣಗಳನ್ನು ತಪ್ಪಾಗಿ ಮುಸ್ಲಿಮ್ ಯುವಕರ ಮೇಲೆ ಹೇರಲಾಗಿದ್ದು, ಅವರನ್ನು ತಕ್ಷಣವೇ ಬಿಡಗಡೆಗೊಳಿಸಬೇಕೆಂದು ಪಾಪ್ಯುಲರ್ ಫ್ರಂಟ್ ಕೇಂದ್ರ ಸರಕಾರ, ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಸರಕಾರಗಳನ್ನು ಒತ್ತಾಯಿಸಿದೆ. ಬಾಂಬ್ ಸ್ಫೋಟಗಳ ಸಂಚು ನಡೆಸಿದ ಆರೆಸ್ಸೆಸ್‌ನ ಪ್ರಮುಖರನ್ನು ಬೆಳಕಿಗೆ ತರಬೇಕು ಮತ್ತು ಆ ಸಂಘಟನೆಯ  ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕೆಂದು ಸಭೆಯು ಆಗ್ರಹಿಸಿದೆ.
ದೇಶದಾದ್ಯಂತ ಆಘಾತವನ್ನು ಸೃಷ್ಟಿಸುವಂತಹ ಹೊಸ ಹೊಸ ವಿದ್ಯಮಾನಗಳು ಬಯಲಾಗುತ್ತಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್‌ನ ಹಿಂದುತ್ವ ಭಯೋತ್ಪಾದನೆಯನ್ನು ಬಹಿರಂಗಪಡಿಸುವುದಕ್ಕಾಗಿ ಪಾಪ್ಯುಲರ್ ಫ್ರಂಟ್ ಅಭಿಯಾನವನ್ನು ನಡೆಸಲಿದೆ ಎಂದುಸಂಘಟನೆ ತಿಳಿಸಿದೆ.
ಕೇವಲ ಆರೆಸ್ಸೆಸ್ ಮೇಲಿನ ನಿಷೇಧದಿಂದ ಅದರ ಭಯೋತ್ಪಾದನೆಯನ್ನು ಅಂತಿಮಗೊಳಿಸುವುದು ಸಾಧ್ಯವಿಲ್ಲ. ಆರೆಸ್ಸೆಸ್‌ನ ಮೇಲೆ ಮೂರು ಬಾರಿ ನಿಷೇಧವನ್ನು ಹೇರಿರುವ ಹೊರತಾಗಿಯೂ ಸಂಘಟನೆಯ ಚಟುವಟಿಕೆಯನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗಿಲ್ಲ. ಬಿಜೆಪಿಯನ್ನೊಳಗೊಂಡಂತೆ ಇತರ ಸಂಘಟನೆಗಳಲ್ಲಿ ಕೆಲಸ ಮಾಡಲು ಆರೆಸ್ಸೆಸ್ ಕಾರ್ಯಕರ್ತರಿಗೆ ಅನುಮತಿ ನೀಡಲಾಗುವುದರಿಂದ ನಿಷೇಧವು ಯಾವುದೇ ಪರಿಣಾಮವನ್ನು ಬೀರದು.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನು ಹಿಂದೆಗೆಯುವಂತೆ ಮತ್ತು ಡಾ ಬಿನಾಯಕ್ ಸೇನ್‌ರನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಸಭೆಯು ಆಗ್ರಹಿಸಿದೆ.
ಡಾ ರನೀಫ್‌ಗೆ ಕೇರಳ ಹೈಕೋರ್ಟ್ ನೀಡಿರುವ ಜಾಮೀನನ್ನು ಸುಪ್ರೀಂ ಕೋಟ್ ಎತ್ತಿ ಹಿಡಿದಿರುವುದನ್ನು ಸಭೆಯು ಸ್ವಾಗತಿಸಿದೆ. ರನೀಫ್ ಪಾಪ್ಯುಲರ್ ಫ್ರಂಟ್‌ನೊಂದಿಗೆ ಸಂಬಂಧ ಹೊಂದಿದ್ದರೆಂಬ ಕಾರಣದಿಂದ ಕೇರಳದ ಸಿಪಿಎಂ ನೇತೃತ್ವದ ಸರಕಾರವು ಆತನಿಗೆ ನೀಡಲಾಗಿದ್ದ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿತ್ತು.
ಅಧ್ಯಕ್ಷ ಇ.ಎಂ.ಅಬ್ದುಲ್ ರಹ್ಮಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರೀಫ್, ಉಪಾಧ್ಯಕ್ಷ ಮುಹಮ್ಮದ್ ಅಲಿ ಜಿನ್ನಾ ಮತ್ತು ಎನ್‌ಇಸಿ ಸದಸ.್ಯ ಮೌಲಾನಾ ಉಸ್ಮಾನ್ ಬೇಗ್, ಪ್ರೊ ಪಿ.ಕೋಯ, ಯಾಸಿರ್ ಹಸನ್, ಒಎಂಎ ಸಲಾಮ್, ಮುಹಮ್ಮದ್ ಖಾಲಿದ್, ಮುಹಮ್ಮದ್ ಸಹಾಬುದ್ದೀನ್, ಅನೀಸ್ ಅಹ್ಮದ್, ಎ.ಎಸ್.ಇಸ್ಮಾಯೀಲ್, ಮುಹಮ್ಮದ್ ರೋಶನ್ ಮತ್ತು ಯಾ ಮೊಯ್ದೀನ್ ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ