ಶನಿವಾರ, ಡಿಸೆಂಬರ್ 11, 2010

ಯಾವ ನ್ಯಾಯಾಧೀಶರು ಭ್ರಷ್ಟರು ಎಂಬುದು ಎಲ್ಲರಿಗೂ ತಿಳಿದಿದೆ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಡಿ. 10: ‘‘ಅಲಹಾಬಾದ್ ಹೈಕೋರ್ಟ್‌ನಲ್ಲಿ ಏನೋ ಕೊಳೆಯುತ್ತಿದೆ’’ ಎಂಬ ಹೇಳಿಕೆಗೆ ಬದ್ಧವಾಗಿರುವ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಅಲಹಾಬಾದ್ ಹೈಕೋರ್ಟ್‌ಗೆ ಯಾವುದೇ ವಿನಾಯತಿಯನ್ನು ನೀಡಲು ನಿರಾಕರಿಸಿದೆ. ಭ್ರಷ್ಟಾಚಾರ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ್ದ ಈ ಹೇಳಿಕೆಯ ಕುರಿತು ಸ್ಪಷ್ಟನೆ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಮಾಡಿತ್ತು.
ನ್ಯಾಯಾಲಯದಲ್ಲಿ ಇನ್ನೂ ಕೆಲವರು ಪ್ರಮಾಣಿಕ ಮತ್ತು ಉತ್ತಮ ನ್ಯಾಯಾಧೀಶರು ಇರುವುದರಿಂದ ಈ ಹೇಳಿಕೆಯು ನ್ಯಾಯಾಧೀಶರ ಸಮಗ್ರತೆಯ ಕುರಿತು ಶಂಕೆಯನ್ನುಂಟು ಮಾಡುತ್ತದೆ ಎಂಬ ಹಿರಿಯ ನ್ಯಾಯವಾದಿ ಪಿಪಿ ರಾವ್‌ರ ವಾದವನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠವು, ‘‘ಇದು ಪ್ರತಿಕ್ರಿಯೆ ನೀಡುವ ಸಮಯವಲ್ಲ, ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ’’ ಎಂದು ಅಭಿಪ್ರಾಯ ಪಟ್ಟಿದೆ.
ರಾವ್‌ರ ವಿವರಣೆ ಸಾಲದು ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠದ ನ್ಯಾಯ ಮೂರ್ತಿ ಕಟ್ಜು, ‘‘ಈ ಎಲ್ಲ ವಿಷಯಗಳನ್ನು ಹೇಳಬೇಡಿ. ನಾನು ಮತ್ತು ನನ್ನ ಕುಟುಂಬವು 100 ವರ್ಷಕ್ಕೂ ಅಧಿಕ ಕಾಲ ಅಲಹಾಬಾದ್ ಹೈಕೋರ್ಟ್‌ನ ಸಹಯೋಗ ಹೊಂದಿದ್ದೇವೆ. ಯಾರು ಭ್ರಷ್ಟರು ಮತ್ತು ಯಾರು ಪ್ರಾಮಾಣಿಕರು ಎಂಬುದು ಜನರಿಗೆ ಗೊತ್ತಿದೆ. ಆದುದರಿಂದ ನನಗೆ ಇದೆಲ್ಲ ಹೇಳಬೇಡಿ’’ ಎಂದು ಸ್ಪಷ್ಟ ಪಡಿಸಿದರು.
‘‘ನಾಳೆ ಮಾರ್ಕಂಡೇಯ ಕಟ್ಜು ಲಂಚ ಸ್ವೀಕರಿಸಲು ಆರಂಭಿಸಿದರೆ, ಇಡೀ ದೇಶಕ್ಕೆ ಅದು ಗೊತ್ತಾಗುತ್ತದೆ. ಹೀಗಾಗಿ ಯಾರು ಪ್ರಮಾಣಿಕರು, ಯಾರು ಭ್ರಷ್ಟರು ಎಂಬ ಕುರಿತು ನನಗೆ ವಿವರಣೆ ನೀಡಬೇಡಿ’’ ಎಂದು ನ್ಯಾಯಮೂರ್ತಿ ಕಟ್ಜು ಹೇಳಿದರು. ಹೇಳಿಕೆಯಿಂದಾಗಿ ಇಡೀ ಹೈಕೋರ್ಟ್ ನ್ಯಾಯಾಂಗದ ಘನತೆಗೆ ಧಕ್ಕೆಯುಂಟಾಗಿದೆ. ಪ್ರಾಮಾಣಿಕ ಮತ್ತು ಭ್ರಷ್ಟ ನ್ಯಾಯಾಧೀಶರ ನಡುವೆ ವ್ಯತ್ಯಾಸವನ್ನು ಪರಿಗಣಿಸಲು ಸಾಧ್ಯವಾಗುತ್ತಿಲ್ಲ ಎಂದು ರಾವ್ ತನ್ನ ವಾದದಲ್ಲಿ ವಾದಿಸಿದ್ದರು.
‘‘ಅಲಹಾಬಾದ್ ಹೈಕೋರ್ಟ್‌ನಲ್ಲಿ ಏನೋ ಕೊಳೆಯುತ್ತಿದೆ’’ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಪೀಠವು ಹೇಳಿಕೆಯೊಂದರಲ್ಲಿ ಹೈಕೋರ್ಟ್ ನ್ಯಾಯಾಧೀಶರ ಭ್ರಷ್ಟಾಚಾರದ ಕುರಿತು ಸೂಚ್ಯವಾಗಿ ತಿಳಿಸಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ