ಬುಧವಾರ, ಡಿಸೆಂಬರ್ 22, 2010

ಭ್ರಷ್ಟ ಮಂತ್ರಿಗಳ ದಾಖಲೆ ಇದೆ-ರಾಜಭವನಕ್ಕೆ ಬನ್ನಿ: ಗವರ್ನರ್

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಭವನಕ್ಕೆ ಬಂದರೆ ಬಿಜೆಪಿ ಸರಕಾರದ ಭ್ರಷ್ಟ ಮಂತ್ರಿಗಳ ದಾಖಲೆಗಳನ್ನು ಒದಗಿಸಲು ಸಿದ್ದನಿದ್ದೇನೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರತಿಸವಾಲು ಹಾಕುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ಮತ್ತು ಗವರ್ನರ್ ನಡುವಿನ ಜಂಗೀಕುಸ್ತಿ ಮುಂದುವರಿದಂತಾಗಿದೆ.

ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದಿರುವ ಮುಖ್ಯಮಂತ್ರಿಗಳ ಹೇಳಿಕೆಗೆ ಇಇಪಿಸಿ ಇಂಡಿಯಾ ಸಂಸ್ಥೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಕ್ಷಿಣ ವಲಯದ ಎಕ್ಸ್‌ಪರ್ಟ್ ಅವಾರ್ಡ್ 2010 ಕಾರ್ಯಕ್ರಮದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯ ಸರಕಾರ ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳುವ ಅಗತ್ಯವಿಲ್ಲ. ಯಾಕೆಂದರೆ ಸರಕಾರದಲ್ಲಿರುವ ಭ್ರಷ್ಟ ಮಂತ್ರಿಗಳು, ಶಾಸಕರ ಪಟ್ಟಿ ನನ್ನ ಬಳಿ ಇದೆ. ಅದರ ಅಗತ್ಯವಿದ್ದಲ್ಲಿ ರಾಜಭವನಕ್ಕೆ ಬಂದು ಪರಿಶೀಲಿಸಬಹುದು ಎಂದು ರಾಜ್ಯಪಾಲರು ನೇರ ಆಹ್ವಾನ ನೀಡಿದ್ದಾರೆ. ಈಗಾಗಲೇ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿರುವ ಸಚಿವರಾದ ಜಿ.ಜನಾರ್ದನ ರೆಡ್ಡಿ, ಜಿ.ಕರುಣಾಕರ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರ ನೀಡಿದ್ದೇನೆ. ಅಲ್ಲದೇ ಇನ್ನಷ್ಟು ಸಚಿವರ, ಶಾಸಕರ ವಿವರ ಕೂಡ ನನ್ನ ಬಳಿ ಇದೆ ಎಂದು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಭ್ರಷ್ಟಾಚಾರದ ವಿರುದ್ಧ ದೇಶದ ವಿವಿಧೆಡೆ ಬೃಹತ್ ರಾಲಿ ನಡೆಸುತ್ತಿದೆ. ಆದರೆ ಕರ್ನಾಟಕದಲ್ಲಿ ಯಾಕೆ ನಡೆಸುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿರುವ ಅವರು, ರಾಜ್ಯದಲ್ಲಿ ಪ್ರಮುಖ ಮುಖಂಡರೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಹಾಗಾಗಿ ಬಿಜೆಪಿ ಏನು ಮಾಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಆದರೆ ನಾನು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳುತ್ತೇನೆ, ಭ್ರಷ್ಟ ಮಂತ್ರಿಗಳ ಪಟ್ಟಿ ಕೊಡಲು ನಾನು ಸಿದ್ದ. ಅದನ್ನು ಮುಖ್ಯಮಂತ್ರಿಗಳಿಗೂ ಒದಗಿಸುತ್ತೇನೆ. ಅವರು ರಾಜಭವನಕ್ಕೆ ಬರಲಿ ಎಂದು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.

ರಾಜ್ಯದಲ್ಲಿ ನಡೆದಿರುವ ಭೂ ಹಗರಣ, ಅಕ್ರಮ ಗಣಿಗಾರಿಕೆ ಕುರಿತಂತೆ ರಾಜ್ಯಪಾಲ ಭಾರದ್ವಾಜ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎರಡು ಪತ್ರ ಬರೆದು ವಿವರಣೆ ನೀಡುವಂತೆ ಕೋರಿದ್ದರು. ಆದರೆ ಮುಖ್ಯಮಂತ್ರಿಗಳು ತಾನು ಯಾವುದೇ ಭ್ರಷ್ಟಾಚಾರ ಎಸಗಿಲ್ಲ. ಅಷ್ಟೇ ಅಲ್ಲ ರೆಡ್ಡಿ ಬ್ರದರ್ಸ್ ಕೂಡ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿಲ್ಲ ಎಂದು ಎರಡು ಸಾಲಿನ ಉತ್ತರ ನೀಡಿದ್ದರು. ಆ ನಿಟ್ಟಿನಲ್ಲಿ ಸಿಎಂ ನೀಡಿರುವ ಉತ್ತರ ತನಗೆ ಸಮಾಧಾನ ತಂದಿಲ್ಲ. ಮತ್ತೆ ಪತ್ರ ಬರೆಯುವುದಾಗಿ ರಾಜ್ಯಪಾಲರು ತಿಳಿಸಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ