ಶುಕ್ರವಾರ, ಡಿಸೆಂಬರ್ 03, 2010

15 ದಿನಗಳ ಸಂಸತ್ ಬಿಕ್ಕಟ್ಟು: ನಡೆಯದ ಕಲಾಪ ದೇಶದ ಬೊಕ್ಕಸಕ್ಕೆ 95 ಕೋಟಿ ರೂ. ನಷ್ಟ

ನವೆಂಬರ್ 9ರಂದು ಸಂಸತ್‌ನ ಚಳಿಗಾಲದ ಅಧಿವೇಶನವು ಆರಂಭಗೊಂಡ ನಂತರ ಒಂದೇ ಒಂದು ದಿನ ಕೂಡಾ ಸಂಸತ್ ಕಲಾಪ ಸುಗಮವಾಗಿ ನಡೆಯಲು ಸಾಧ್ಯವಾಗಿಲ್ಲ. 2 ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆಯಾಗಬೇಕೆಂದು ಪಟ್ಟು ಹಿಡಿದು, ಗದ್ದಲವೆಬ್ಬಿಸುತ್ತಿರುವುದರಿಂದ ಸದನ ರಣರಂಗವಾಗಿದೆ.

ಹೊಸದಿಲ್ಲಿ,ಡಿ.2: ಕಳೆದ 15 ದಿನಗಳಿಂದ 2 ಜಿ ಸ್ಪೆಕ್ಟ್ರಂ ಹಗರಣದ ಹಿನ್ನೆಲೆಯಲ್ಲಿ ಸಂಸತ್‌ನ ಉಭಯ ಸದನಗಳಲ್ಲಿ ಯುಪಿಎ ಸರಕಾರ ಹಾಗೂ ಪ್ರತಿಪಕ್ಷಗಳ ನಡುವೆ ನಡೆಯುತ್ತಿರುವ ಜಟಾಪಟಿಯಲ್ಲಿ, ಉಭಯ ಸದನಗಳ ಕಲಾಪಗಳು ಸ್ತಬ್ಧಗೊಂಡಿದ್ದರಿಂದ ನಮ್ಮ ದೇಶದ ಬೊಕ್ಕಸಕ್ಕೆ ಆಗಿರುವ ನಷ್ಟವೆಷ್ಟು ಗೊತ್ತೇ ?. ಬರೋಬ್ಬರಿ 95 ಕೋಟಿ ರೂ.!.ನವೆಂಬರ್ 9ರಂದು ಸಂಸತ್‌ನ ಚಳಿಗಾಲದ ಅಧಿವೇಶನವು ಆರಂಭಗೊಂಡ ನಂತ ಒಂದೇ ಒಂದು ದಿನ ಕೂಡಾ ಸಂಸತ್ ಕಲಾಪ ನಡೆಯಲು ಸಾಧ್ಯವಾಗಿಲ್ಲ.
2 ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆಯಾಗಬೇಕೆಂದು ಪಟ್ಟು ಹಿಡಿದು, ಗದ್ದಲ ವೆಬ್ಬಿಸುತ್ತಿರುವುದರಿಂದ ಸದನ ರಣರಂಗ ವಾಗಿದೆ.
  ಪ್ರತಿಪಕ್ಷಗಳ ಬೇಡಿಕೆಗೆ ಸರಕಾರವು ಮಣಿಯದಿರುವುದು ಸಂಸತ್‌ನಲ್ಲಿ ಪ್ರತಿಪಕ್ಷಗಳ ಕಲಾಪಗಳ ಸುಗಮ ನಿರ್ವಹಣೆಗೆ ತಡೆಯೊಡ್ಡುತ್ತಿವೆ. ಹೀಗಾಗಿ ಸರಾಸರಿ ಪ್ರತಿ ದಿನವೂ ಸಂಸತ್‌ಗೆ 10 ನಿಮಿಷಗಳಿಗಿಂತ ಹೆಚ್ಚು ಸಮಯ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಅಧಿಕೃತ ಅಂಕಿಅಂಶಗಳ ಪ್ರಕಾರ ಪ್ರಸಕ್ತ ವಿತ್ತ ವರ್ಷದಲ್ಲಿ ಲೋಕಸಭೆಗೆ ಒಟ್ಟು ಬಜೆಟ್ 347.65 ಕೋಟಿ ರೂ. ಆಗಿದ್ದರೆ, ರಾಜ್ಯಸಭೆಗೆ ಮೀಸಲಾದ ಬಜೆಟ್ 172.33 ಕೋಟಿ ರೂಪಾಯಿ.
 ಸಂಸತ್‌ನ ಕಾರ್ಯನಿರ್ವಹಣೆಗೆ ಹೊಣೆ ಹೊಂದಿರುವ ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೆ ಕೂಡಾ 7.47 ಕೋಟಿ ರೂ. ಮೊತ್ತದ ಪ್ರತ್ಯೇಕ ಬಜೆಟ್‌ನ್ನು ನೀಡಲಾಗುತ್ತಿದೆ. ಹೀಗೆ ಈ ಮೂರು ಬಜೆಟ್‌ಗಳ ಸಂಯುಕ್ತ ಮೊತ್ತ 527.45 ಕೋಟಿ ರೂ.
 ಸಂಸತ್ ಸದಸ್ಯರ, ಉಭಯ ಸದನಗಳ ಸ್ಪೀಕರ್ ಹಾಗೂ ಉಪಸ್ಪೀಕರ್ ಗಳ ವೇತನಗಳು, ಸಂಸದರ ವಿದೇಶ ಪ್ರವಾಸ ಹಾಗೂ ಭಾರತಕ್ಕೆ ಆಗಮಿಸುವ ವಿದೇಶಿ ಗಣ್ಯರಿಗಾಗಿ ತಗಲು ಖರ್ಚುಗಳು ಕೂಡಾ ಇದರ ವ್ಯಾಪ್ತಿಗೊಳಪಡುತ್ತದೆ.
 ಒಂದು ವರ್ಷದಲ್ಲಿ ಸಂಸತ್ ಬಜೆಟ್, ಮುಂಗಾರು ಹಾಗೂ ಚಳಿಗಾಲ ಅಧಿವೇಶನಗಳನ್ನು ನಿರ್ವಹಿಸುತ್ತದೆ.
ಉಭಯ ಸದನಗಳ ನಿಗದಿತ ಕಲಾಪ ವ್ಯವಹಾರಗಳ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಸಂಸತ್ ಬಜೆಟ್ ಅಧಿವೇಶನದಲ್ಲಿ 35 ಹಾಗೂ ಮುಂಗಾರು ಮತ್ತು ಚಳಿಗಾಲದ ಅಧಿವೇಶನದಲ್ಲಿ ತಲಾ 24 ಹೀಗೆ ಒಟ್ಟು 83 ಬೈಠಕ್‌ಗಳನ್ನು ನಡೆಸಬೇಕಾಗಿದೆ. ಅಂದರೆ, ಸರಕಾರವು ಸರಾಸರಿ ಸಂಸತ್ ಕಲಾಪಗಳಿಗಾಗಿ ಪ್ರತಿ ದಿನವೂ 6.35 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆಯೆಂದಾಯಿತು.ಸಂಸತ್ ಅಧಿವೇಶನದ 15ನೆ ದಿನವಾದ ಗುರುವಾರ ಕೂಡಾ ಸಂಸತ್‌ನಲ್ಲಿ ಯಾವುದೇ ಕಲಾಪಗಳು ನಡೆಯದೆ ಹೋದವು. ಹೀಗೆ ಈ ಹದಿನೈದು ದಿನಗಳಲ್ಲಿ ಸಂಸತ್ ಯಾವುದೇ ಮಹತ್ವದ ಕಲಾಪ ವ್ಯವಹಾರಗಳನ್ನು ನಿರ್ವಹಿಸಿಲ್ಲವಾದ್ದರಿಂದ ಸುಮಾರು 95.25 ಕೋಟಿ ರೂ.ಗಳು ವ್ಯರ್ಥವಾಗಿ ಖರ್ಚಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ