ಗುರುವಾರ, ಮಾರ್ಚ್ 31, 2011

ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್. ಆಚಾರ್ಯ ತಾನು ಯುಪಿಸಿಎಲ್‌ನ ಏಜೆಂಟ್

: ಮಂಗಳವಾರ ಗೌಪ್ಯವಾಗಿ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದ ಒಳಗೆ ಭೇಟಿ ನೀಡಿ, ಕೇವಲ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂತ್ರಸ್ತರ ಸಂಕಟಗಳನ್ನು ಆಲಿಸದೇ, ಕಂಪೆನಿಯ ಹಾರುಬೂದಿ ಹಾಗೂ ಕಲ್ಲಿದ್ದಲು ನಿರ್ವಹಣಾ ಘಟಕ ಅತ್ಯುತ್ತಮ ಹಾಗೂ ಅಚ್ಚುಕಟ್ಟಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್. ಆಚಾರ್ಯ ತಾನು ಯುಪಿಸಿಎಲ್‌ನ ಏಜೆಂಟ್ ಎಂಬುದನ್ನು ಮತ್ತೊಮ್ಮೆ ಬಹಿರಂಗವಾಗಿ ಸ್ಪಷ್ಟಪಡಿಸಿದಂತಾ ಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಟೀಕಿಸಿದೆ.

ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಸರಕಾರ, ಕಾರ್ಯಕರ್ತರು ಮತ್ತು ಕೆಲವು ಸ್ಥಳೀಯ ನಾಯಕರನ್ನು ಗದರಿಸಿ, ಬೆದರಿಸಿ ಯುಪಿಸಿಎಲ್ ಈ ಮಟ್ಟಕ್ಕೆ ಬರುವಂತೆ ಮಾಡಿದೆ. ಪ್ರಾಯಶ: ಇದು ಕೊನೆ ಕೂಡಾ ಆಗಿದೆ ಎಂದು ರೈತ ಸಂಘ ಜಿಲ್ಲಾ ಘಟಕ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.


ಪದೇ ಪದೇ ವಿದ್ಯುತ್ ಬೇಡವೇ ಎಂದು ಹೇಳಿಕೆ ನೀಡುವ ಡಾ.ಆಚಾರ್ಯರು, ಮಂಗಳೂರಿನ ತಣ್ಣೀರುಬಾವಿ ವಿದ್ಯುತ್ ಘಟಕಕ್ಕೆ ಕೋಟ್ಯಂತರ ರೂ. ಬಿಲ್ ಬಾಕಿ ಇಟ್ಟು ಕಂಪೆನಿ ಬೇರೆಡೆಗೆ ವಲಸೆ ಹೋಗುವಂತೆ ಮಾಡಿದ್ದು ತಮ್ಮ ಸರಕಾರ ತಾನೇ. ಆಗ ಎಲ್ಲಿ ಹೋಗಿತ್ತು ನಿಮ್ಮ ಬುದ್ಧಿವಂತಿಕೆ ಎಂದು ಅದು ಪ್ರಶ್ನಿಸಿದೆ.


  ಜಿಲ್ಲೆಗೆ ಅತಿ ಕಡಿಮೆ ದರದಲ್ಲಿ ಶುದ್ಧ ವಿದ್ಯುತ್ ನೀಡುತ್ತಿದ್ದ ಜೋಗ ಹಾಗೂ ವಾರಾಹಿ ಯೋಜನೆಯನ್ನು ಶಿವಮೊಗ್ಗಕ್ಕೆ ಹೋಗುವಂತೆ ಮಾಡಿದ್ದು, ಕಳಪೆ ಯುಪಿಸಿಎಲ್ ಘಟಕವನ್ನು ಇಲ್ಲಿ ಸ್ಥಾಪಿಸಿ, ಅದರಿಂದ ಪರಿಸರ ನಾಶ, ಕುಡಿಯಲು ಶುದ್ಧ ನೀರಿನ ಕೊರತೆ, ಅನಾರೋಗ್ಯ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನಾಶಕ್ಕೆ ಕಾರಣರು ಯಾರು ಎಂದು ಪ್ರಶ್ನಿಸಿರುವ ರೈತ ಸಂಘ, ಇದನ್ನು ಮಾಡಿರು ವುದು ಮುಖ್ಯಮಂತ್ರಿಗಳಿಗೆ ತಮ್ಮ ನಿಯತ್ತು ತೋರಿಸಲೋ ಅಥವಾ ತಮ್ಮನ್ನು ಸೋಲಿಸಿದ ಉಡುಪಿ ಜನತೆಯ ಮೇಲೆ ಹಗೆ ತೀರಿಸಲೋ ಎಂದು ಪ್ರಶ್ನಿಸಿದೆ.

ಯೋಜನೆಯಿಂದ ಪರಿಸರ ಹಾಗೂ ಜನತೆಯ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು 9 ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆ ಉತ್ತರಿ ಸುವಂತೆ ಸಚಿವ ಆಚಾರ್ಯರಿಗೆ ಸವಾಲು ಹಾಕಿದೆ.
ಎಲ್ಲ ಬಲ್ಲವರಂತೆ ಹೇಳಿಕೆ ನೀಡುವ ತಾವು ರಹಸ್ಯವಾಗಿ ಯೋಜನಾ ಸ್ಥಳಕ್ಕೆ ಭೇಟಿ ನೀಡಲು ಕಾರಣವೇನು ಎಂದು ರೈತ ಸಂಘದ ಉಡುಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹೆಗ್ಡೆ ಪ್ರಶ್ನಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ