ಕಾಸರಗೋಡು, ಡಿ.30: ವಿದ್ಯುತ್ ಶಾಕ್ ತಗುಲಿ ದಂಪತಿ ದಾರುಣವಾಗಿ ಮೃತಪಟ್ಟ ಘಟನೆ ಬದಿಯಡ್ಕದ ಪೆರಡಾಲ ಎಂಬಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ
ಮೃತರನ್ನು ದಂಪತಿಯಾದ ಪೆರಡಾಲ ನಿವಾಸಿ ಹಸೈನಾರ್ (60) ಹಾಗೂ ಆಸಿಯಮ್ಮಾ(52) ಎಂದು ಗುರುತಿಸಲಾಗಿದೆ. ಇವರ ಪುತ್ರಿ ಮೈಮೂನಾ(16) ಎಂಬವರು ಗಂಭೀರ ಗಾಯಗೊಂಡಿದ್ದಾರೆ.
ಇಂದು ಮಧ್ಯಾಹ್ನ 12:30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಆಸಿಯಮ್ಮಾ ಬಟ್ಟೆ ಒಗೆದು ಮನೆಯಂಗಳದಲ್ಲಿ ಕಟ್ಟಿದ್ದ ತಂತಿಯಲ್ಲಿ ಹಾಕುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬಟ್ಟೆ ಹಾಕುವ ತಂತಿಗೆ ವಿದ್ಯುತ್ ಸಂಪರ್ಕದ ವಯರ್ ಸ್ಪರ್ಶಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬಟ್ಟೆ ಹಾಕುವ ತಂತಿಯ ಮೇಲಿಂದ ನೀರಿನ ಮೋಟಾರ್ ಪಂಪ್‌ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ವಯರ್ ಹಾದು ಹೋಗಿತ್ತು. ಈ ವಯರ್ ಬಟ್ಟೆ ಹಾಕಲು ಕಟ್ಟಿದ್ದ ವಿದ್ಯುತ್ ವಾಹಕವಾಗಿರುವ ತಂತಿಗೆ ತಗುಲಿ ವಿದ್ಯುತ್ ಪ್ರವಾಹಿಸಿದ್ದರಿಂದ ಶಾಕ್ ತಗುಲಿರಬೇಕು ಎಂದು ಶಂಕಿಸಲಾಗಿದೆ.
ಆಸಿಯಮ್ಮಾರ ಬೊಬ್ಬೆ ಕೇಳಿ ರಕ್ಷಿಸಲು ಧಾವಿಸಿ ಬಂದ ಹಸೈನಾರ್ ಕೂಡಾ ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ. ಈ ಸಂದರ್ಭ ರಕ್ಷಣೆಗೆ ಯತ್ನಿಸಿದ್ದ ಮೈಮೂನಾ ದೂರಕ್ಕೆ ಎಸೆಯಲ್ಪಟ್ಟಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡಿರುವ ಮೈಮೂನಾರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ