ಶುಕ್ರವಾರ, ಫೆಬ್ರವರಿ 04, 2011

ಇಡೀ ಹತ್ಯಾಕಾಂಡದ ನಿರ್ವಹಣೆಯಲ್ಲಿ ಮೋದಿ:ವಿಶೇಷ ತನಿಖಾ ತಂಡ

ಹೊಸದಿಲ್ಲಿ, ಫೆ.4: 2002ರ ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಮುಸ್ಲಿಮರ ನರಮೇಧದ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ‘ಪ್ರತಿಯೊಂದು ಕ್ರಿಯೆಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ’ ಇರುತ್ತದೆ ಎಂಬ ಸಿದ್ಧಾಂತಕ್ಕೆ ಅಂಟಿಕೊಂಡು ಉಂಟಾಗಿದ್ದ ಗಂಭೀರ ಪರಿಸ್ಥಿತಿಯನ್ನು ನಿರ್ಲಕ್ಷಿಸಲು ಪ್ರಯತ್ನಿಸಿದ್ದರು ಎಂದು ಗುರುತಿಸಿರುವ ಗುಜರಾತ್ ಗಲಭೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಇಡೀ ಹತ್ಯಾಕಾಂಡದ ನಿರ್ವಹಣೆಯಲ್ಲಿ ಮೋದಿ ಹಲವು ಪ್ರಮಾದಗಳನ್ನು ಎಸಗಿದ್ದಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಮಾಜಿ ಸಿಬಿಐ ನಿರ್ದೇಶಕ ಆರ್.ಕೆ.ರಾಘವನ್ ನೇತೃತ್ವದ ಸಿಟ್ 2010ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ಗೆ 600 ಪುಟಗಳ ವರದಿಯನ್ನು ಸಲ್ಲಿಸಿತ್ತು. ಹತ್ಯಾಕಾಂಡದ ಸಂದರ್ಭದಲ್ಲಿ ಪ್ರಮುಖ ಸಾಕ್ಷಗಳನ್ನು ನಾಶಪಡಿಸಿದ, ಪ್ರಚೋದನಕಾರಿ ಭಾಷಣಗಳನ್ನು ಮಾಡಿದ, ಸಂಘ ಪರಿವಾರದ ಸದಸ್ಯರನ್ನು ಸರಕಾರಿ ವಕೀಲರಾಗಿ ನೇಮಿಸಿದ, ಪೊಲೀಸ್ ನಿಯಂತ್ರಣ ಕೊಠಡಿಗಳಲ್ಲಿ ತನ್ನ ಸಚಿವರನ್ನು ನಿಯೋಜಿಸಿದ ಹಾಗೂ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡಿದ ಪ್ರಮಾದಗಳನ್ನು ಮೋದಿ ಎಸಗಿದ್ದಾರೆ ಎಂದು ಸಿಟ್ ತನ್ನ ವರದಿಯಲ್ಲಿ ತಿಳಿಸಿದೆ ಎಂದು ತೆಹಲ್ಕಾ ಸಾಪ್ತಾಹಿಕ ಬಹಿರಂಗ ಪಡಿಸಿದೆ.
ಫೆಬ್ರವರಿ 27,2002 ರಂದು ಗೋಧ್ರಾದಿಂದ ಮರಳಿದ ಬಳಿಕ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ರಾಜ್ಯದ ಎಲ್ಲ ಹಿರಿಯ ಅಧಿಕಾರಿಗಳು ಹಾಗು ಪೊಲೀಸರ ಸಭೆ ನಡೆಸಿದ್ದರು ಎಂಬುದನ್ನು ಸಿಟ್ ವರದಿ ದೃಢಪಡಿಸಿದೆ. ಆದರೆ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ಪೈಕಿ ಹೆಚ್ಚಿನವರಿಗೆ ಮೋದಿ ಸರಕಾರ ಅವರ ನಿವೃತ್ತಿಯ ಬಳಿಕ ಬೇರೆ ಲಾಭದಾಯಕ ಹುದ್ದೆಗಳನ್ನು ಕೊಟ್ಟಿರುವುದರಿಂದ ಮತ್ತು ಸೇವೆಯಲ್ಲಿರುವವರು ಮೋದಿ ಸರಕಾರಕ್ಕೆ ಹೆದರಿಕೊಂಡು ಸಭೆಯಲ್ಲಿ ನಡೆದ ಚರ್ಚೆಯನ್ನು ಬಹಿರಂಗಪಡಿಸಲು ಹಿಂದೇಟು ಹಾಕಿದ್ದಾರೆ ಎಂದು ವರದಿ ತಿಳಿಸಿದೆ.
ಅಲ್ಲದೆ ಗಲಭೆ ನಡೆಯುತ್ತಿದ್ದ ವೇಳೆ ರಾಜ್ಯ ಸರಕಾರವು ಅಹ್ಮದಾಬಾದ್ ನಗರ ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ರಾಜ್ಯ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಸಚಿವರಾದ ಅಶೋಕ್ ಭಟ್ ಮತ್ತು ಐ.ಕೆ.ಜಡೇಜರನ್ನು ಕಾನೂನು ಬಾಹಿರವಾಗಿ ನಿಯುಕ್ತಿಗೊಳಿಸಿತ್ತು. ಯಾವುದೇ ವಿಶೇಷಾಧಿಕಾರ ಹೊಂದಿರದಿದ್ದ ಈ ಸಚಿವರು ಪರಿಸ್ಥಿತಿಯನ್ನು ಮತ್ತಷ್ಟು ಕೆಡಿಸಿದರು. ಪರಿಸ್ಥಿತಿ ನಿಯಂತ್ರಿಸುತ್ತಿದ್ದ ಅಧಿಕಾರಿಗಳಿಗೆ ತಪ್ಪು ನಿರ್ದೇಶನ ಮಾಡಲು ಮತ್ತು ಪೊಲೀಸರ ಕೆಲಸದಲ್ಲಿ ಮಧ್ಯ ಪ್ರವೇಶ ಮಾಡುವ ಸಲುವಾಗಿಯೇ ಅವರನ್ನು ಇಲ್ಲಿ ಕೂರಿಸಲಾಗಿತ್ತು.
ಆಗ ರಾಜ್ಯದ ಗೃಹ ಖಾತೆಯೂ ಮುಖ್ಯಮಂತ್ರಿ ಮೋದಿ ಬಳಿಯೇ ಇದ್ದುದರಿಂದ ಈ ನಿರ್ಧಾರದಲ್ಲಿ ಅವರ ಆಶೀರ್ವಾದವೂ ಇರಲೇ ಬೇಕು ಎಂದು ವರದಿ ಹೇಳಿದೆ. ಗೋಧ್ರಾ ದುರಂತ ನಡೆದ ಸ್ಥಳಕ್ಕೆ ಅದೇ ದಿನ ತೆರಳಿದ ಮೋದಿ ಅಹ್ಮದಾಬಾದ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರ ಹತ್ಯೆ ನಡೆದಿದ್ದರೂ ಆ ಪ್ರದೇಶಕ್ಕೆ ಭೇಟಿ ನೀಡದೆ ಪಕ್ಷಪಾತ ಧೋರಣೆ ತಳೆದರು. ಗಲಭೆ ಪ್ರಕರಣಗಳಲ್ಲಿ ಸರಕಾರದ ಪರ ವಾದಿಸಲು ಸಂಘ ಪರಿವಾರದ ವಕೀಲರನ್ನೇ ಮೋದಿ ಸರಕಾರ ನೇಮಕ ಮಾಡಿತು. 2002ರ ಫೆ.28ರಂದು ವಿಶ್ವ ಹಿಂದೂ ಪರಿಷತ್ ಕ್ರಮವಾಗಿ ನೀಡಿದ್ದ ಬಂದ್ ಕರೆಯನ್ನು ಸರಕಾರ ತಡೆಯಲಿಲ್ಲ. ಗಲಭೆ ವೇಳೆ ಕೆಲವು ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ, ಗಲಭೆ ನಿಯಂತ್ರಿಸಲೆತ್ನಿಸಿದ್ದಕ್ಕೆ ಅವರನ್ನು ವರ್ಗಾವಣೆ ಮಾಡ ಲಾಯಿತು ಎಂದು ಸಿಟ್ ನೀಡಿರುವ ವರದಿಯಲ್ಲಿ ಸರಕಾರದ ಲೋಪವನ್ನು ತಿಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ