* ಹಿಂದುತ್ವ ಅಜೆಂಡಾಗಳಿಗೆ ಬದ್ಧರಾಗಿದ್ದ ನೀವು ಅದಕ್ಕೆ ತದ್ವಿರುದ್ಧವಾದ ಜೆಡಿಎಸ್‌ನತ್ತ ಮುಖ ಮಾಡಲು ಕಾರಣ?
ಉ: ನಾನು ನಂಬಿಹೋಗಿದ್ದು ಪ್ರಾಮಾಣಿಕ ಹಿಂದುತ್ವವನ್ನು. ಆದರೆ ಅಲ್ಲಿದ್ದದ್ದು ರಾಜಕೀಯ ಪ್ರೇರಿತವಾದದ್ದು ಅಂತ ಕ್ರಮೇಣ ಗೊತ್ತಾ ಯಿತು. ದತ್ತಪೀಠ, ಗೋಹತ್ಯೆ ನಿಷೇಧ ಇವೆಲ್ಲ ಮತಪ್ರಣೀತ ರಾಜಕೀಯ ಹಿಂದುತ್ವದ ಭಾಗ ಗಳೇ ಅಂತಲೂ ಅರಿವಾಯ್ತು. ಆದರೆ ನಿಜ ವಾದ ಹಿಂದುತ್ವ ಜನಸಾಮಾನ್ಯರ ಜೀವನದಲ್ಲಿ ತಂತಾನೇ ಹಾಸುಹೊಕ್ಕಾಗಿದೆ. ಅದು ಪ್ರಾಮಾಣಿಕ ಹಿಂದುತ್ವ......
* ಪ್ರಾಮಾಣಿಕ ಹಿಂದುತ್ವ ಅಂದ್ರೆ?!
ಉ: ಒಬ್ಬ ದಲಿತ ಹಿಂದೂ ಆಗಿಯೇ ಉಳಿ ತಾನಂದ್ರೆ ಅದು ಆತನ ಪ್ರಾಮಾಣಿಕ ನಂಬಿಕೆ. ಆತನಿಗೆ ವೇದ, ಉಪನಿಷತ್ತುಗಳು ಬೇಕಿಲ್ಲ. ಅದರ ನಡುವಲ್ಲಿಯೂ ಈ ಆಚಾರವಿಚಾರಗಳಿಗೆ ತಕ್ಕುದಾಗಿ ನಡೀತಾನಲ್ಲ? ಅದೇ ಪ್ರಾಮಾಣಿಕ ಹಿಂದುತ್ವ.
* ಅಂಥ ‘ಪ್ರಾಮಾಣಿಕ ಹಿಂದುತ್ವ’ಕ್ಕೆ ಅನ್ಯಧರ್ಮೀಯರಿಂದ ಯಾವ ರೀತಿ ತೊಂದರೆ ಯಾಗಿದೆ?
ಉ: ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯದಲ್ಲಿರುವ ಮುಗ್ಧತೆಯ ಕಾರಣದಿಂದ ಕೆಲವಾರು ತೊಂದರೆಗಳಾಗಬಹುದು. ಇಂಥ ಮುಗ್ಧತೆಯನ್ನು ಮತೀಯ ಶಕ್ತಿಗಳು ಉಪಯೋಗಿಸಿ ಕೊಳ್ಳುತ್ತಿವೆ. ಈ ರೀತಿಯ ಮುಗ್ಧತೆ ಮತ್ತು ನ್ಯೂನತೆಗಳು ಮುಸ್ಲಿಂ-ಕ್ರಿಶ್ಚಿಯನ್ನರಲ್ಲಿ ಮಾತ್ರವಲ್ಲ, ಹಿಂದೂಗಳಲ್ಲೂ ಇದೆ. ಇದನ್ನು ಆಗಿನಿಂದಲೂ ವಿರೋಧಿಸಿಕೊಂಡೇ ಬಂದಿದ್ದೇನೆ.
ಎಲ್ಲಾ ಧರ್ಮಗಳೂ ಒಂದಾಗುವಂಥ ವಾತಾವರಣ ನಿರ್ಮಿಸ ಬೇಕೆಂಬುದು ನನ್ನ ಗುರಿ. ಆದರೆ ಈ ಬಿಜೆಪಿ ಅದಕ್ಕೆ ಕಂಟಕವಾಗಿದೆ. ಇದನ್ನು ತೊಲಗಿಸುವುದೊಂದೇ ಧರ್ಮ-ಧರ್ಮಗಳ ಬೆಸುಗೆಗೆ ದಾರಿ... ನಾನೂ ಕೂಡಾ ಮೊದಲು ಭಾರತೀಯ, ಆಮೇಲೆ ಹಿಂದೂ. ಈ ಮನೋಭಾವ ಎಲ್ಲಾ ಧರ್ಮೀಯರಲ್ಲೂ ಮನೆ ಮಾಡಬೇಕಿದೆ.
* ಬಜರಂಗದಳದಲ್ಲಿದ್ದಾಗ ಆರೆಸ್ಸೆಸ್ ಪ್ರಚೋದನೆ ಹೇಗಿತ್ತು?
ಉ: ಈಗಲೇ ಬೇಡ. ಮುಂದಿನ ದಿನಗಳಲ್ಲಿ ಆ ಬಗ್ಗೆ ತುಂಬಾ ಮಾತಾಡೋದಿದೆ.
* ನಿಮಗೀಗ ಮತೀಯವಾದ ತಪ್ಪು ಅನ್ನಿಸಿ ಹೊರ ಬಂದಿದ್ದೀರಿ. ಆದರೆ ಒಳಗಿರೋರನ್ನ ಹೇಗೆ ಪಾರು ಮಾಡಿತ್ತೀರಿ?
ಉ: ನನಗೆ ನನ್ನ ಬಗ್ಗೆ ವಿಶ್ವಾಸವಿದೆ. ಅವರೆಲ್ಲರೊಳಗೂ ಪರಿವರ್ತನೆ ಆಗುತ್ತದೆಂಬ ಭರವಸೆಯೂ ಇದೆ. ಈಗ ಬಜರಂಗದಳದೊಳಗಿರೋ ಅನೇಕ ಕಾರ್ಯಕರ್ತರು ಕೆಟ್ಟೋರಲ್ಲ. ರಾಜಕೀಯ ಹಿಂದುತ್ವವನ್ನು ತ್ಯಜಿಸಿ ಹೋರಾಟವನ್ನು ಸಮಾಜಮುಖಿಯಾಗಿಸಬಲ್ಲ ಮನಸ್ಥಿತಿ ಅವರಲ್ಲಿದೆ. ನಾನೂ ಆ ರೀತಿಯ ಮನಸ್ಥಿತಿಯಿಂದಲೇ ದಳದತ್ತ ಮುಖ ಮಾಡಿದ್ದೇನೆ. ನನಗೆ ರಾಜಕೀಯ ಅಧಿಕಾರದಲ್ಲಿ ಅಂಥಾ ಆಸಕ್ತಿಯಿಲ್ಲ. ಆದರೆ ಬಿಜೆಪಿ ರಾಜಕೀಯ ಶಕ್ತಿಯಾಗಿ ಬೆಳೆದಿರುವುದರಿಂದ ಅದನ್ನು ಬಗ್ಗುಬಡಿಯಲು ಇದು ಅನಿವಾರ್ಯ ಮಾರ್ಗ. ಜೊತೆಗೆ ಜೆಡಿಎಸ್ ನಾಯಕರ ಬಗೆಗೂ ನನಗೆ ವಿಶ್ವಾಸವಿದೆ.
* ಬಿಜೆಪಿ ವಿರುದ್ಧ ಯಾತಕ್ಕಾಗಿ ಹೋರಾಟ.....?
ಉ: ಬಿಜೆಪಿ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದೆ. ಸಂಸ್ಕೃತಿಯನ್ನು ಉದ್ಧಾರವಾಗಿಸೋ ನೆಪದಲ್ಲಿ ಅದನ್ನು ಕೊಂದು ಹಾಕುತ್ತಿದೆ. ಮಹಿಳೆಯರನ್ನು ‘ಮಾತೆಯರು’ ಅಂತೆಲ್ಲಾ ಹೇಳಿಕೊಳ್ಳುವ, ಗೌರವಿಸುವಂತೆ ತೋರಿಸಿಕೊಳ್ಳುವ ಬಿಜೆಪಿ ತಮ್ಮ ಸಚಿವ ಸಂಪುಟದಲ್ಲಿ ಅತ್ಯಾಚಾರಿಯೊಬ್ಬನಿಗೆ ಸ್ಥಾನ ಕೊಟ್ಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ. ಇವರು ರಾಜಕೀಯವನ್ನು ವ್ಯವಹಾರ ಮಾಡಿಕೊಂಡಿದ್ದಾರೆ. ಇಂಥದ್ದರ ವಿರುದ್ಧವೇ ನನ್ನ ಹೋರಾಟ...
* ಈಗ ಧರ್ಮಗಳನ್ನು ಬೆಸೆಯೋ ಮಾತಾಡ್ತಿದ್ದೀರಿ. ಆದರೆ ಚರ್ಚ್ ಮೇಲಿನ ದಾಳಿ ಸಂದರ್ಭದಲ್ಲಿ ಒಡೆಯೋ ಕೆಲಸ ಮಾಡಿದ್ರಿ. ಈ ಬಗ್ಗೆ ಪಾಪಪ್ರಜ್ಞೆ ಇಲ್ಲವೆ?
ಉ: ಅದು ಮತಾಂತರ ನಡೆಸೋ ಕೇಂದ್ರಗಳ ಮೇಲೆ ನಡೆಸಿದ ದಾಳಿ ಅಂತಲೇ ಅಂದು ಕೊಳ್ತೀನಿ. ಆ ನೆಲೆಗಟ್ಟಲ್ಲಿ ಆ ಘಟನೆಯನ್ನು ಸಮರ್ಥಿಸಿಕೊಂಡಿದ್ದನೇ ಹೊರತು ಆ ಸಮುದಾಯದವರ ಮೇಲಿನ ಸಿಟ್ಟಿನಿಂದಲ್ಲ. ಮುಗ್ಧರನ್ನು ಮತಾಂತರ ಮಾಡೋ ದಂಧೆಯೊಂದು ಚಾಲ್ತಿಯಲ್ಲಿರುವುದು ಸುಳ್ಳಲ್ಲ. ಆದರೆ ಅದಕ್ಕೆ ಆ ಇಡೀ ಸಮುದಾಯ ಕಾರಣವಲ್ಲ.
* ಬಜರಂಗದಳದಲ್ಲಿ ಅನ್ಯಾಯವಾಗಿದ್ದರಿಂದಲೇ ಮಹೇಂದ್ರ ಹೊರಬಂದಿದ್ದು ಅನ್ನಲಾಗುತ್ತಿದೆ...
ಉ: ಖಂಡಿತಾ ಇಲ್ಲ. ನನ್ನ ಮನಸ್ಥಿತಿ ಬದಲಾದುದರಿಂದಲೇ ಇಂಥಾ ನಿರ್ಧಾರ ತೆಗೆದುಕೊಂಡಿದ್ದೇನೆ. ಚರ್ಚ್ ಮೇಲಿನ ದಾಳಿ ವಿಚಾರದ ಬಂಧನದ ನಂತರದಲ್ಲಿ ನಾನು ಎದುರುಗೊಂಡ ಘಟನೆಯೊಂದು ಆ ನಿರ್ಧಾರಕ್ಕೆ ಕಾರಣವಾಯಿತು.
ಬೆಳ್ತಂಗಡಿಯಲ್ಲಿ ಒಬ್ಬ ಮಹಿಳೆ ಮತಾಂತರಗೊಂಡಿದ್ದರು. ಈ ಬಗ್ಗೆ ವಿಚಾರಿಸಲು ಹೋದಾಗ ಆಕೆಯ ಹಿನ್ನೆಲೆ ಕರುಳು ಹಿಂಡಿತು. ಒಳ್ಳೆಯ ಮನೆತನದಿಂದ ಬಂದ ಆಕೆ ಶ್ರೀಮಂತೆ. ಹೋದ ಮನೇಲೂ ಅದೇ ಶ್ರೀಮಂತಿಕೆ. ಆದರೆ ಮೂವರು ಹೆಣ್ಮಕ್ಕಳನ್ನು ಮಡಿಲಿಗಿಟ್ಟು ಗಂಡ ಸತ್ತು ಹೋದ. ಆಸ್ತಿ ವಿಚಾರವಾಗಿ ಗಂಡನ ಮನೆಯವರೂ ಆಕೆಯನ್ನು ಹೊರಗಟ್ಟಿದ್ದರು. ನಿರ್ವಾಹವಿಲ್ಲದ ಆಕೆ ಬೇರೆಯವರ ಮನೆಗೆಲಸಕ್ಕೆ ಸೇರಿಕೊಂಡಳು. ಆದರೂ ಜೀವನ ನಿರ್ವಹಣೆಗೆ ಹಣ ಸಾಲದೆ ದೊಡ್ಡ ಮಗಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಸೇರಿಸಿದಳು. ಆದರೂ ಬಡತನ ನೀಗದೆ ಸಹಾಯಕ್ಕಾಗಿ ಮಠ-ಮಂದಿರ, ಜಾತಿ ಸಂಘಗಳಿಗೆ ಅಲೆದಾಡಿ ಸಹಾಯ ಯಾಚಿಸಿದಳು. ಪ್ರಯೋಜನವಾಗಲಿಲ್ಲ.
ಆದರೆ ಒಬ್ಬ ವ್ಯಕ್ತಿ ಬಂದು ಸಹಾಯ ಮಾಡಿದ. ಬೆಳೆದು ನಿಂತಿದ್ದ ಹೆಣ್ಮಕ್ಕಳಿಗೆ ಮದುವೆಯನ್ನೂ ಮಾಡಿಸಿದ. ಆತ ಕ್ರಿಶ್ಚಿಯನ್. ಈಗ ಈ ಹಿಂದೂ ಮಹಿಳೆ ಮಕ್ಕಳೊಂದಿಗೆ ಆ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಇದರಿಂದ ನನ್ನೊಳಗೆ ಆಕೆಯನ್ನು ಮತಾಂತರಗೊಳಿಸಿದ್ದು ಹಿಂದೂ ಸಮಾಜವೇ, ಅಂತೊಂದು ವಿಚಾರ ಚುಚ್ಚಲಾರಂಭಿಸಿತು. ಆಕೆಗಾಗ ಧರ್ಮಕ್ಕಿಂತ ಬದುಕು ಮುಖ್ಯವಾಗಿತ್ತು. ಹಿಂದೂ ಸಮಾಜ ಅದನ್ನು ನೀಡದ ಕಾರಣ ಮತಾಂತರಕ್ಕೆ ದಾರಿಯಾಯಿತು. ಈ ಜನ ದೇವಸ್ಥಾನಗಳಿಗೆ ಫಂಡು ಕೊಡ್ತಾರೆ, ದಲಿತರು ನೊಂದವರ ಆತ್ಮಗೌರವಕ್ಕೇ ಪೆಟ್ಟು ಕೊಡ್ತಾರೆ. ಇದನ್ನು ಸರಿ ಮಾಡ್ಬೇಕು ಅನ್ನೋ ಹಂಬಲವೇ ನನ್ನೀ ನಿರ್ಧಾರಕ್ಕೆ ಪ್ರೇರಣೆ...
* ನೀವೇ ಮತಾಂತರ ಮಾಡೋ ದಂಧೆ ಇದೇ ಅಂದಿದ್ರಿ. ಆದರೆ ಅದು ಹಿಂದೂ ಮತದ ಕೂಸು ಅಂತನ್ನಿಸೋದಿಲ್ವಾ? ಈಗ ಚರ್ಚ್? ಮೇಲೆ ದಾಳಿ ಮಾಡಿದ್ದು ತಪ್ಪುಅನ್ಸಲ್ವಾ?
ಉ: ನಿಜ, ಹಿಂದೂ ಸಮಾಜದ ಇಂಥ ಬಲಹೀನತೆಗಳೇ ಮತಾಂತರದಂಥ ಘಟನೆಗಳಿಗೆ ಕಾರಣ. ಈಗಿನಂಥ ಮನಸ್ಥಿತಿ ಇದ್ದಿದ್ರೆ ಚರ್ಚ್ ಮೇಲಿನ ದಾಳಿಯನ್ನು ಸಮರ್ಥಿಸುತ್ತಿರಲಿಲ್ಲ. ಮನುಷ್ಯ ಪ್ರತೀ ಕ್ಷಣವೂ ಕಲೀತಾ ಇರ್ತಾನೆ. ಆಯಾ ಸಂದರ್ಭಗಳಲ್ಲಿ ಸೂಕ್ತ ತಿಳುವಳಿಕೆಯೂ ಬರುತ್ತೆ. ನಾನದಕ್ಕೆ ತೆರೆದುಕೊಂಡಿದ್ದೇನೆ. ಆದುದರಿಂದಲೇ ಬದಲಾಗಿದ್ದೇನೆ....
* ಬಾಬಾಬುಡಾನ್‌ಗಿರಿ ರಾಜಕೀಯ ದಾಳವಾಗಿರೋದ್ರಲ್ಲಿ ನಿಮ್ಮದೂ ಪಾಲಿದೆ. ಈಗಿನ ಸ್ಥಿತಿಯಲ್ಲಿ ಗಿರಿಯ ಸೌಹಾರ್ದವನ್ನು ಯಾವ ರೀತಿ ಉಳಿಸ್ತೀರಿ?
ಉ: ದತ್ತಪೀಠ ವಿವಿಧ ಕೋಮಿನವರ, ವರ್ಗಗಳ ಸೌಹಾರ್ದ ಕೇಂದ್ರ. ನಾನು ಬಜರಂಗದಳದ ರಾಜ್ಯ ಸಂಚಾಲಕನಾಗಿದ್ದಾಗಲೇ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಹೇಳಿದ್ದೆ. ಅಲ್ಲಿರುವ ಅನಧಿಕೃತ ಗೋರಿಗಳನ್ನು ತೆರವುಗೊಳಿಸಿ ಪವಿತ್ರವಾದುದನ್ನಷ್ಟೆ ಉಳಿಸಿಕೊಂಡು ಎರಡೂ ಧರ್ಮಗಳ ಸಾಮರಸ್ಯ ಕಾಯ್ದುಕೊಳ್ಳ ಬೇಕು.
* ನಿಮ್ಮಂಥವರು ಹೋರಾಟ ಆರಂಭಿಸೋವರೆಗೂ ಅದು ಸೌಹಾರ್ದ ಕೇಂದ್ರವೇ ಆಗಿತ್ತಲ್ಲಾ?
ಉ: ಆ ಹೋರಾಟ ರಾಜಕೀಯ ತಿರುವು ಪಡೆಯುತ್ತದೆಂದು ಅಂದುಕೊಂಡಿರಲಿಲ್ಲ. ಅಲ್ಲಿನ ಸಾಮರಸ್ಯವನ್ನು ಬಿಜೆಪಿ ಕೊಲೆ ಮಾಡಿದೆ. ರಾಜಕೀಯಕ್ಕೆ ಉಪಯೋಗಿಸಿಕೊಳ್ಳಲೂ ಹುನ್ನಾರ ನಡೆಸುತ್ತಿದೆ. ಅಲ್ಲಿ ನಿಜವಾದ ಸಾಮರಸ್ಯ ನೆಲೆಗೊಳ್ಳಲು ಯಾವ ಕೆಲಸ ಮಾಡಲೂ ನಾನು ಕಟಿಬದ್ಧನಿದ್ದೇನೆ.
* ಈಗಲೂ ಬಜರಂಗದಳದಲ್ಲೇ ಇರುವವರಿಗೆ ನಿಮ್ಮ ಕಿವಿ ಮಾತೇನು?
ಉ: ನನಗೆ ಆ ವಲಯದಲ್ಲಿ ದೊಡ್ಡ ಮಟ್ಟದ ಸಂಪರ್ಕಗಳಿವೆ. ಅಲ್ಲಿ ಇನ್ನೂ ಹೊಸ ಕಾರ್ಯಕರ್ತರು ತಯಾರಾಗುತ್ತಿದ್ದಾರೆ. ಆದರೆ ಯಾರೂ ಮುಸ್ಲಿಮರನ್ನು, ಕ್ರಿಶ್ಚಿಯನ್ನರನ್ನು ಗುರಿಯಾಗಿಸಿ ಕೊಳ್ಳಬೇಡಿ. ಆ ಹಾದಿಯಲ್ಲೇ ಮುಂದುವರೆದರೆ ಖಂಡಿತಾ ಮೋಸ ಹೋಗ್ತೀರಿ. ಹಿಂದೂ ಸಮಾಜದಲ್ಲೇ ಇರೋ ನ್ಯೂನತೆಗಳನ್ನು ಸರಿಪಡಿಸಲು ಪ್ರಯತ್ನಿಸಿ. ಈಗ ಇರೋ ದಾರಿಯಲ್ಲಿ ನಿಜವಾದ ರಾಷ್ಟ್ರ ಕಟ್ಟುವುದು ಕನಸಿನ ಮಾತು. ಇದು ನಿಜವಾದ ಹಿಂದುತ್ವ ಅಲ್ಲ. ನಿಮ್ಮ ಹೋರಾಟವನ್ನು ಸಾಮಾಜಿಕ ಕೆಲಸಗಳಿಗೆ ಉಪಯೋಗಿಸಿ....
ಕೃಪೆ: ಲಂಕೇಶ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ