ಶನಿವಾರ, ಡಿಸೆಂಬರ್ 11, 2010

ಕೋಮುವಾದಿಗಳಿಂದ ಮಹಿಳೆಯ ಹಕ್ಕು ಮೊಟಕುಗೊಳಿಸಲು ಯತ್ನ: ಕೆ.ದೊರೆರಾಜು

ತುಮಕೂರು, ಡಿ. 10: ಜಾತಿವಾದಿ ಮತ್ತು ಕೋಮುವಾದಿ ಮೂಲಭೂತವಾದಿಗಳಿಂದ ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೆ ತಡೆಯೊಡ್ಡುವ ಕೆಲಸ ನಡೆಯುತ್ತಿದ್ದು, ಇದರ ವಿರುದ್ಧ ಮಹಿಳೆಯರು ಹೋರಾಟ ರೂಪಿಸುವ ಮೂಲಕ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಪಿಯುಸಿಎಲ್ ಜಿಲ್ಲಾಧ್ಯಕ್ಷ ಕೆ.ದೊರೆರಾಜು ತಿಳಿಸಿದ್ದಾರೆ.


ನಗರದ ಬಾಪೂಜಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿಎಲ್ ಹಾಗೂ ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸ್ವಾತಂತ್ರ್ಯವನ್ನು ಯಾರು ಸ್ವೇಚ್ಛಾಚಾರವಾಗಿ ಬಳಕೆ ಮಾಡುತ್ತಿಲ್ಲ. ಭಾರತೀಯ ಹೆಣ್ಣುಮಕ್ಕಳಿಗೆ ಅದರ ಅರಿವಿದೆ. ಆದರೆ ಮಹಿಳೆಯರನ್ನು ತಮ್ಮ ಸರಿಸಮಕ್ಕೆ ಕಲ್ಪಿಸಿಕೊಳ್ಳದ ಮೂಲಭೂತವಾದಿಗಳು ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿ ಅವರನ್ನು ಭಯಕ್ಕೀಡು ಮಾಡುವ ಕೃತ್ಯಗಳಲ್ಲಿ ಭಾಗಿಯಾಗಿದ್ಧಾರೆ ಎಂದರು.


ಜಾಗತೀಕರಣದ ಹೆಸರಿನಲ್ಲಿ ವಿದೇಶಿ ಹಣಕಾಸು ಸಂಸ್ಥೆಗಳಾದ ಐಎಂಎಫ್, ಎಡಿಬಿಗಳು ಭಾರತದ ಆರ್ಥಿಕ ಸ್ವಾತಂತ್ರ್ಯದ ಮೇಲೆ ತಮ್ಮ ಹಿಡಿತ ಸಾಧಿಸಿವೆ. ದೊಡ್ಡ ದೊಡ್ಡ ಯೋಜನೆಗಳ ಹೆಸರಿನಲ್ಲಿ ದೇಶಕ್ಕೆ ಸಾಲ ನೀಡುವ ಈ ಸಂಸ್ಥೆಗಳು ಬಡವರಿಗೆ ನೀಡುವ ಸಬ್ಸಿಡಿ ಮತ್ತಿತರ ರಿಯಾಯಿತಿಗಳ ಮೇಲೆ ಕಡಿವಾಣ ಹಾಕಿ ಬಡವರು, ನಿರ್ಗತಿಕರು ಬದುಕದಂತಹ ಸ್ಥಿತಿ ನಿರ್ಮಾಣ ಮಾಡಿವೆ. ಭಾರತ ಪ್ರತಿವರ್ಷ ತನ್ನ ಬಜೆಟ್‌ನ ಶೇ.27ರಷ್ಟು ಅನುದಾನವನ್ನು ವಿದೇಶಗಳಿಂದ ತಂದಿರುವ ಸಾಲಗಳಿಗೆ ಬಡ್ಡಿಯಾಗಿ ಪಾವತಿಸಬೇಕಾಗಿದೆ. ಇದು ಮುಂದಿನ ದಿನಗಳಲ್ಲಿ ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಲಿದೆ ಎಂದು ಎಚ್ಚರಿಸಿದ ಅವರು, ಸರಕಾರಗಳು ದೇಶದ ಭವಿಷ್ಯದ ದೃಷ್ಟಿಯಿಂದ ವಿದೇಶಗಳಿಂದ ಸಾಲ ಪಡೆಯಬಾರದೆಂದರು.


ಭ್ರಷ್ಟಾಚಾರ ದೇಶದ ಮೊದಲ ಶತ್ರು. ಭ್ರಷ್ಟಾಚಾರ ಹೆಚ್ಚಾದಂತೆಲ್ಲಾ ಈ ದೇಶದ ದುಡಿಯುವ ಜನರ, ಬಡವರ ಪಾಲಿಗೆ ದೊರೆಯಬೇಕಾದ ಸರಕಾರಿ ಸವಲತ್ತುಗಳು ಬೇರೆಯವರ ಪಾಲಾಗುವುದರಿಂದ ಬಡವರು ಮತ್ತಷ್ಟು ಬಡವರಾಗಿಯೇ ಬದುಕಬೇಕಾ ಗುತ್ತದೆ. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕಲು ಪಣ ತೊಡದಿದ್ದರೆ ಮುಂದೊಂದು ದಿನ ನಾವು ಅದರ ಸರ್ವಾಧಿಕಾರಿ ಧೋರಣೆಗೆ ಸಿಲುಕಿ ನರಳಬೇಕಾಗುತ್ತದೆ ಎಂದು ಎಚ್ಚರಿಸಿದ ದೊರೆರಾಜು, ಅಭಿವೃದ್ಧಿಯ ಫಲ ಎಲ್ಲರಿಗೂ ದೊರೆತಾಗ ಮಾತ್ರ ಮಾನವ ಹಕ್ಕುಗಳಿಗೆ ಬೆಲೆ ಬರುತ್ತದೆ ಎಂದರು.


ಪತ್ರಕರ್ತ ಎಂ.ಎನ್.ಕೋಟೆ ನಾಗಭೂಷಣ್ ಮಾತನಾಡಿ, ರಾಜ್ಯದಲ್ಲಿ ಇದುವರೆಗೂ ಅಧಿಕಾರ ನಡೆಸಿದ ಎಲ್ಲಾ ಪಕ್ಷಗಳು ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿಕೆ ನೀಡುತ್ತಲೇ ಇವೆ. ಆದರೆ ತುಮಕೂರು ನಗರದ ಗುಂಡಿ ಬಿದ್ದ ರಸ್ತೆಗಳು ಹಾಳಾದ ಚರಂಡಿ, ಅಭಿವೃದ್ಧಿ ಕಾಣದ ಸ್ಲಂಗಳನ್ನು ಗಮನಿಸಿದರೆ ಯಾವುದು ಅಭಿವೃದ್ಧಿ ಎಂದು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುವಂತಹ ಸ್ಥಿತಿಯಿದೆ. ಇಂತಹವುಗಳ ಬಗ್ಗೆ ಜನತೆ ಪ್ರಶ್ನಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಕನಿಷ್ಠ ನಮ್ಮ ಹಕ್ಕುಗಳೇನು ಎಂಬುದರ ಪರಿಚಯವನ್ನು ಜನತೆ ಹಾಗೂ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕಾಗಿದೆ ಎಂದರು.


ಕಾಲೇಜು ಪ್ರಾಂಶುಪಾಲ ಚಿದಾನಂದ, ಸಿಐಟಿಯು ಕಾರ್ಯದರ್ಶಿ ಸೈಯದ್ ಮುಜೀಬ್, ಉಪನ್ಯಾಸಕ ಕೃಷ್ಣಮೂರ್ತಿ ಮತ್ತಿತರರು ವೇದಿಕೆಯಲ್ಲಿದ್ದರು. ರಾಜ್ಯಶಾಸ್ತ್ರ ವಿಭಾಗದ ನೂರಾರು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ