ಹೊಸದಿಲ್ಲಿ, ನ.30: ಅಮೆರಿಕದ ರಾಜತಾಂತ್ರಿಕ ಗುಪ್ತ ದಾಖಲೆಗಳನ್ನು ವಿಕಿಲೀಕ್ಸ್ ಬಹಿರಂಗ ಪಡಿಸಿರುವ ಮರುದಿನವೇ ಇದೊಂದು ಅತ್ಯಂತ ‘ಸೂಕ್ಷ್ಮ ವಿಷಯ’ವಾಗಿದ್ದು, ಸರಕಾರ ‘ಕಾದು ನೋಡಿ ಕ್ರಮ ಕೈಗೊಳ್ಳಲಿದೆ’ ಎಂದು ವಿದೇಶಾಂಗ ಸಹಾಯಕ ಸಚಿವೆ ಪ್ರಣೀತ್ ಕೌರ್ ಹೇಳಿದ್ದಾರೆ.
ಇದೊಂದು ಬಹಳ ಸೂಕ್ಷ್ಮ ವಿಷಯವಾಗಿದೆ. ನಾವು ಅಮೆರಿಕದೊಂದಿಗೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿದ್ದೇವೆ. ಹಾಗೂ ಅದು ತಮಗೆ ಈಗಾಗಲೇ ಎಚ್ಚರಿಕೆ ನೀಡಿದೆ. ಆದುದರಿಂದ ಈ ಬಗ್ಗೆ ಪ್ರತಿಕ್ರಿಯಿಸಲು ಇದು ಸಕಾಲವಲ್ಲವೆಂಬುದು ತನ್ನ ಅಭಿಪ್ರಾಯವಾಗಿದೆ. ತಾವು ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಮುಂದುವರಿಸಬಯಸುತ್ತಿದ್ದೇವೆ. ಆದುದರಿಂದ ಕಾದು ನೋಡಿ ಕ್ರಮ ಕೈಗೊಳ್ಳೋಣವೆಂದು ಅವರು ನುಡಿದಿದ್ದಾರೆ.
ಅಮೆರಿಕದ ರಾಜತಂತ್ರಜ್ಞರು ವಿಶ್ವಸಂಸ್ಥೆಯ ಮುಖ್ಯಸ್ಥನ ಮೇಲೆ ಮಾತ್ರವಲ್ಲದೆ ಇತರ ಹಲವು ನಾಯಕರ ಮೇಲೂ ಗೂಢಚರ್ಯೆ ನಡೆಸುತ್ತಿದ್ದಾರೆಂಬುದನ್ನು ವಿಕಿಲೀಕ್ಸ್ ಲಕ್ಷಾಂತರ ಕೇಬಲ್‌ಗಳ ಮೂಲಕ ಬಹಿರಂಗ ಪಡಿಸಿರುವ ಕುರಿತಾದ ವರದಿಯ ಕುರಿತು ಕೌರ್ ಪ್ರತಿಕ್ರಿಯಿಸುತ್ತಿದ್ದರು.
ಇದು ಪ್ರತಿ ದೇಶಕ್ಕೂ ಅಂತಾರಾಷ್ಟ್ರೀಯ ವಿಷಯವಾಗಿದೆ. ಅವುಗಳ ರಾಜತಂತ್ರಜ್ಞರು ಇದರಿಂದ ಏನು ಪಡೆಯಬಯಸಿದ್ದಾರೆ ಹಾಗೂ ಇದನ್ನು ಹೇಗೆ ನಿಭಾಯಿಸುತ್ತಾರೆಂದು ಅವರು ಪ್ರಶ್ನಿಸಿದ್ದಾರೆ. ವಿವಿಧ ಅಮೆರಿಕನ್ ದೂತಾವಾಸ ಹಾಗೂ ಕಾನ್ಸುಲೇಟ್‌ಗಳ ನಡುವಣ ಪತ್ರ ವ್ಯವಹಾರವನ್ನು ದಾಖಲಿಸಿ ವಿಕಿಲೀಕ್ಸ್ ಲಕ್ಷಾಂತರ ಕೇಬಲ್‌ಗಳನ್ನು ಬಿಡುಗಡೆಗೊಳಿಸಿದೆ.
ಅಮೆರಿಕದ ಹಿತಾಸಕ್ತಿಗೆ ಹಾನಿ ಮಾಡುವ ಹಾಗೂ ಅದರ ಮಿತ್ರರ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಸಾಧ್ಯತೆಯಿರುವ ಮುಜುಗರದ ವರ್ಗೀಕೃತ ದಾಖಲೆಗಳನ್ನು ವಿಕಿಲೀಕ್ಸ್, ಬಿಡುಗಡೆಗೊಳಿಸಿವುದರ ವಿರುದ್ಧ ಭಾರತ ಹಾಗೂ ಇತರ ಪ್ರಮುಖ ಸರಕಾರಗಳನ್ನು ಅಮೆರಿಕ ಎಚ್ಚರಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ