ಶನಿವಾರ, ಮಾರ್ಚ್ 05, 2011

ನಾಗಾರ್ಜುನ ಯೋಜನೆ:ಪಂಪ್‌ಹೌಸ್‌ಗೆ ಮುತ್ತಿಗೆ ಹಾಕಿ ಶಟರ್ ಎಳೆದು ಬೀಗ ಜಡಿದ ಘಟನೆ

ಮಂಗಳೂರು: ಉಡುಪಿಯಲ್ಲಿ ನಿನ್ನೆ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಏರ್ಪಡಿಸಿದ್ದ ಲ್ಯಾಂಕೋ (ನಾಗಾರ್ಜುನ) ಕಂಪೆನಿಯ ಉಡುಪಿ ಪವರ್ ಕಾರ್ಪೊರೇಶನ್ ಉಷ್ಣ ವಿದ್ಯುತ್ ಸ್ಥಾವರದಿಂದ ಉಂಟಾಗುತ್ತಿರುವ ಮಾಲಿನ್ಯ ಸಂಬಂಧಿ ಸಮಾ ಲೋಚನಾ ಸಭೆ ಗೊಂದಲ-ಗದ್ದಲ ದಲ್ಲಿ ಸ್ಥಗಿತಗೊಂಡ ಬೆನ್ನಲ್ಲೇ ಆಕ್ರೋಶಿತ ರೈತ ಸಂಘದ ಕಾರ್ಯಕರ್ತರು ಎರ್ಮಾಳಿನಲ್ಲಿರುವ ಸ್ಥಾವರದ ಪಂಪ್‌ಹೌಸ್‌ಗೆ ಮುತ್ತಿಗೆ ಹಾಕಿ ಶಟರ್ ಎಳೆದು ಬೀಗ ಜಡಿದ ಘಟನೆ ನಡೆದಿದೆ.
ನಾಗಾರ್ಜುನ ಯೋಜನೆಯ ಹಾರುಬೂದಿಯ ಸಮಸ್ಯೆ ಆಸುಪಾಸಿನ ಜನಜೀವನದ ಮೇಲೆ ದುಷ್ಪರಿಣಾಮ ಬೀರಿ ಜನ ಪ್ರತಿಭಟನೆಗಿಳಿಯಲು ನಿರ್ಧ ರಿಸಿದ ಬಳಿಕ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳು ನಿವೇಶನ ಪ್ರದೇಶದ ಗ್ರಾಮಗಳಿಗೆ ತೆರಳಿ ಪರಿಸ್ಥಿತಿ ಯನ್ನು ಸ್ವಯಂ ಅವಲೋಕಿಸಿ, ಕಂಪೆನಿ ಪರಿಸರ ಸಹ್ಯವಾಗಿ ಕಾರ್ಯನಿರ್ವಹಿಸುವವರೆಗೆ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕು ಎಂದಿದ್ದರಲ್ಲದೆ ಕಂಪೆನಿ ಬಂದ್‌ಗೆ ಒಂದು ವಾರದ ಗಡುವು ವಿಧಿಸಿದ್ದರು. ವಾರದ ಬಳಿಕ ಪರಿಸ್ಥಿತಿಯಲ್ಲಿ ಬದಲಾ ವಣೆ ಕಂಡು ಬರದಿದ್ದಲ್ಲಿ ತಾನೇ ಸ್ವಯಂ ಮುಂದೆ ನಿಂತು ಪ್ರತಿಭಟನೆಯ ನೇತೃತ್ವ ವಹಿಸುವುದಾಗಿ ಘೋಷಿಸಿ ಕೊಂಡಿದ್ದರು.
ನಿನ್ನೆ ಬೆಳಿಗ್ಗೆ ೯.೩೦ರ ಸುಮಾರಿಗೆ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ಸುಮಾರು ೩೦೦ ಮಂದಿಯಷ್ಟಿದ್ದ ಗುಂಪು ಸ್ವಾಮಿಜಿ ಸಭೆ ಕರೆದಿದ್ದ ಇಕ್ಕಟ್ಟಾಗಿದ್ದ ಉಡುಪಿ ರಥಬೀದಿಯ ಯಕ್ಷಗಾನ ಕಲಾರಂಗದ ಸಭಾಂಗಣದಲ್ಲಿ ಜಮಾಯಿಸುವು ದರೊಂದಿಗೆ ಗೊಂದಲ, ಗಲಾಟೆ ಪ್ರಾರಂಭಗೊಂಡಿದ್ದು, ಕಂಪೆನಿಯ ಹಿರಿಯ ಅಧಿಕಾರಿಗಳಾದ ಕಿಶೋರ್ ಆಳ್ವ ಮತ್ತಿತರರು ಶ್ರೀಗಳೊಂದಿಗಿರು ವುದನ್ನು ಕಂಡು ರೋಷಾವಿಷ್ಟರಾದ ರೈತ ಸಂಘದ ಪದಾಧಿಕಾರಿಗಳು ಕಂಪೆನಿ ಅಧಿಕಾರಿಗಳನ್ನು ಹೊರ ಕಳುಹಿಸು ವಂತೆ ಶ್ರೀಗಳನ್ನು ಒತ್ತಾಯಿಸಿದರು. ಕಂಪೆನಿ ಜನವಿರೋಧಿ ಮತ್ತು ಸ್ಥಳೀಯರಿಗೆ ಸಮಸ್ಯೆಯಾಗಿರು ವುದರಿಂದ ಸ್ವಾಮೀಜಿಯವರು ಹೇಳಿದಂತೆ ಕಂಪೆನಿ ಬಂದ್‌ಗೆ ಸೂಚಿಸ ಬೇಕೆಂದೂ ಆಗ್ರಹಿಸತೊಡಗಿದರು.
ಆದರೆ ಸ್ವಾಮಿಗಳು ಪರಿಸರ ಪರಿಸ್ಥಿತಿಯ ಅಧ್ಯಯನಕ್ಕೆ ತನಗಿನ್ನೂ ಕಾಲಾವಕಾಶ ಬೇಕೆಂದು ಹೇಳಿದಾಗ ಬಂದ್‌ಗೆ ಕರೆ ಕೊಡಲು ನಿರಾಕರಿಸಿ ದಾಗ ಇಡೀ ಸಭಾಂಗಣ ರಣರಂಗ ವಾಗಿ ಮಾರ್ಪಟ್ಟಿತು. ಈ ಹಂತದಲ್ಲಿ ಸ್ವಾಮೀಜಿ ಮತ್ತು ರೈತ ಸಂಘದ ವಿಜಯ ಕುಮಾರ್ ಹೆಗ್ಡೆಯವರ ನಡುವೆ ವಾಗ್ವಾದ ತಾರಕಕ್ಕೇರಿ ’ನಿಮಗೆ ಹೋರಾಟದ ನೇತೃತ್ವ ವಹಿಸಿಕೊಳ್ಳಲು ವಿನಂತಿಸಿದವರ‍್ಯಾರು? ನೀವು ಮಂಗಳೂರು ಎಸ್‌ಇಝೆಡ್‌ನಲ್ಲಿ ಮಾಡಿದ್ದು ನಮಗೆ ತಿಳಿದಿಲ್ಲವಾ? ನಿಮ್ಮ ನೇತೃತ್ವ ಸ್ಥಳೀಯ ಸಂತ್ರಸ್ತರಿಗೆ ಬೇಕಿಲ್ಲ. ಹೋರಾಟ ಹೇಗೆ ಮಾಡಬೇಕೆಂದು ನಮಗೆ ಗೊತ್ತು’ ಎಂಬಂತಹ ಮಾತು ಗಳು ವ್ಯಕ್ತವಾದವು. ಜಮಾಯಿಸಲ್ಪಟ್ಟ ರೈತ ಜನರು ಸ್ವಾಮೀಜಿ ಅವರ ನೀತಿ ಮತ್ತು ದಿನಪತ್ರಿಕೆ ಯೊಂದರ ಹೆಸರನ್ನು ಹೇಳಿ ಧಿಕ್ಕಾರ ಕೂಗಿದರು. ಎಲ್ಲದರ ನಡುವೆ ಸ್ವಾಮೀಜಿ ’ನಾನಿನ್ನು ಯಾವುದರಲ್ಲೂ ಇಲ್ಲ’ ಎನ್ನುತ್ತಾ ಸಭೆಯಿಂದ ಹೊರ ನಡೆದರು.
ಬಳಿಕ ರೈತ ಸಂಘದ ಕಾರ್ಯ ಕರ್ತರು ವಿಜಯ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ಉಡುಪಿಯಿಂದ ಎರ್ಮಾಳಿಗಾಗಮಿಸಿ ಕಂಪೆನಿಯ ಪಂಪ್‌ಹೌಸ್‌ಗೆ ಮುತ್ತಿಗೆ ಹಾಕಿತು. ಪಂಪ್‌ಹೌಸ್ ದುಸ್ಥಿತಿಯಲ್ಲಿದ್ದುದರಿಂದ ಇದರಿಂದ ಸಮುದ್ರದ ನೀರು ಯೋಜನಾ ಪ್ರದೇಶಕ್ಕೆ ಕೊಳವೆಗಳಲ್ಲಿ ಸರಬರಾಜಾಗುತ್ತಿರಲಿಲ್ಲ. ಆದರೂ ಶಟರ್ ಎಳೆದು ಸ್ವಿಚ್‌ಆಫ್ ಮಾಡಿ ರೈತರು ಅದಕ್ಕೆ ಬೀಗ ಜಡಿದರು.
ಈ ಹಂತದಲ್ಲಿ ಅಲ್ಲಿಗಾಗಮಿಸಿದ ಉಡುಪಿ ತಹಸೀಲ್ದಾರ್ ಪ್ರಸನ್ನ ಕುಮಾರ್‌ರನ್ನು ಜನರು ತರಾಟೆಗೆ ತೆಗೆದುಕೊಂಡರು. ಸ್ಥಳೀಯಾಡಳಿತದ ಸಿಬ್ಬಂದಿ ಜನರ ಸಮಸ್ಯೆಗಳನ್ನು ತಹಸೀಲ್ದಾರರಿಗೆ ಮನವರಿಕೆ ಮಾಡಿ ದಾಗ ಅದನ್ನು ಒಪ್ಪಿದ ತಹಸೀಲ್ದಾರ್, ರೈತರು ಬೀಗ ಜಡಿಯುವಾಗ ಪೊಲೀಸರೊಂದಿಗೆ ಮೌನ ವೀಕ್ಷಕರಾ ದರು. ಉಡುಪಿ ಮತ್ತು ಎರ್ಮಾಳ್ ಪ್ರತಿಭಟನೆಯ ನೇತೃತ್ವವನ್ನು ರೈತ ಸಂಘದ ವಿಜಯ ಕುಮಾರ್ ಹೆಗ್ಡೆ, ಸುಧಾಕರ ಶೆಟ್ಟಿ, ನಾಗೇಶ್ ಭಟ್, ಪ್ರಕಾಶ್ ಶೆಟ್ಟಿ ಮತ್ತು ಪಡುಬಿದ್ರಿ, ಪಾದೆಬೆಟ್ಟು, ಉಳ್ಳೂರು, ಮುದರಂಗಡಿ ಮತ್ತಿತರರ ಸಂತ್ರಸ್ತ ಪ್ರದೇಶದ ರೈತ ಮುಖಂಡರು ವಹಿಸಿದ್ದರು.
ಪರಿಸರಾಭಿಷೇಕ
ಎರ್ಮಾಳಿನ ಪಂಪ್‌ಹೌಸ್ ಸಮೀಪ ರೈತ ಜಮಾವಣೆಯಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ವಾದಾಗ ಅಲ್ಲಿ ತಹಸೀಲ್ದಾರ್ ಮತ್ತು ಎರ್ಮಾಳು ಪಂಚಾಯತ್‌ನ ಸಿಬ್ಬಂದಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ರವಿಚಂದ್ರ ಮತ್ತು ಶರತ್ ಎಂಬ ಇಬ್ಬರು ಅಧಿಕಾರಿಗಳೂ ಇದ್ದರು. ಸಂತೃಸ್ತ ಜನ ಕಂಪೆನಿಯಿಂದಾಗಿರುವ ಕುಡಿಯುವ ನೀರಿನ ಸಮಸ್ಯೆ ವಿವರಿಸಿ ಅಧಿಕಾರಿಗಳಿಗೆ ಕುಡಿಯಲು ಅದೇ ನೀರು ನೀಡಿದರು. ಆದರೆ ಅಧಿಕಾರಿಗಳು ನಿರಾಕರಿಸಿದರು. ಕೂಡಲೇ ಜನ ಕೊಡಗಳಲ್ಲಿದ್ದ ನೀರನ್ನು ಶರತ್ ಎಂಬ ಅಧಿಕಾರಿಯ ತಲೆಗೆ ಸುರಿದು ಲವಣೋದಕ ಅಭಿಷೇಕ ನೆರವೇರಿಸಿದರು. ಅಧಿಕಾರಿಗಳು ಬೆಳಿಗ್ಗೆ ವಿವಾದಾತ್ಮಕ ನಾಗಾರ್ಜುನ ಗುತ್ತಿಗೆದಾರ ಡೇವಿಡ್ ಎಂಬವರ ವಾಹನದಲ್ಲಿ ಸುತ್ತಾಡು ತ್ತಿದ್ದುದೂ ಜನರನ್ನು ಕೆರಳಿಸಿತ್ತು.
 
ಮಂಗಳೂರಿನಲ್ಲಿ ಎಸ್‌ಇಝೆಡ್ ವಿರೋಧಿ ಧರಣಿ ಐದನೇ ದಿನಕ್ಕೆ
ಮಂಗಳೂರು: ಯಾವುದೇ ಶರತ್ತುಗಳಿಲ್ಲದೆ ಎಂಆರ್‌ಪಿಎಲ್‌ನಲ್ಲಿಯೇ ಉದ್ಯೋಗ ಕಲ್ಪಿಸಬೇಕು ಎಂದು ನಿರಾಶ್ರಿತ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಸೆಝ್ ವಿರುದ್ಧದ ಧರಣಿ ಐದನೇ ದಿನಕ್ಕೆ ಕಾಲಿಟ್ಟಿದೆ. ಮೊನ್ನೆ ಸಮಿತಿಯ ಅಧ್ಯಕ್ಷರು ನಡೆಸಿದ ಪತ್ರಿಕಾಗೋಷ್ಟಿಯು ಧರಣಿ ನಿರತರಲ್ಲಿ ಆಕ್ರೋಶದ ಕಿಡಿಯನ್ನೇ ಹೊತ್ತಿಸಿದೆ.
ನಿರಾಶ್ರಿತ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿದ್ದ ಧರಣಿ ಮೂರನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಸಂಯುಕ್ತ ಹಿತ ರಕ್ಷಣಾ ಸಮಿತಿ ಅಧ್ಯಕ್ಷರಾದ ಭುಜಂಗ ಶೆಟ್ಟಿ ಮತ್ತು ಪದಾಧಿಕಾರಿಗಳು ಪತ್ರಿಕಾಗೋಷ್ಟಿ ನಡೆಸಿ ಧರಣಿಯ ಬಗ್ಗೆ ತಮಗೆ ಗೊತ್ತೇ ಇಲ್ಲ. ಅದೊಂದು ಕಾನೂನು ಬಾಹಿರ ಹೋರಾಟ ಎಂದೆಲ್ಲಾ ಹೇಳಿದ್ದು ನಿನ್ನೆಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಇದರಿಂದ ಇನ್ನಷ್ಟು ಆಕ್ರೋಶಗೊಂಡಿರುವ ಧರಣಿ ನಿರತರು ಪತ್ರಿಕಾಗೋಷ್ಟಿ ನಡೆಸಿದವರು ಮತ್ತು ಅದರಲ್ಲಿ ಪಾಲ್ಗೊಂಡವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಆರ್.ಎನ್.ಶೆಟ್ಟಿ , ಭುಜಂಗ ಶೆಟ್ಟಿಗೆ ಹಲವು ಬಾರಿ ಕರೆ ಮಾಡಿ ಧರಣಿಯ ಬಗ್ಗೆ ತಿಳಿಸಿದ್ದೆವು. ಆದರೆ ಈಗ ಪತ್ರಿಕಾಗೋಷ್ಟಿ ನಡೆಸಿ ಧರಣಿಯ ಬಗ್ಗೆ ತಮಗೇನು ಗೊತ್ತಿಲ್ಲ ಎಂಬ ಬಾಲಿಶವಾದ ಹೇಳಿಕೆ ನೀಡಿದ್ದು ಅವರು ಅಧಿಕಾರಿಗಳು ನೀಡುವ ಸೂಟ್‌ಕೇಸ್ ಎಂಬ ಎಂಜಲು ಹಣಕ್ಕಾಗಿ ಕಾಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಗೋಷ್ಟಿಯಲ್ಲಿ ಭಾಗವಹಿಸಿದ್ದ ಉಲ್ಲಾಸ್ ಶೆಟ್ಟಿಯ ವಿರುದ್ಧವೂ ಹರಿಹಾಯ್ದ ಅವರು ಉಲ್ಲಾಸ್ ಕಾಂಗ್ರೆಸ್ ಪಕ್ಷದ ಬಿಫಾರಂ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಈಗ ಸರಕಾರದ ವಿರುದ್ಧದ ಪ್ರತಿಭಟನೆ ಎಂದು ನೆಪ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಅವರು ಬಿ.ಜೆ.ಪಿ.ಗೆ ಸೇರಿದ್ದು ಯಾವಾಗ ಎಂದು ಪ್ರಶ್ನಿಸಿದ ಆರ್.ಎನ್.ಶೆಟ್ಟಿ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದು ಘೋಷಿಸಿದ್ದಾರೆ.
 
ಲ್ಯಾಂಕೋ ಬಂದ್ ಮಾಡಲು ಗೊತ್ತಿದೆ: ಹೆಗ್ಡೆ
ಮಂಗಳೂರು: ‘ಪೇಜಾವರಶ್ರೀ ಹೀಗೆ ಮಾಡುವರೆಂದು ನಮಗೆಂದೇ ತಿಳಿದಿತ್ತು. ಅವರು ಒಂದು ವಾರದ ಅವಧಿಯನ್ನು ಬಂದ್‌ಗಾಗಿ ಮುಂದಿಟ್ಟಾಗಲೇ ನಾವು ಸಂದೇಹಿಸಿದ್ದೆವು. ಅವರು ಕಂಪೆನಿ ಪರ ಎಂಬುದೀಗ ಸಾಬೀತಾಗಿದೆ’ ಹೀಗೆಂದು ಪತ್ರಿಕೆಯೊಂದಿಗೆ ಹೇಳಿದವರು ರೈತಸಂಘದ ವಿಜಯಕುಮಾರ್ ಹೆಗ್ಡೆ.
ಮಂಗಳೂರಿನ ಸೆಝ್ ಹೋರಾಟದಲ್ಲೂ ಮೂಗು ತೂರಿಸಿದ ಸ್ವಾಮಿಗಳು ನಂತರ ಸುಮ್ಮನಾದ ವಿಚಾರದ ಹಿನ್ನೆಲೆ ಇಡೀ ರಾಜ್ಯಕ್ಕೇ ಗೊತ್ತಿದೆ. ಹಾಗೆಂದು ಲ್ಯಾಂಕೋ ವಿರುದ್ಧ ಇವರಿಗೆ ನೇತೃತ್ವ ವಹಿಸಿಕೊಳ್ಳುವಂತೆ, ವಕ್ತಾರರಾಗುವಂತೆ ಸ್ಥಳೀಯರ‍್ಯಾರೂ ವಿನಂತಿಸಿದ್ದೂ ಇಲ್ಲ ಎಂದ ಹೆಗ್ಡೆ, ಲ್ಯಾಂಕೋ ಕಂಪೆನಿಯನ್ನು ಹೇಗೆ ಹೊಡೆದೋಡಿಸಬೇಕೆಂದು ನಮಗೆ ಚೆನ್ನಾಗಿ ತಿಳಿದಿದೆ. ನಮ್ಮ ರಹಸ್ಯ ಅಜೆಂಡಾ ಬಹಿರಂಗವಾದಾಗಲೇ ರೈತಶಕ್ತಿಯ ಅನಾವರಣವಾಗಲಿದೆ. ಇದಕ್ಕೀಗ ಕಾಲ ಕೂಡಿ ಬಂದಿದೆ ಎಂದು ಹೆಗ್ಡೆ ಅವರು ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ