ಶನಿವಾರ, ಜನವರಿ 22, 2011

ಬಂದ್ ವಿರುದ್ಧ ಸು.ಕೋ.ನಲ್ಲಿ ಮೊಕದ್ದಮೆ: ದೇವೇಗೌಡ

ಬೆಂಗಳೂರು, ಜ.22: ಆಡಳಿತಾರೂಢ ಬಿಜೆಪಿ ಕರೆ ನೀಡಿದ್ದ ರಾಜ್ಯ ಬಂದ್ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸುವುದಾಗಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದ್‌ಗೆ ಕರೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪಿದೆ. ಆದರೂ, ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವೇ ರಾಜ್ಯ ಬಂದ್‌ಗೆ ಕರೆ ನೀಡಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟವನ್ನುಂಟು ಮಾಡಿದೆ. ಹಾಗಾಗಿ ಇದರ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಲಾಗುವುದು ಎಂದು ಹೇಳಿದರು.

ತನ್ನ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮೂರು ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ‘ಸ್ವಯಂ ಪ್ರೇರಿತ ಬಂದ್’ ಎಂದು ಹೇಳಿರುವುದು ಕೇವಲ ಮೇಲ್ನೋಟಕ್ಕೆ ಮಾತ್ರ. ವಾಸ್ತವದಲ್ಲಿ ಇದು ಸರಕಾರ ಪ್ರಾಯೋಜಿತ ಬಂದ್ ಎಂದು ದೇವೇಗೌಡರು ಕಿಡಿ ಗಾರಿದರು. ಬಂದ್‌ನಿಂದ ಉಂಟಾಗಿರುವ ಅನಾಹುತ, ಸಂಭವಿಸಿರುವ ನಷ್ಟಕ್ಕೆ ಸರಕಾರವೇ ನೇರ ಹೊಣೆ ಹೊರಬೇಕು. ಜನ ಜೀವನ ಅಸ್ತವ್ಯಸ್ತ, ಸಂಚಾರ ಅಡಚಣೆ, ಸಾರಿಗೆ ಬಸ್‌ಗಳಿಗೆ ಬೆಂಕಿ ಹಚ್ಚಿರುವುದು, ಅಂಗಡಿಗಳನ್ನು ಲೂಟಿ ಮಾಡಿರುವುದು ಖಂಡನೀಯ ಎಂದು ಮಾಜಿ ಪ್ರಧಾನಿ ಹೇಳಿದರು.
ರಾಜ್ಯಪಾಲ ಭಾರದ್ವಾಜ್ ಆತುರದ ತೀರ್ಮಾನ ತೆಗೆದುಕೊಂಡಿಲ್ಲ. ಮನವಿಯ ಸತ್ಯಾಸತ್ಯತೆ ಪರಿಶೀಲಿಸಿ, ಆರೋಪಗಳಿಗೆ ಆಧಾರಗಳಿವೆಯೇ ಎಂಬುದನ್ನು ಖಾತರಿಪಡಿಸಿಕೊಂಡ ನಂತರ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ಅನೇಕ ತೀರ್ಪುಗಳನ್ನು ಆಧರಿಸಿ ಕಾನೂನಿನ ಚೌಕಟ್ಟಿನೊಳಗೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಿದ ದೇವೇಗೌಡರು, ರಾಜ್ಯಪಾಲರ ಕ್ರಮವನ್ನು ಸಮರ್ಥಿಸಿಕೊಂಡರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ