ಶನಿವಾರ, ಜನವರಿ 08, 2011

ಕೇಸರಿ ಭಯೋತ್ಪಾದಕ ಜಾಲವನ್ನು ಬಯಲಿಗೆಳೆದ ಸ್ವಾಮಿ ಅಸೀಮಾನಂದನ ತಪ್ಪೊಪ್ಪಿಗೆ ಹೇಳಿಕೆ

ಅಂದು 18 ಡಿಸೆಂಬರ್ 2010, ಸಿಬಿಐ ಅಧಿಕಾರಿಗಳ ತಂಡವೊಂದು ಅಸೀಮಾನಂದ 2007ರಲ್ಲಿ 9 ಮಂದಿಯ ಸಾವಿಗೆ ಕಾರಣವಾದ ಮಕ್ಕಾ ಮಸೀದಿ ಸ್ಫೋಟದ ಪ್ರಮುಖ ಆರೋಪಿ 59 ವರ್ಷ ವಯಸ್ಸಿನ ನಭ ಕುಮಾರ್ ಸರ್ಕಾರ್ ಅಲಿಯಾಸ್ ಸ್ವಾಮಿ ಅಸೀಮಾನಂದನನ್ನು ದಿಲ್ಲಿಯ ತಿಹಾರ್ ಜೈಲಿನಿಂದ ಕೊಂಡೊಯ್ದು,ದಿಲ್ಲಿ ತೀಸ್ ಹಜಾರಿ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ದಬಾಸ್ ಸಮ್ಮುಖದಲ್ಲಿ ಹಾಜರುಪಡಿಸಿತು. ಎರಡು ದಿನಗಳ ಮೊದಲು ಡಿಸೆಂಬರ್ 16ರಂದು ಅಸೀಮಾನಂದ, ಇದೇ ನ್ಯಾಯಾಲದಲ್ಲಿ ಸರಣಿ ಭಯೋತ್ಪಾದಕ ದಾಳಿ ಪ್ರಕರಣಗಳಿಗೆ ಸಂಬಂಧಿಸಿ ತಾನು ನೀಡುವ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸುವಂತೆ ಮ್ಯಾಜಿಸ್ಟ್ರೇಟರಲ್ಲಿ ವಿನಂತಿಸಿಕೊಂಡಿದ್ದ.
ಯಾವುದೇ ಹೆದರಿಕೆ, ಒತ್ತಡ,ಆಮಿಷಕ್ಕೊಳಗಾಗಿ ತಾನು ಈ ತಪ್ಪೊಪ್ಪಿಗೆಯನ್ನು ನೀಡುತ್ತಿಲ್ಲವೆಂದೂ ಆತ ಮ್ಯಾಜಿಸ್ಟ್ರೇಟರಿಗೆ ಸ್ಪಷ್ಟಪಡಿಸಿದ. ಆಗ ಕಾನೂನು ಪ್ರಕಾರವಾಗಿಯೇ ಮ್ಯಾಜಿಸ್ಟ್ರೇಟರು,ಈ ನಿರ್ಧಾರದ ಬಗ್ಗೆ ಮರುವಿಮರ್ಶೆ ಮಾಡಿಕೊಳ್ಳುವಂತೆ ಆಸೀಮಾನಂದನಿಗೆ ತಿಳಿಸಿದರು ಮತ್ತು ಆತನನ್ನು ಎರಡು ದಿನಗಳ ಮಟ್ಟಿಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದರು.ಪೊಲೀಸರು ಆತನ ಮೇಲೆ ಯಾವುದೇ ಪ್ರಭಾವ ಬೀರದಂತೆ ಕಟ್ಟುನಿಟ್ಟಿನ ಆದೇಶ ಸಹ ನೀಡಿದ್ದರು.
ಡಿಸೆಂಬರ್ 18ರಂದು ಆಸೀಮಾನಂದ ಮ್ಯಾಜಿಸ್ಟ್ರೇಟರ ಸಮಕ್ಷಮದಲ್ಲಿ ಮತ್ತೆ ಹಾಜರಾದ . ತನ್ನ ಸ್ಟೆನೋಗ್ರಾಫರ್‌ನನ್ನು ಹೊರತುಪಡಿಸಿ ಉಳಿದೆಲ್ಲರೂ ತನ್ನ ಕೊಠಡಿಯಿಂದ ಹೊರಹೋಗುವಂತೆ ಮ್ಯಾಜಿಸ್ಟ್ರೇಟರು ಅಪ್ಪಣೆ ಮಾಡಿದರು. ‘‘ನನಗೆ ಮರಣದಂಡನೆ ದೊರೆಯಬಹುದೆಂದು ನಾನು ಬಲ್ಲೆ. ಆದರೂ ಕೂಡಾ ನಾನು ತಪ್ಪೊಪ್ಪಿಗೆ ನೀಡಲು ಬಯಸುತ್ತಿದ್ದೇನೆ’’ ಎಂದು ಅಸೀಮಾನಂದ ಮ್ಯಾಜಿಸ್ಟ್ರೇಟರಿಗೆ ತಿಳಿಸಿದ. ಮುಂದಿನ ಐದು ತಾಸುಗಳ ಕಾಲ ಆತ ಮ್ಯಾಜಿಸ್ಟ್ರೇಟರ ಮುಂದೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಮಾಲೆಗಾಂವ್, ಸಂರೆತಾ ಎಕ್ಸ್‌ಪ್ರೆಸ್, ಅಜ್ಮೇರ್ ದರ್ಗಾ, ಮಕ್ಕಾ ಮಸೀದಿ ಸ್ಫೋಟ ಸೇರಿದಂತೆ ವಿವಿಧ ಭಯೋತ್ಪಾದಕ ಕೃತ್ಯಗಳಲ್ಲಿ ತಾನು ಸೇರಿದಂತೆ ಅನೇಕ ಹಿಂದುತ್ವವಾದಿ ನಾಯಕರ ಕೈವಾಡವಿರುವುದನ್ನು ಬಯಲುಗೊಳಿಸಿದ. ಈ ಬರ್ಬರವಾದ ಭಯೋತ್ಪಾದಕ ದಾಳಿಯ ಸಂಚುಗಳನ್ನು ಹೇಗೆ ಹೆಣೆಯಲಾಯಿತು ಮತ್ತು ಅವನ್ನು ಹೇಗೆ ಜಾರಿಗೊಳಿಸಲಾಯಿತು ಎಂಬುದನ್ನು ಆತ ವಿವರಿಸಿದ.
2006 ಹಾಗೂ 2008ರಲ್ಲಿ ಮಾಲೆಗಾಂವ್‌ನಲ್ಲಿ ಸ್ಫೋಟ, 2007ರ ಸಂಜೋತಾ ಎಕ್ಸ್‌ಪ್ರೆಸ್, 2007ರ ಅಜ್ಮೇರ್ ಶರೀಫ್ ಹಾಗೂ ಮಕ್ಕಾ ಮಸೀದಿ ಸ್ಫೋಟ ಕೃತ್ಯಗಳನ್ನು ಎಸಗಿದವರು ಆರೆಸ್ಸೆಸ್ ಪ್ರಚಾರಕರ ತಂಡವೆಂದು ಆತ ತನ್ನ ತಪ್ಪೊಪ್ಪಿಗೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾನೆ. ಅಸೀಮಾನಂದ ಹಿಂದಿಯಲ್ಲಿ ನೀಡಿದ ಹೇಳಿಕೆಯು 42 ಪುಟಗಳಷ್ಟು ವಿಸ್ತಾರವಾಗಿದ್ದು, ಅದಕ್ಕೆ ಆತ ಸಹಿ ಮಾಡಿದ್ದಾನೆ. ಆತ ಹೇಳುವಂತೆ ಈ ಎಲ್ಲಾ ಸ್ಫೋಟಗಳ ಹಿಂದೆ ‘ಅಭಿನವ್ ಭಾರತ್’ ಎಂಬ ಬಲಪಂಥೀಯ ಕೇಸರಿ ಸಂಘಟನೆಯೊಂದೇ ನಡೆಸಿದುದಲ್ಲ. ಆರೆಸ್ಸೆಸ್‌ನ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಸೇರಿದಂತೆ ಕೆಲವು ಆರೆಸ್ಸೆಸ್ ಪ್ರಚಾರಕರು ಕೂಡಾ ಈ ಭಯೋತ್ಪಾದಕ ಕೃತ್ಯಗಳ ಸಂಚು ರೂಪಿಸಿದ್ದಾರೆ ಹಾಗೂ ಹಣ ಸಹಾಯವನ್ನು ಕೂಡಾ ಒದಗಿಸಿದ್ದಾರೆ.
‘‘ಇಂದ್ರೇಶ್ ಕುಮಾರ್ ನನ್ನನ್ನು 2005ನೆ ಇಸವಿಯ ವೇಳೆಗೆ ನಾನು ಗುಜರಾತ್‌ನ ಡಾಂಗ್ ಜಿಲ್ಲೆಯಲ್ಲಿ ನಡೆಸುತ್ತಿರುವ ಶಬರಿ ಧಾಮ್ ನಲ್ಲಿ ಭೇಟಿಯಾಗಿದ್ದ. ಆಗ ಇಂದ್ರೇಶ್ ಜೊತೆ ಹಲವಾರು ಹಿರಿಯ ಆರೆಸ್ಸೆಸ್ ಪದಾಧಿಕಾರಿಗಳು ಕೂಡಾ ಇದ್ದರು. ಸ್ಫೋಟ ಸಂಚುಗಳ ಬಗ್ಗೆ ಮಾಹಿತಿ ನೀಡಿದ ಇಂದ್ರೇಶ್, ತನ್ನ ಭಯೋತ್ಪಾದಕ ಸಂಚಿನ ಬಗ್ಗೆ ನನಗೆ ಸೂಕ್ಷ್ಮವಾಗಿ ತಿಳಿಸಿದರು. ಆದರೆ ನನ್ನನ್ನು ಈ ಸಂಚಿನಲ್ಲಿ ಒಳಪಡಿಸಲು ಇಚ್ಛಿಸುವುದಿಲ್ಲವೆಂದು ಅವರು ತಿಳಿಸಿದರು. ಬದಲಿಗೆ ಆರೆಸ್ಸೆಸ್ ವಹಿಸಿದಂತಹ ಬುಡಕಟ್ಟು ಜನರ ಕಲ್ಯಾಣ ಕಾರ್ಯಗಳತ್ತ ಗಮನಹರಿಸುವಂತೆ ಅವರು ತಿಳಿಸಿದರು. ಈ ಭಯೋತ್ಪಾದಕ ದಾಳಿಗಳಿಗೆ ಸುನೀಲ್ ಜೋಶಿಯನ್ನು ನೇಮಿಸಲಾಗಿದ್ದು,ಆತನಿಗೆ ಅಗತ್ಯವಿರುವ ಎಲ್ಲ ನೆರವುಗಳನ್ನು ನೀಡುತ್ತಿರುವುದಾಗಿ ಇಂದ್ರೇಶ್ ನನಗೆ ತಿಳಿಸಿದ’’ ಎಂದು ಅಸೀಮಾನಂದ ಬಯಲುಪಡಿಸಿದ್ದಾನೆ.
ಇಂದ್ರೇಶ್ ಹೇಗೆ ಜೋಶಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಹಾಗೂ ಬಾಂಬ್‌ಗಳನ್ನು ಇರಿಸಲು ಬೇಕಾದ ಜನರನ್ನು ಹೇಗೆ ಒದಗಿಸಿದ ಎಂಬ ಬಗ್ಗೆ ಅಸೀಮಾನಂದ ತಪ್ಪೊಪ್ಪಿಗೆಯಲ್ಲಿ ವಿವರಿಸಿದ್ದಾನೆ. ಕಾಲಕ್ರಮೇಣ ಈ ಭಯೋತ್ಪಾದಕ ಸಂಚುಗಳಲ್ಲಿ ತಾನು ಪಾತ್ರ ವಹಿಸಿದ್ದನ್ನೂ ಆತ ಒಪ್ಪಿಕೊಂಡಿದ್ದಾನೆ. ಮಾಲೆಗಾಂವ್, ಹೈದರಾಬಾದ್ ಮತ್ತು ಅಜ್ಮೇರ್‌ಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಆರೆಸ್ಸೆಸ್ ಪ್ರಚಾರಕರು ಹಾಗೂ ಹಿಂದೂ ಉಗ್ರವಾದಿಗಳ ಒಂದು ಗುಂಪಿಗೆ ತಾನು ಹೇಗೆ ಪ್ರೇರಣೆ ನೀಡಿದೆ ಎಂಬುದನ್ನು ಆತ ವಿವರಿಸಿದ್ದಾನೆ.
ಹೀಗೆ ಅಸೀಮಾನಂದನ ತಪ್ಪೊಪ್ಪಿಗೆ ಹೇಳಿಕೆಯು, ಮಾಲೆಗಾಂವ್ ಹಾಗೂ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಹಿಂದುತ್ವವಾದಿ ಭಯೋತ್ಪಾದಕ ಶಕ್ತಿಗಳು ನೇರವಾಗಿ ಶಾಮೀಲಾಗಿರುವುದಕ್ಕೆ ದೊರೆತ ಸ್ಪಷ್ಟ ಪುರಾವೆಯಾಗಿದೆ. ಅಸೀಮಾನಂದ ಆರೆಸ್ಸೆಸ್ ನಾಯಕತ್ವಕ್ಕೆ ತೀರಾ ನಿಕಟವಾಗಿದ್ದ. ಅಸೀಮಾನಂದ ತನ್ನ ಶಬರಿ ಧಾಮ್‌ನಲ್ಲಿ ಏರ್ಪಡಿಸುತ್ತಿದ್ದ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಆರೆಸ್ಸೆಸ್ ವರಿಷ್ಠ ಕೆ.ಎಸ್.ಸುದರ್ಶನ್ ಹಾಗೂ ಹಾಲಿ ಮುಖ್ಯಸ್ಥ ಮೋಹನ್ ಭಾಗ್ವತ್ ಮುಂತಾದ ಗಣ್ಯರು ಭಾಗವಹಿಸಿದ್ದರು.
2002ರಲ್ಲಿ ಗುಜರಾತ್‌ನ ಅಕ್ಷರಧಾಮ್ ದೇಗುಲದ ಮೇಲೆ ಶಂಕಿತ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿ, ಹಲವರ ಮಾರಣ ಹೋಮ ನಡೆಸಿದ ಘಟನೆಯು ತನ್ನಲ್ಲಿ ಸೇಡಿನ ಭಾವನೆಯನ್ನ ಮೂಡಿಸಿತೆಂದು ಅಸೀಮಾನಂದ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾನೆ. ಡಾಂಗ್‌ನಲ್ಲಿ ವನವಾಸಿ ಕಲ್ಯಾಣ್ ಆಶ್ರಮವನ್ನು ನಡೆಸುತ್ತಿದ್ದ ಅಸೀಮಾನಂದ್‌ಗೆ 2003ನೇ ಇಸವಿಯಲ್ಲಿ ಸುನೀಲ್ ಜೋಶಿ ಹಾಗೂ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಪರಿಚಯವಾಯಿತು. ಆದರೆ 2006ರ ವೇಳೆಗಷ್ಟೇ ಆತ ಭಯೋತ್ಪಾದಕ ಸಂಚಿನಲ್ಲಿ ನೇರವಾಗಿ ಭಾಗಿಯಾದ. 2006ರಲ್ಲಿ ವಾರಣಾಸಿಯ ಸಂಕಟಮೋಚನ ದೇಗುಲದ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ ಆತ ಒಂದು ಬಳಿಕ ದಾಳಿಗಳನ್ನು ಕಾರ್ಯಗತಗೊಳಿಸುವ ನಿರ್ಧಾರ ಕೈಗೊಂಡ.
‘‘ಮಾರ್ಚ್ 2006ರಲ್ಲಿ ಪ್ರಜ್ಞಾಸಿಂಗ್ ಠಾಕೂರ್, ಸುನೀಲ್ ಜೋಶಿ, ಭರತ್ ರಿತೇಶ್ವರ್ ಹಾಗೂ ನಾನು, ಸಂಕಟಮೋಚನ ಸ್ಫೋಟಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ನಿರ್ಧರಿಸಿದೆವು ’’ ಎಂದು ಅಸೀಮಾನಂದ ಮ್ಯಾಜಿಸ್ಟ್ರೇಟರಿಗೆ ತಿಳಿಸಿದ್ದಾನೆ
ಸ್ಫೋಟಕ್ಕೆ ಬೇಕಾದ ಸಾಮಗ್ರಿಗಳನ್ನು ವ್ಯವಸ್ಥೆಗೊಳಿಸಲು ಅಸೀಮಾನಂದ ಸುನೀಲ್ ಜೋಶಿಗೆ 25 ಸಾವಿರ ರೂ. ನೀಡಿದ್ದ.
  ಅಸೀಮಾನಂದ ಜೋಶಿ ಹಾಗೂ ರಿತೇಶ್ವರ್‌ರನ್ನು ಗೋರಖ್‌ಪುರಕ್ಕೆ ಕಳುಹಿಸಿ, ಅಲ್ಲಿನ ಬಿಜೆಪಿ ಸಂಸದ ಯೋಗಿ ಅವೈದ್ಯನಾಥ್‌ರ ತನ್ನ ಸಂಚಿಗೆ ನೆರವನ್ನು ಯಾಚಿಸಿದ. ಅಲ್ಲಿ ಜೋಶಿ ಅವೈದ್ಯನಾಥ್ ಜೊತೆಗೆ ಗುಪ್ತ ಮಾತುಕತೆ ನಡೆಸಿದ್ದನೆನ್ನಲಾಗಿದೆ. ಆದರೆ ಬರಿಗೈಯಲ್ಲಿ ವಾಪಾಸಾದ ಜೋಶಿ, ಅವೈದ್ಯನಾಥ್‌ನಿಂದ ತಮಗೆ ಯಾವುದೇ ಹೆಚ್ಚಿನ ಸಹಕಾರ ದೊರೆಯಲಾರದೆಂದು ತಿಳಿಸಿದ.
ಇದು ಅಸೀಮಾನಂದನನ್ನು ಹಿಮ್ಮೆಟ್ಟಿಸಲಿಲ್ಲ. ಆತ ತನ್ನ ಸಂಚನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮುಂದುವರಿದ.
ಜೂನ್ 2006ರಲ್ಲಿ ಅಸೀಮಾನಂದ, ರಿತೇಶ್ವರ್, ಸಾಧ್ವಿ ಪ್ರಜ್ಞಾ ಹಾಗೂ ಜೋಶಿ ಗುಜರಾತ್‌ನ ವಲ್ಸಾಡ್‌ನಲ್ಲಿರುವ ರಿತೇಶ್ವರ್‌ರ ನಿವಾಸದಲ್ಲಿ ಮತ್ತೊಮ್ಮೆ ಭೇಟಿಯಾದರು. ಈ ಸಭೆಗೆ ಮೊತ್ತಮೊದಲ ಬಾರಿಗೆ ಜೋಶಿ ತನ್ನ ನಿಕಟವರ್ತಿಗಳಾದ ಡಾಂಗೆ, ಕಾಲಾಸಂಗ್ರಾ, ಲೋಕೇಶ್ ಶರ್ಮಾ ಹಾಗೂ ಅಶೋಕ್ ಯಾನೆ ಅಮಿತ್‌ನನ್ನು ಕರೆತಂದಿದ್ದ.
 ‘‘ಬಾಂಬ್ ಕಾ ಜವಾಬ್ ಬಾಂಬ್ ಸೆ ದೇನಾ ಚಾಹಿಯೇ (ಬಾಂಬ್‌ಗೆ ಉತ್ತರವನ್ನು ಬಾಂಬ್‌ನಿಂದಲೇ ನೀಡಬೇಕು) ಎಂದು ನಾನು ಎಲ್ಲರಲ್ಲೂ ಹೇಳಿದೆ ಎಂದು ಅಸೀಮಾನಂದ್ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾನೆ. ‘‘ ಆದರೆ ಜೋಶಿ ಹಾಗೂ ಆತನ ಬಳಗವು ಈಗಾಗಲೇ ಈ ವಿಚಾರವಾಗಿ ಏನನ್ನೋ ಮಾಡುತ್ತಿದೆಯೆಂಬುದು ನನಗೆ ಆ ಸಭೆಯಲ್ಲಿ ಮನದಟ್ಟಾಯಿತು’’ ಎಂದು ಆತ ತಿಳಿಸಿದ್ದಾನೆ.

‘‘ಈ ಸಭೆಯ ಬಳಿಕ ಜೋಶಿ, ಪ್ರಜ್ಞಾ, ರಿತೇಶ್ವರ್ ಹಾಗೂ ನಾವು ಪ್ರತ್ಯೇಕ ಸಭೆಯನ್ನು ನಡೆಸಿದೆವು. ಮಾಲೆಗಾಂವ್‌ನಲ್ಲಿ ಶೇ.80ರಷ್ಟು ಜನರುಮುಸ್ಲಿಮರು ಹಾಗೂ ಮೊದಲ ಬಾಂಬ್‌ನ್ನು ನಾವು ಮಾಲೆಗಾಂವ್‌ನಲ್ಲೇ ಸ್ಫೋಟಿಸಬೇಕೆಂದು ನಾನು ಸಲಹೆ ನೀಡಿದೆ. ದೇಶವಿಭಜನೆಯ ಸಂದರ್ಭದಲ್ಲಿ ಹೈದರಾಬಾದ್‌ನ ನಿಜಾಮ,ತನ್ನ ಪ್ರಾಂತ್ಯವನ್ನು ಪಾಕಿಸ್ತಾನಕ್ಕೆ ಸೇರಿಸಬಯಸಿದ್ದ. ಹಾಗಾಗಿ ಹೈದರಾಬಾದ್ ಕೂಡಾ ದಾಳಿಗೆ ಒಂದು ಒಳ್ಳೆಯ ಗುರಿ ಎಂದು ನಾನು ಸೂಚಿಸಿದೆ. ರಾಜಸ್ತಾನದ ಅಜ್ಮೇರ್ ದರ್ಗಾವನ್ನು ಭಾರೀ ಸಂಖ್ಯೆಯ ಹಿಂದುಗಳು ಕೂಡಾ ಸಂದರ್ಶಿಸುತ್ತಿದ್ದಾರೆ. ಅಜ್ಮೇರ್‌ನಲ್ಲಿ ಬಾಂಬ್ ಸ್ಫೋಟಿಸಿದಲ್ಲಿ, ಹಿಂದುಗಳು ಅಲ್ಲಿಗೆ ಹೋಗಲು ಹಿಂಜರಿಯುವರು ಎಂದು ನಾನು ಸಲಹೆ ಮಾಡಿದ್ದೆ ಎಂದು ಅಸೀಮಾನಂದ ಹೇಳಿದ್ದಾನೆ. ಅಲಿಗಢ ಮುಸ್ಲಿಂ ವಿವಿಯನ್ನು ದಾಳಿಗೆ ಗುರಿಯಾಗಿಸ ಬೇಕೆಂದೂ ನಾನು ತಿಳಿಸಿದ್ದೆ’’ ಎಂದು ಅಸೀಮಾನಂದ ಹೇಳುತ್ತಾನೆ. ಈ ಎಲ್ಲ ಸ್ಥಳಗಳ ಮೇಲೆ ದಾಳಿ ನಡೆಸಬೇಕೆಂಬ ನನ್ನ ಸಲಹೆಗೆ ಸಭೆಯಲ್ಲಿದ್ದವರೆಲ್ಲರೂ ಸಮ್ಮತಿಸಿದರು ಎಂದು ಅಸೀಮಾನಂದ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ತಿಳಿಸಿದ್ದಾನೆ.
 
ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಪ್ರಯಾಣಿಸುವ ಸಂಜೋತಾ ಎಕ್ಸ್‌ಪೆಸ್‌ನಲ್ಲಿ ಬಹುತೇಕ ಪಾಕಿಸ್ತಾನಿಗಳೇ ಪ್ರಯಾಣಿಸುತ್ತಿದ್ದು, ಆ ರೈಲಿನ ಮೇಲೂ ಬಾಂಬ್ ದಾಳಿ ನಡೆಸಬೇಕೆಂದು ಸಭೆಯಲ್ಲಿ ಜೋಶಿ ಸಲಹೆ ನೀಡಿದ. ಸಂಜೋತಾ ಎಕ್ಸ್‌ಪ್ರೆಸ್ ಮೇಲೆ ದಾಳಿ ನಡೆಸುವ ಹೊಣೆಗಾರಿಕೆಯನ್ನು ಸ್ವತಃ ಜೋಶಿಯೇ ವಹಿಸಿಕೊಂಡ. ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಬೇಕಾದ ಆರ್‌ಡಿಎಕ್ಸ್ ರಾಸಾಯನಿಕವನ್ನು ಡಾಂಗೆ ಏರ್ಪಾಡು ಮಾಡುವನೆಂದು ಆತ ತಿಳಿಸಿದ. ಈ ಎಲ್ಲ ಸ್ಫೋಟಗಳನ್ನು ನಡೆಸಲು ಮೂರು ತಂಡಗಳನ್ನು ರಚಿಸಲಾಗುವುದೆಂದು ಜೋಶಿ ಹೇಳಿದ. ಒಂದು ಭಯೋತ್ಪಾದಕ ತಂಡದ ಸದಸ್ಯರಿಗೆ ಇನ್ನೊಂದು ಭಯೋತ್ಪಾದಕ ತಂಡಗಳ ಸದಸ್ಯರ ಗುರುತು, ಪರಿಚಯ ವಿರಲಾರದೆಂದೂ ಆತ ಸಭೆಯಲ್ಲಿ ತಿಳಿಸಿದನೆಂದು ಅಸೀಮಾ ನಂದ ಬಹಿರಂಗಪಡಿಸಿದ್ದಾನೆ.  (ಮುಂದುವರಿಯುವುದು).

ಯಾರೀತ ಅಸೀಮಾನಂದ ?
 
  ಮಾಲೆಗಾಂವ್, ಮಕ್ಕಾ ಮಸೀದಿ ಮತ್ತಿತರ ಸ್ಫೋಟ ಪ್ರಕರಣಗಳ ರೂವಾರಿ ನಭ ಕುಮಾರ್ ಯಾನೆ ಅಸೀಮಾನಂದ, ಮೂಲತಃ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಕಾಮಾರ್‌ಪುಕಾರ್ ಗ್ರಾಮದ ನಿವಾಸಿ. 1971ರಲ್ಲಿ ಹೂಗ್ಲಿಯಲ್ಲಿ ಬಿಎಸ್ಸಿ ಹಾನರ್ಸ್ ಪದವಿ ಪಡೆದ ನಭಕುಮಾರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯಲು ಬರ್ಧಮಾನ್ ಜಿಲ್ಲೆಗೆ ತೆರಳಿದ.ಆತ ಶಾಲಾ ದಿನಗಳಲ್ಲೇ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದರೂ, ಸ್ನಾತಕೋತ್ತರ ಪದವಿ ಕಲಿಯುತ್ತಿದ್ದ ಸಂದರ್ಭದಲ್ಲಿ ಆತ ಸಕ್ರಿಯ ಆರೆಸ್ಸೆಸ್ ಸದಸ್ಯನಾದ. 1977ರಲ್ಲಿ ಆತ ಪುರುಲಿಯಾ ಹಾಗೂ ಬಂಕುರಾ ಜಿಲ್ಲೆಗಳಲ್ಲಿ ಆರೆಸ್ಸೆಸ್ ನಡೆಸುತ್ತಿದ್ದ ವನವಾಸಿ ಕಲ್ಯಾಣ ಅಶ್ರಮಗಳಲ್ಲಿ ಪೂರ್ಣಾವಧಿ ಕಾರ್ಯಕರ್ತನಾದ. 1981ರಲ್ಲಿ ನಭಕುಮಾರ್‌ನ ಗುರು ಸ್ವಾಮಿ ಪರಮಾನಂದ್, ಆತನಿಗೆ ಆಸೀಮಾನಂದ್ ಎಂದು ಪುನರ್‌ನಾಮಕರಣ ಮಾಡಿದರು.
1988 ಹಾಗೂ 1993ರಲ್ಲಿ ಆತ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ವನವಾಸಿ ಕಲ್ಯಾಣ್ ಆಶ್ರಮದಲ್ಲಿ ಸೇವೆ ಸಲ್ಲಿಸಿದ. 1993 ಹಾಗೂ 1997ರ ಮಧ್ಯೆ ಆತ ದೇಶಾದ್ಯಂತ ಸಂಚರಿಸಿ ಬುಡಕಟ್ಟು ಪ್ರದೇಶಗಳಲ್ಲಿ ಹಿಂದೂ ಧರ್ಮದ ಬಗ್ಗೆ ಉಪನ್ಯಾಸಗಳನ್ನು ನೀಡಿದ. 1997ರ ಬಳಿಕ ಆತ ಗುಜರಾತ್‌ನ ಡಾಂಗ್‌ನಲ್ಲಿ ನೆಲೆಸಿ,ಶಬರಿ ಧಾಮ ಎಂಬ ಬುಡಕಟ್ಟು ಕಲ್ಯಾಣ ಸಂಸ್ಥೆಯನ್ನು ಆರಂಭಿಸಿದ. 
ಅಸೀಮಾನಂದನ ಮನಪರಿವರ್ತನೆಗೆ ಕಾರಣನಾದ ಅಮಾಯಕ ಖೈದಿ
ಮಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ತಪ್ಪೆಸಗದಿದ್ದರೂ ಅನ್ಯಾಯವಾಗಿ ಜೈಲು ಸೇರಿರುವ ಮುಸ್ಲಿಂ ಯುವಕನೊಬ್ಬನನ್ನು ತಾನು ಭೇಟಿಯಾದ ಬಳಿಕ, ಆತನ ಜೊತೆ ನಡೆಸಿದ ಮಾತುಕತೆಯು ತನ್ನಲ್ಲಿ ಪರಿವರ್ತನೆಯನ್ನು ತಂದಿತು. ತನ್ನಿಂದಾಗಿ ಅಮಾಯಕರು ಶಿಕ್ಷೆ ಅನುಭವಿಸುವುದು ಬೇಡವೆಂದು ಭಾವಿಸಿ ತಪ್ಪೊಪ್ಪಿಗೆ ಹೇಳಿಕೆ ನೀಡಲು ನಿರ್ಧರಿಸಿದ್ದಾಗಿ ಅಸೀಮಾ ನಂದ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ತಿಳಿಸಿದ್ದಾನೆ. ಕಲೀಂನ ಭೇಟಿಯ ಬಳಿಕ ಬಹಳ ಬದಲಾದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡು ತನ್ನ ತಪ್ಪೊಪ್ಪಿ ಕೊಳ್ಳಲು ನಿರ್ಧರಿಸಿದೆನೆಂದು ಅಸೀಮಾನಂದ ಹೇಳಿತ್ತಾನೆ. ‘‘ಚಂಚಲಗುಡ ಜೈಲಿನಲ್ಲಿ ನನ್ನನ್ನು ಇರಿಸಲಾದ ಸಂದರ್ಭದಲ್ಲಿ, ನನ್ನ ಸಹ ಬಂಧಿಗಳಲ್ಲೊಬ್ಬನಾದ ಕಲೀಂ ಎಂಬ ಯುವಕನ ಪರಿಚಯ ವಾಯಿತು. ಆತ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪಕ್ಕೆ ಸಂಬಂಧಿಸಿ ಒಂದೂವರೆ ವರ್ಷ ಜೈಲಿನಲ್ಲಿ ದಿನಗಳೆದಿದ್ದ.ನಾನು ಜೈಲಿ ನಲ್ಲಿದ್ದಾಗ ಕಲೀಂ ನನಗೆ ಬಹಳಷ್ಟು ನೆರವಾದ’’.
‘‘ನನಗೆ ಆತ ಆಹಾರ, ನೀರು ಇತ್ಯಾದಿಗಳನ್ನು ತಂದು ಕೊಡುತ್ತಿದ್ದ. ಕಲೀಂನ ಸನ್ನಡತೆಗೆ ನಾನು ಮಾರುಹೋದೆ ಹಾಗೂ ತಪ್ಪೊಪ್ಪಿಗೆ ನೀಡುವ ಮೂಲಕ ನಾನು ಮಾಡಿದ ಅಪರಾಧಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳು ವಂತೆ ನನ್ನ ಆತ್ಮಸಾಕ್ಷಿ ನನಗೆ ಎಚ್ಚರಿಸಿತು. ಹೀಗಾದಲ್ಲಿ ನೈಜ ಅಪರಾಧಿಗಳಿಗೆ ಶಿಕ್ಷೆಯಾಗಲಿದೆ ಮತ್ತು ನಿರಪ ರಾಧಿಗಳು ನರಳಲಾರರು ಎಂಬ ದೃಷ್ಟಿಯಿಂದ ನಾನು ತಪ್ಪೊಪ್ಪಿಗೆ ಹೇಳಿಕೆ ಯನ್ನು ನೀಡಲು ನಿರ್ಧರಿಸಿದೆ’’ ಎಂದು ಅಸೀಮಾನಂದ ತಿಳಿಸಿದ್ದಾನೆ.
ಕಲೀಂನಂತೆ ಈ ಸ್ಫೋಟ ಪ್ರಕರಣ ಗಳಿಗೆ ಸಂಬಂಧಿಸಿ ಆಂಧ್ರ, ಮಹಾರಾಷ್ಟ್ರ ಗಳಲ್ಲಿ 30ಕ್ಕೂ ಅಧಿಕ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ. ಆನೇಕ ಮುಸ್ಲಿಂ ಯುವಕರು ಹಲವು ವರ್ಷ ತಾವು ಮಾಡದ ತಪ್ಪಿಗಾಗಿ ಜೈಲಿನಲ್ಲಿ ದಿನಗಳೆದರು, ಇನ್ನೂ ಕೆಲವರು ಈಗಲೂ ಬಿಡುಗಡೆಯಾಗಿಲ್ಲ. ಅವರ ತಾರುಣ್ಯ ಹಾಗೂ ಭವಿಷ್ಯ ಎರಡೂ ನಾಶವಾಗಿವೆ. ಇವು ಅವರಿಗೆ ಎಂದಾದರೂ ಮರಳಿ ದೊರೆಯಲು ಸಾಧ್ಯವೇ?.

ಸ್ಫೋಟ ಸಂಚಿನ ರೂವಾರಿಗಳು?
 ಇಂದ್ರೇಶ್ ಕುಮಾರ್: ಆರೆಸ್ಸೆಸ್ ಕೇಂದ್ರೀಯ ಸಮಿತಿಯ ಸದಸ್ಯ. ಇಂದ್ರೇಶ್ ಕುಮಾರ್ ಮಾಲೆಗಾಂವ್, ಸಂಜೋತಾ ಎಕ್ಸ್‌ಪ್ರೆಸ್, ಅಜ್ಮೇರ್ ಹಾಗೂ ಮಕ್ಕಾ ಮಸೀದಿ ಸ್ಫೋಟಗಳನ್ನು ನಡೆಸಲು ಆರೆಸ್ಸೆಸ್ ಪ್ರಚಾರಕರಿಗೆ ಮಾರ್ಗದರ್ಶನ ಹಾಗೂ ಹಣಕಾಸು ನೆರವು ನೀಡಿದ್ದರೆಂದು ಪ್ರಕರಣದ ಮೂವರು ಆರೋಪಿಗಳಾದ ಆಸೀಮಾನಂದ,ಲೋಕೇಶ್ ಶರ್ಮಾ ಹಾಗೂ ಶಿವಮ್ ಧಕಡ್ ಆಪಾದಿಸಿದ್ದಾರೆ.



ಲೆ.ಕ. ಶ್ರೀಕಾಂತ್ ಪುರೋಹಿತ್:  ಕೇಸರಿ ಭಯೋತ್ಪಾದಕ ಸಂಘಟನೆ ಅಭಿನವ್ ಭಾರತ್‌ನ ಸ್ಥಾಪಕ ಸದಸ್ಯ. ನಾಶಿಕ್‌ನಲ್ಲಿ ಸೇನಾ ಗುಪ್ತಚರ ದಳದಲ್ಲಿ ಕರ್ತವ್ಯದಲ್ಲಿ ನಿಯೋಜಿತನಾಗಿದ್ದಾಗ, ಆತ ಇತರ ಸೇನಾಧಿಕಾರಿಗಳನ್ನು ಕೂಡಾ ತನ್ನ ಭಯೋತ್ಪಾದಕ ಸಂಘಟನೆಯತ್ತ ಸೆಳೆಯಲು ಯತ್ನಿಸಿದ್ದ. 2008ರ ಮಾಲೆಗಾಂವ್ ಸ್ಫೋಟಕ್ಕೆ ಆರ್‌ಡಿಎಕ್ಸ್ ಪೂರೈಕೆ ಮಾಡಿದ ಆರೋಪ ಹೊತ್ತಿದ್ದಾನೆ.




ಸುಧಾಕರ್ ಧರ್ ದ್ವಿವೇದಿ ಯಾನೆ ದಯಾನಂದ ಪಾಂಡೆ: ಜಮ್ಮುವಿನಲ್ಲಿ ಶಾರದಾಪೀಠವೆಂಬ ಆಶ್ರಮವನ್ನು ನಡೆಸುತ್ತಿದ್ದ ಈತ 2008ರ ಮಾಲೆಗಾಂವ್ ಸ್ಫೋಟದ ಆರೋಪಿಗಳಿಗೆ ಮಾರ್ಗ ದರ್ಶಕನಾಗಿದ್ದ. ತನ್ನ ಲ್ಯಾಪ್‌ಟಾಪ್‌ನಲ್ಲಿ ಅಭಿವನ್ ಭಾರತ್‌ನ ಸದಸ್ಯರ ಜೊತೆಗಿನ ಸಭೆಗಳನ್ನು ವಿಡಿಯೋ ರೂಪದಲ್ಲಿ ದಾಖಲಿಸಿಕೊಳ್ಳುತ್ತಿದ್ದ ಹವ್ಯಾಸ ಆತನಿಗಿದ್ದಿತ್ತು. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆತನ ಪಾತ್ರಕ್ಕೆ ಇದು ಬಲವಾದ ಪುರಾವೆಯಾಯಿತು.



ಸುನೀಲ್ ಜೋಶಿ:   ಮಧ್ಯಪ್ರದೇಶದ ಮೋವ್ ಜಿಲ್ಲೆಯ ಮಾಜಿ ಆರೆಸ್ಸೆಸ್ ಪ್ರಚಾರಕ. 2006ರಲ್ಲಿ ಮಧ್ಯಪ್ರದೇಶದಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿ ಯಾಗಿ ಹೆಸರಿಸಲ್ಪಟ್ಟ ಬಳಿಕ ಆತ ಆರೆಸ್ಸೆಸ್‌ನಿಂದ ಹೊರಬಿದ್ದಿದ್ದ. ಆದರೆ ಕೆಲವು ಆರೆಸ್ಸೆಸ್ ಪ್ರಚಾರಕರ, ಕೇಸರಿ ತೀವ್ರವಾದಿಗಳ ಜೊತೆಗೂಡಿ ತನ್ನದೇ ಆದ ಅಂತಾರಾಜ್ಯ ಭಯೋತ್ಪಾದಕ ಜಾಲ ವೊಂದನ್ನು ರಚಿಸಿದ್ದ. ಮಾಲೆಗಾಂವ್ ಸ್ಫೋಟ ಪ್ರಕರಣದ ಆತ ಪ್ರಧಾನ ರೂವಾರಿಗಳಲ್ಲಿ ಈತ ಒಬ್ಬನಾಗಿದ್ದ.



ಸಂದೀಪ್ ಡಾಂಗೆ:
ಮಧ್ಯಪ್ರದೇಶದ ಇಂದೋರ್ ಸಮೀಪದ ಶಾಜಾಪುರ್ ಜಿಲ್ಲೆಯ ಹಿರಿಯ ಆರೆಸ್ಸೆಸ್ ಪ್ರಚಾರಕ. ಸುನೀಲ್ ಜೋಶಿ ಹಾಗೂ ಇನ್ನೋರ್ವ ಆರೆಸ್ಸೆಸ್ ಪ್ರಚಾರಕ ರಾಮಚಂದ್ರ ಕಾಲಾಸಂಗ್ರಾ ಜೊತೆಯಲ್ಲಿ ಈತ ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಹಾಗೂ ಮುಸ್ಲಿಂ ಪ್ರಾರ್ಥನಾ ಸ್ಥಳಗಳ ಮೇಲೆ ಬಾಂಬ್ ಸ್ಫೋಟಗಳನ್ನು ನಡೆಸಿದ ಆರೋಪವನ್ನು ಹೊತ್ತಿದ್ದಾನೆ. ಪ್ರಸ್ತುತ ಈತ ತಲೆಮರೆಸಿಕೊಂಡಿದ್ದಾನೆ.



ಲೋಕೇಶ್ ಶರ್ಮಾ: ಆರೆಸ್ಸೆಸ್ ವಿಭಾಗ ಪ್ರಚಾರಕ ಹಾಗೂ ಸುನೀಲ್ ಜೋಶಿ, ಡಾಂಗೆ ಹಾಗೂ ಕಾಲ್ಸಂಗ್ರಾ ಅವರ ನಿಕಟವರ್ತಿ. ಮಕ್ಕಾ ಮಸೀದಿ ಹಾಗೂ ಅಜ್ಮೇರ್ ಶರೀಫ್‌ಗಳಲ್ಲಿ ಬಾಂಬ್‌ಗಳನ್ನು ಸ್ಫೋಟಿಸಲು ಬಳಸಿದ ಎರಡು ನೊಕಿಯಾ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಈತ ಖರೀದಿಸಿದ್ದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ