ಶನಿವಾರ, ಡಿಸೆಂಬರ್ 25, 2010

ತೊಗಾಡಿಯಾ, ಮುತಾಲಿಕ್‌ರವರು ಒಸಾಮಾ ಬಿನ್ ಲಾದೆನ್: ಬಿ.ಕೆ. ಹರಿಪ್ರಸಾದ್ ಆರೋಪ



ಮಂಗಳೂರು, ಡಿ.25: ಬಿಜೆಪಿಯ ನಾಯಕರಾದ ಪ್ರವೀಣ್ ತೊಗಾಡಿಯಾ ಮತ್ತು ಪ್ರಮೋದ್ ಮುತಾಲಿಕ್ ಒಸಾಮಾ ಬಿನ್ ಲಾದೆನ್‌ರಂತಹವರು. ಅವರಿಂದ ದೇಶಕ್ಕೆ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದುತ್ವವನ್ನು ಪಣಕ್ಕಿಟ್ಟುಕೊಂಡು ಅಧಿಕಾರಕ್ಕೆ ಬರುವ ಬಿಜೆಪಿಯ ಹೇಯ ಕೃತ್ಯಕ್ಕೆ ಜನತೆ ಪಾಠ ಕಲಿಸಬೇಕಾಗಿದೆ ಎಂದರು.


‘ಹಿಂದುತ್ವ’ದ ಅರ್ಥ ಹೇಳಿದರೆ ರಾಜಕೀಯ ಸನ್ಯಾಸ: ಬಿಜೆಪಿಗೆ ಸವಾಲು
ಅಷ್ಟು ವರ್ಷಗಳಿಂದ ತಾನು ಬಿಜೆಪಿಯಲ್ಲಿದ್ದರೂ ಹಿಂದುತ್ವ ಏನೆಂದೇ ತನಗೆ ತಿಳಿದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರಾಗಿದ್ದ ಜಸ್ವಂತ್ ಸಿಂಗ್ ಅವರೇ ಹೇಳಿರುವಾಗ ಹಿಂದುತ್ವ ಎನ್ನುವಂತದ್ದು ಬಿಜೆಪಿಯ ರಾಜಕೀಯ ಕಲ್ಪನೆ ಮಾತ್ರ. 5000 ವರ್ಷಗಳ ಇತಿಹಾಸವನ್ನು ಹೊಂದಿರುವ ಹಿಂದೂ ಧರ್ಮಕ್ಕೆ, ಹಿಂದುಗಳಿಗೆ ಬಿಜೆಪಿಯ ಸಹಕಾರ, ರಕ್ಷಣೆ ಬೇಕಾಗಿಲ್ಲ. ಅದು ಬಲಿಷ್ಠವಾಗಿದೆ ಎಂದ ಹರಿಪ್ರಸಾದ್, ಹಿಂದುತ್ವದ ಅರ್ಥವನ್ನು ಬಿಜೆಪಿಯವರು ಹೇಳಿದರೆ ತಾನು ರಾಜಕೀಯ ಸನ್ಯಾಸ ಕೈಗೊಳ್ಳುವುದಾಗಿ ಸವಾಲೆಸೆದರು.

ಚುನಾವಣೆ ಹತ್ತಿರ ಬಂದಾಗ ಬಿಜೆಪಿ ಸಮಾಜೋತ್ಸವಕ್ಕೆ ಮುಂದಾಗುತ್ತದೆ. ಅಲ್ಲಿಯವರೆಗೆ ಹಿಂದೂಗಳ ಬಗ್ಗೆ ಅದಕ್ಕೆ ಕಳವಳವೇ ಇರುವುದಿಲ್ಲ. ನೀರಾ ರಾಡಿಯಾರಂತಹವರನ್ನು ಹುಟ್ಟು ಹಾಕಿದವರೇ ಬಿಜೆಪಿಯವರು. 13,000 ಕೋ. ರೂ. ಗಳ ಹುಡ್ಕೋ ಹಗರಣ ಸೇರಿದಂತೆ ಭ್ರಷ್ಟತೆ, ಭ್ರಷ್ಟರಿಂದಲೇ ಬಿಜೆಪಿ ತುಂಬಿದೆ ಎಂದವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕ ನಿತಿನ್ ಗಡ್ಕರಿ ಭೂಮಿ ಡಿನೋಟಿಫಿಕೇಶನ್ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರ ಪುತ್ರನ ಮದುವೆಯ ವೈಭವವನ್ನು ಗಮನಿಸಿದರೆ ಕರ್ನಾಟಕ ರಾಜ್ಯದಿಂದಲೇ ಹಣ ಹರಿದು ಹೋಗಿರುವ ಅನುಮಾನ ವ್ಯಕ್ತವಾಗುತ್ತದೆ ಎಂದರು.

ರಾಜ್ಯಪಾಲರು ವಿರುದ್ಧ ಬಿಜೆಪಿಯ ಹೇಳಿಕೆಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಸಂವಿಧಾನದ ಬಗ್ಗೆ ಗೌರವ ಇಲ್ಲದ ಪಕ್ಷದಿಂದ ರಾಜ್ಯಪಾಲರ ವಿರುದ್ಧ ಯಾವುದೇ ರೀತಿಯ ಅಪವಾದ, ಹೇಳಿಕೆಗಳ ಕುರಿತು ಆಶ್ಚರ್ಯಪಡಬೇಕಾಗಿಲ್ಲ. ರಾಜ್ಯಪಾಲರು ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಪ್ರಚಾರ ಗಿಟ್ಟಿಸುವುದರಲ್ಲಿ ಜೆಡಿಎಸ್ ಮುಂದೆ
ಭ್ರಷ್ಟಾಚಾರದ ಪ್ರಕರಣಗಳನ್ನು ಬಯಲಿಗೆ ಜೆಡಿಎಸ್ ಪ್ರಮುಖ ಪಾತ್ರವಹಿಸಿದ್ದರೆ ಕಾಂಗ್ರೆಸ್ ಏನು ಮಾಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಪ್ರಚಾರ ಗಿಟ್ಟಿಸುವುದರಲ್ಲಿ ಜೆಡಿಎಸ್ ಯಾವತ್ತೂ ಮುಂದಿರುತ್ತದೆ. ಕಾಂಗ್ರೆಸ್ ಯಾವುದೇ ಪ್ರಚಾರವಿಲ್ಲದೆ ಆ ಕಾರ್ಯ ಮಾಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಸದಾಶಿವ ಉಳ್ಳಾಲ್, ಪಿ.ವಿ. ಮೋಹನ್, ಶಶಿಧರ ಹೆಗ್ಡೆ, ಟಿ.ಕೆ. ಸುಧೀರ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ