ಮಂಗಳವಾರ, ಡಿಸೆಂಬರ್ 28, 2010

ಕೈಕಟ್ಟಿ ಕುಳಿತಿದೆ ಬುದ್ಧದೇವರ ಕಮ್ಯುನಿಸ್ಟ್ ಸರ್ಕಾರ ! ಮಾಧ್ಯಮಗಳಿಗೂ ಇದೊಂದು ವಿಷಯವೇ ಅಲ್ಲ !

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಪಾಂಚಾಲ ಎಂಬ ಪ್ರದೇಶದಲ್ಲಿ ಶಾಲೆಯೊಂದಕ್ಕೆ ನುಗ್ಗಿದ ಮತಾಂಧರು ಅಲ್ಲಿದ್ದ ಶಾಲಾ ಮುಖ್ಯೋಪಾಧ್ಯಾಯ ಮತ್ತು ಇಬ್ಬರು ಶಿಕ್ಷಕರಿಗೆ ಮನಬಂದಂತೆ ಥಳಿಸಿ ಜೊತೆಗೆ ಶಾಲೆಯ ಹನ್ನೆರಡು ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಾಲೆಯ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಅವರಿಗೂ ಥಳಿಸಿ ಅದರಲ್ಲೋಬ್ಬಾಕೆಯನ್ನು   ಎಳೆದುಕೊಂಡು ಹೋಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಷ್ಟೊಂದು ಬೀಭತ್ಸವಾದ ಹೇಯ ಘಟನೆ ನಡೆದಿದ್ದರೂ ಪಶ್ಚಿಮ ಬಂಗಾಳ ಸರ್ಕಾರ ಮಾತ್ರ ಏನೂ ಆಗಿಲ್ಲ ಎಂಬಂತೆ ಸುಮ್ಮನೆ ಕುಳಿತಿದ್ದು ಈಗ ಕೆಲವು ಮಾಧ್ಯಮಗಳು ಈ ಪ್ರಕರಣ ಬೆಳಕಿಗೆ ತಂದ ನಂತರ ತನಿಖೆ ನಡೆಸುವ ಭರವಸೆ ನೀಡಿದೆ.
 
ನೊಂದ ವಿದ್ಯಾರ್ಥಿನಿಯರ ಮಾತುಗಳನ್ನು ಆಲಿಸುತ್ತಿರುವ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಎಸ್.ಜಡ್.ಅದ್ನಾನ್
ಹೌರಾ ಜಿಲ್ಲೆಯ ಪಾಂಚಾಲ ಏರಿಯಾದ ಬಿಕಿ ಹಕೊಲಾ ಜೂನಿಯರ್ ಹೈಸ್ಕೂಲ್ ನಲ್ಲಿ ಈ ಘಟನೆ ನಡೆದಿದ್ದು ಇದಕ್ಕೆ ಆಡಳಿತ ಸಮಿತಿಗೆ ಅಲ್ಲಿನ ಮುಖ್ಯೋಪಾಧ್ಯಾಯರ ಜೊತೆ ಇದ್ದ ದ್ವೇಷ ಕಾರಣ ಎನ್ನಲಾಗಿದೆ. ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ ಸೇರಿರುವ ಈ ಶಾಲೆಗೇ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ದಿಲ್ವಾರ್ ಎಂಬ ವ್ಯಕ್ತಿಯನ್ನು ಮುಖ್ಯೋಪಾದ್ಯಾಯರಾಗಿ ನೇಮಿಸಿತ್ತು . ಆದರೆ ಈ ನೇಮಕ ಶಾಲಾ ಆಡಳಿತ ಮಂಡಳಿಗೆ ಇಷ್ಟವಿರಲಿಲ್ಲ. ಇವರನ್ನು ವರ್ಗಾಯಿಸಲು ಹಲವು ಬಾರಿ ಪ್ರಯತ್ನ ಪಟ್ಟರೂ ಅದು ನಡೆಯದಿದ್ದಾಗ ಇವರ ಮೇಲೆ ಹೇಗಾದರೂ ಪ್ರತೀಕಾರ ತೀರಿಸಲು ಕಾಯುತ್ತಿತ್ತು.
 
ಶಾಲೆಗೇ ರಜೆ ಬಂದಾಗ ಶಾಲಾ ಆವರಣದಲ್ಲಿ ಕಾಳಿ ಪೂಜೆ ಏರ್ಪಡಿಸಲಾಗಿತ್ತು. ಆಗ ಹಾಕಿದ ಬ್ಯಾರಿಕೇಡುಗಳನ್ನು ಹಾಗೆಯೇ ಬಿಡಲಾಗಿತ್ತು. ಶಾಲೆ ಪ್ರಾರಂಭವಾದಾಗ ಈ ಬ್ಯಾರಿಕೇಡುಗಳಿಂದಾಗಿ ವಿದ್ಯಾರ್ಥಿನಿಯರು ಅದನ್ನು ದಾಟಿ ಶಾಲೆಗೇ ಬರುವುದು ಕಷ್ಟವಾಗುತ್ತಿತ್ತು. ಆ ಕಾರಣಕ್ಕಾಗಿ ಬ್ಯಾರಿಕೇಡು ತೆರವುಗೊಳಿಸುವಂತೆ ಕೋರಲಾಯಿತು. ಆದರೆ ತೆರವು ಗೊಳಿಸದೇ ಇದ್ದಾಗ ನವೆಂಬರ್ ಆರನೇ ತಾರೀಕಿಗೆ ಪೊಲೀಸರಿಗೆ ದೂರು ನೀಡಲಾಯಿತು. ಮೂರು ದಿನ ಸುಮ್ಮನೆ ಇದ್ದ ಪೊಲೀಸರು ನವೆಂಬರ್ ಒಂಬತ್ತನೇ ತಾರೀಖಿನಂದು ಶಾಲೆಗೆ ಬಂದು ಬಿದಿರಿನಿಂದ ಕಟ್ಟಿದ್ದ ಆ ಬ್ಯಾರಿಕೇಡುಗಳನ್ನೂ ತೆರವುಗೊಳಿಸಿದರು . ಇದಕ್ಕೆ ಶಾಲಾ ಶಿಕ್ಷಕವೃಂದ ಮತ್ತು ವಿದ್ಯಾರ್ಥಿನಿಯರು ಸಹಕರಿಸಿದರು. ಪೊಲೀಸರು ಹೋದ ಕೆಲವು ಹೊತ್ತಿನ ಬಳಿಕ ಶಾಲೆಗೇ ನುಗ್ಗಿದ ದುಷ್ಕರ್ಮಿಗಳ ತಂಡ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರಿಗೆ ಹಿಗ್ಗಾಮುಗ್ಗ ಥಳಿಸಿ ಒಬ್ಬಾಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ.
 
ವಿದ್ಯಾರ್ಥಿನಿಯರೊಂದಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಾಲಿನಿ ಭಟ್ಟಾಚಾರ್ಯ
ಈ ವಿದ್ಯಾರ್ಥಿನಿಯನ್ನು ಕೊಲ್ಕತ್ತಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದ್ದು ಒಂದು ತಿಂಗಳ ಚಿಕಿತ್ಸೆಯ ನಂತರ ಈಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ. ಆದರೆ ಆರೋಪಿಗಳ ವಿರುದ್ಧ ದೂರು ಕೊಟ್ಟಿದ್ದರೂ ಇದುವರೆಗೂ ಒಬ್ಬ ಆರೋಪಿಯ ಬಂಧನ ಸಹ ಆಗಿಲ್ಲ. ಇದರ ವಿರುದ್ಧ ಇಲ್ಲಿನ ಕೆಲವು ನಾಗರೀಕರು ಪಾಂಚಾಲ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿದರೂ ಪೊಲೀಸರು ಆರೋಪಿಗಳ ವಿರುದ್ಧ ಕ್ರಮಕೈಗೊಂಡಿಲ್ಲ. ಈ ಪ್ರಕರಣ ಅಲ್ಲಿನ ಯಾವುದೇ ಪ್ರಮುಖ ಪತ್ರಿಕೆಗಳಲ್ಲಿ ಸುದ್ಧಿಯಾಗಲೂ ಇಲ್ಲ. ಆದರೆ ಅಹಮದ್ ಹಸನ್ ಸಂಪಾದಕತ್ವದ ಕಾಲಂ ವೀಕ್ಲಿ ಪತ್ರಿಕೆ ಈ ಘಟನೆಯನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿತು. ಆನಂತರ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಮಹಿಳಾ ಆಯೋಗ ಇವರನ್ನು ಭೇಟಿ ಮಾಡಿ ಇವರ ದೂರನ್ನು ಆಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿತು. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಎಸ್.ಜಡ್. ಅದ್ನಾನ್ ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ಮಾಲಿನಿ ಭಟ್ಟಾಚಾರ್ಯ ಇದೀಗ ಈ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ್ದು ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
 
ಏಷ್ಯಾ ಮಾನವ ಹಕ್ಕುಗಳ ಆಯೋಗ ಸಹ ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಬೇಕಾದ ಕಾನೂನು ಪ್ರಕ್ರಿಯೆಯಲ್ಲಿ ತೊಡಗುವುದಾಗಿ ಹೇಳಿದೆ. ಆರೋಪಿಗಳಲ್ಲಿ ರಾಜಕುಮಾರ್ ಮತ್ತು ಸುಜಿತ್ ಕೊಲ್ಲೆ ತಂದೆ ಮಗನಾಗಿದ್ದು ಮಿತು ಕೊಲ್ಲೆ , ಬಿನೋಯ್ ಮುನ್ನ , ದಾಖಂದೋ ಕೊಲ್ಲೆ , ಬಿಕಾಂತೋ , ಬುಬಾಯಿ , ತೊಕಾಯಿ ಮತ್ತು ಇನ್ನಿತರ ಕೆಲವರು ಸೇರಿ ಒಟ್ಟು ಹತ್ತೊಂಬತ್ತು ಮಂದಿ ಆರೋಪಿಗಳು ಈ ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಘಟನೆ ನಡೆದ ನಂತರ ಶಾಲೆ ಮುಚ್ಚಿದ್ದು ಇದೀಗ ಶಾಲೆಯನ್ನು ತೆರೆಯಲು ಸೂಕ್ತ ವ್ಯವಸ್ಥೆ ಮಾಡುವುದಾಗಿ ಮಾಲಿನಿ ಭಟ್ಟಾಚಾರ್ಯ ಹೇಳಿದ್ದರೂ ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರು ಶಾಲೆಗೇ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ