ಮಂಗಳವಾರ, ಜನವರಿ 25, 2011

ರಾಷ್ಟ್ರಧ್ವಜ: ಸಂಘಪರಿವಾರದ ದ್ವಂದ್ವ

ಕೋಮುಭಾವನೆಗಳನ್ನು ಕೆರಳಿಸುವ ತನ್ನ ಹಳೆಯ ಚಾಳಿಯನ್ನು ಆರೆಸ್ಸೆಸ್ , ಬಿಜೆಪಿ ಕೂಟವು ಈಗ ಮತ್ತೆ ಆರಂಭಿಸಿದೆ. ಈ ಸಲದ ಗಣರಾಜ್ಯೋತ್ಸವ ದಿನದಂದು ಅವರು ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಉತ್ಸುಕವಾಗಿರುವ ಬಿಜೆಪಿಯಾಗಲಿ ಅಥವಾ ಆರೆಸ್ಸೆಸ್ ಆಗಲಿ ಈ ತ್ರಿವರ್ಣಧ್ವಜದ ಬಗ್ಗೆ ಕನಿಷ್ಠ ಮಟ್ಟದ ಗೌರವವು ಇಲ್ಲವೆಂಬ ಸಂಗತಿಯು ಆರೆಸ್ಸೆಸ್‌ನ ಪೂರ್ವೇತಿಹಾಸವನ್ನು ಕೆದಕಿದಾಗ ನಿಚ್ಚಳವಾಗಿ ಗೋಚರವಾಗುತ್ತದೆ.
ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರಧ್ವಜ ವಾಗಿ ಆಯ್ಕೆ ಮಾಡುವ ಸಂವಿಧಾನ ರಚನಾ ಸಭೆಯ ನಿರ್ಧಾರಕ್ಕೆ ಆರೆಸ್ಸೆಸ್‌ನ ಮುಖವಾಣಿ ಯಾದ ‘ಆರ್ಗನೈಸರ್’ ಇಂಗ್ಲಿಷ್ ಪತ್ರಿಕೆಯು, ತನ್ನ ಜುಲೈ 17,1947ರ ಸಂಚಿಕೆಯಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ತ್ರಿವರ್ಣಧ್ವಜದ ಬದಲಿಗೆ ಕೇಸರಿಧ್ವಜವನ್ನೇ ರಾಷ್ಟ್ರಧ್ವಜವಾಗಿ ಆಯ್ದುಕೊಳ್ಳಬೇಕೆಂದು ಅದು ಆಗ್ರಹಿಸಿತ್ತು.
ಇದೇ ಬೇಡಿಕೆಯನ್ನು ಆರೆಸ್ಸೆಸ್, ಭಾರತ ಸ್ವಾತಂತ್ರಗೊಳ್ಳುವುದಕ್ಕೆ ಮುನ್ನ ಆರ್ಗನೈಸರ್ ಪತ್ರಿಕೆಯ ಸಂಪಾದಕೀಯಗಳಲ್ಲಿ ಮಂಡಿಸಿತ್ತು (ಜುಲೈ 31, 1947ರ ಸಂಚಿಕೆ ಹಾಗೂ ಆಗಸ್ಟ್ 14,1947ರ ಸಂಚಿಕೆ).ವಿವಿಧ ಧರ್ಮ, ಸಂಸ್ಕೃತಿಗಳನ್ನೊಳಗೊಂಡ ಸಮಗ್ರ ರಾಷ್ಟ್ರ ಭಾರತದ ಪರಿಕಲ್ಪನೆಯನ್ನು ಅದು ಖಂಡತುಂಡ ವಾಗಿ ವಿರೋಧಿಸಿತ್ತು. ಆರ್ಗನೈಸರ್‌ನ 1947 ಆಗಸ್ಟ್ 14ರ ಸಂಚಿಕೆಯಲ್ಲಿ ಪ್ರಕಟವಾದ ‘ಮಿಸ್ಟರಿ ಬಿಹೈಂಡ್ ದಿ ಭಗವಾ ಧ್ವಜ’ ( ಕೇಸರಿ ಧ್ವಜದ ಹಿಂದಿನ ರಹಸ್ಯ) ಎಂಬ ಲೇಖನದಲ್ಲಿಯೂ ದಿಲ್ಲಿಯ ಕೆಂಪುಕೋಟೆಯಲ್ಲಿ ಕೇಸರಿ ಧ್ವಜವನ್ನು ಹಾರಿಸಬೇಕೆಂದು ಆಗ್ರಹಿಸಲಾಗಿತ್ತು. ಮಾತ್ರ ವಲ್ಲದೆ ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವಾಗಿ ಆಯ್ಕೆ ಮಾಡಿರುವುದನ್ನು ಈ ಕೆಳಗಿನ ಪದಗಳಲ್ಲಿ ಬಹಿರಂಗವಾಗಿ ನಿಂದಿಸಿತ್ತು.
‘‘ವಿಧಿಯ ಒದೆತದಿಂದ ಅಧಿಕಾರಕ್ಕೆ ಬಂದ ಜನರು ನಮ್ಮ ಕೈಗಳಿಗೆ ತ್ರಿವರ್ಣ ಧ್ವಜವನ್ನು ಕೊಡಬಹುದು. ಆದರೆ ಅದಕ್ಕೆಂದೂ ಹಿಂದು ಗಳು ಗೌರವ ಕೊಡಲಾರರು ಮತ್ತು ಅದನ್ನು ಒಪ್ಪಲಾರರು. ಮೂರು ಎಂಬ ಶಬ್ದದಲ್ಲೇ ಕೆಡುಕು ಎಂಬುದಿದೆ, ಮತ್ತು ಮೂರು ಬಣ್ಣಗಳನ್ನು ಒಳಗೊಂಡ ಧ್ವಜವು ಖಂಡಿತ ವಾಗಿಯೂ ಅತ್ಯಂತ ಕೆಟ್ಟ ಮಾನಸಿಕ ಪರಿಣಾಮವನ್ನು ಉಂಟು ಮಾಡಲಿದೆ ಹಾಗೂ ದೇಶಕ್ಕೆ ಹಾನಿಕಾರಕವಾಗಿದೆ ’’.
ಆರೆಸ್ಸೆಸ್‌ನ ಎರಡನೆ ಪರಮೋಚ್ಚ ನಾಯಕರಾಗಿದ್ದ ಮಾಧವ ಸದಾಶಿವರಾವ್ ಗೋಲ್ವಲ್ಕರ್ 1946ರ ಜುಲೈ 14ರಂದು ನಾಗಪುರದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ, ಕೇಸರಿ ಧ್ವಜವು ಭಾರತದ ಮಹಾನ್ ಸಂಸ್ಕೃತಿಯನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತದೆ ಹಾಗೂ ಅದು ಭಗವಂತನ ಸಾಕಾರ ರೂಪವಾಗಿದೆ’’ ಎಂದು ಸಾರಿದ್ದರು. ‘‘ ಕಟ್ಟಕಡೆಗೆ ಇಡೀ ದೇಶವು ಕೇಸರಿ ಧ್ವಜದ ಮುಂದೆ ಶಿರಬಾಗಿ ನಮಿಸಲಿದೆಯೆಂದು ನಾವು ದೃಢವಾಗಿ ನಂಬಿದ್ದೇವೆ’’ ಎಂದು ಹೇಳಿದ್ದರು.
ಭಾರತಕ್ಕೆ ಸ್ವಾತಂತ್ರ ದೊರೆತು, ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾದ ನಂತರವೂ ಆರೆಸ್ಸೆಸ್ ಮಾತ್ರ ಅದನ್ನು ರಾಷ್ಟ್ರಧ್ವಜವೆಂದು ಒಪ್ಪಿಕೊಳ್ಳಲು ನಿರಾಕರಿಸಿತು. ಆರೆಸ್ಸೆಸ್ ಕಾರ್ಯಕರ್ತರು ಪೂಜ್ಯಭಾವದಿಂದ ಕಾಣುವ ಗೋಲ್ವಲ್ಕರ್ ಅವರ ಲೇಖನಗಳ ಸಂಗ್ರಹಕೃತಿ ‘ಬಂಚ್ ಆಫ್ ಥಾಟ್’್ಸ (ಚಿಂತನಗುಚ್ಛ) ಕೃತಿಯಲ್ಲಿ ಒಂದೆಡೆ ಹೀಗೆ ಹೇಳಲಾಗಿದೆ. ‘‘ನಮ್ಮ ನಾಯಕರು ನಮ್ಮ ದೇಶಕ್ಕೆ ಹೊಸ ಧ್ಜಜವೊಂದನ್ನು ರೂಪಿಸಿದ್ದಾರೆ. ಅವರು ಯಾಕೆ ಹಾಗೆ ಮಾಡಿದರು? ಇದೊಂದು ಕೇವಲ ದಿಕ್ಕ್ಚ್ಯುತಿ ಹಾಗೂ ನಕಲು ಮಾಡಿದ ಪ್ರಕರಣವಾಗಿದೆ. ನಮ್ಮದು ಭವ್ಯವಾದ ಇತಿಹಾಸವನ್ನು ಹೊಂದಿರುವ ಪುರಾತನ ಹಾಗೂ ಮಹಾನ್ ದೇಶವಾಗಿದೆ. ಹೀಗಿದ್ದೂ, ನಮಗೆ ನಮ್ಮದೇ ಆದ ಧ್ವಜವೆಂಬುದು ಇರಲಿಲ್ಲವೇ?. ಸಹಸ್ರಾರು ವರ್ಷಗಳಿಂದಲೂ ನಮ್ಮದೇ ಆದ ರಾಷ್ಟ್ರಗೀತೆ ಯೂ ಇರಲಿಲ್ಲವೇ?. ನಿಸ್ಸಂದೇಹವಾಗಿಯೂ ನಮಗಿತ್ತು. ಹಾಗಾದರೆ, ಯಾಕೆ ನಮ್ಮ ಮನದಲ್ಲಿ ಇಷ್ಟೊಂದು ಗಾಢವಾದ ಶೂನ್ಯತೆ ಆವರಿಸಿದೆ?’’.
ವಿಶೇಷವೆಂದರೆ ಇಂದಿಗೂ ಕೂಡಾ ಆರೆಸ್ಸೆಸ್‌ನ ಯಾವುದೇ ಕಾರ್ಯಕ್ರಮಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿಲ್ಲ. ಅಷ್ಟೇಕೆ ನಾಗಪುರದ ರೇಶಂಭಾಗ್‌ನಲ್ಲಿರುವ ಆರೆಸ್ಸೆಸ್ ಪ್ರಧಾನ ಕಾರ್ಯಾಲಯದಲ್ಲೂ ಕೇಸರಿ ಧ್ವಜ ಹಾರಾಡುವುದಿಲ್ಲ. ಅಷ್ಟೇಕೆ ರಾಷ್ಟ್ರದಾದ್ಯಂತ ದಿನನಿತ್ಯವೂ ನಡೆಯುವ ಆರೆಸ್ಸೆಸ್‌ನ ಶಾಖೆಗಳಲ್ಲೂ ತ್ರಿವರ್ಣ ಧ್ವಜ ಕಾಣಿಸಿಕೊಳ್ಳು ವುದಿಲ್ಲ. ಬದಲಾಗಿ ಅಲ್ಲಿ ಕೇಸರಿ ಧ್ವಜ ಹಾರಾ ಡುತ್ತಿರುತ್ತದೆ. ಇವೆಲ್ಲ ವಿಷಯಗಳನ್ನು ಅವಲೋಕಿಸಿದಾಗ, ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುವುದಕ್ಕೆ ಮಾತ್ರ ರಾಷ್ಟ್ರಧ್ವಜ ವನ್ನು ಸಂಘಪರಿವಾರವು ಬಳಸಿಕೊಳ್ಳು ತ್ತಿರುವುದು ನಿಚ್ಚಳವಾಗುತ್ತದೆ. 1991ರಲ್ಲಿ ಬಿಜೆಪಿ ನಾಯಕ ಮುರಳಿಮನೋಹರ ಜೋಶಿ ಕಾಶ್ಮೀರಕ್ಕೆ ಏಕತಾಯಾತ್ರೆಯನ್ನು ಕೈಗೊಂಡು, ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿಬಂದಿದ್ದರು.
ಉಮಾಭಾರತಿ ಹಿಂದೆ ಬಿಜೆಪಿಯಲ್ಲಿದ್ದಾಗ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರು. 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಗೊಳಿಸಲು ಅಯೋಧ್ಯೆಗೆ ತೆರಳಿದ್ದ ಕರಸೇವಕರು ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದುಕೊಂಡಿದ್ದರು. ರಾಷ್ಟ್ರಧ್ವಜ ವಿಚಾರದಲ್ಲೂ ಅರೆಸ್ಸೆಸ್ ಆಷಾಡಭೂತಿತನವನ್ನು ಪ್ರದರ್ಶಿಸುತ್ತಿದೆ. ರಾಷ್ಟ್ರೀಯ ಸಂಕೇತ ಗಳು ತಾನು ಬಯಸಿದಂತಿರಬೇಕೆಂಬ ಅದರ ನೀತಿಯು ಒಂದಲ್ಲ ಒಂದು ದಿನ ಅದಕ್ಕೆ ತಿರುಗು ಬಾಣವಾಗಿ ಪರಿಣಮಿಸಲಿದೆ ಮತ್ತು ಕೇಸರಿ ಪಾಳಯದ ನೈಜ ಬಣ್ಣವನ್ನು ಬಯಲು ಗೊಳಿಸಲಿದೆ. ಮುಸ್ಲಿಮರ ನಿಂದನೆ ಯೇ ಅದರ ಬಿಡುವಿನ ಕಾಲದ ಅಚ್ಚುಮೆಚ್ಚಿನ ಹವ್ಯಾಸ ವೆಂಬುದು ಮಾತ್ರ ಇಲ್ಲಿ ಒಂದು ಅತ್ಯಂತ ಸ್ಪಷ್ಟವಾಗಿ ಗೋಚರವಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ