ಭಾನುವಾರ, ಜನವರಿ 23, 2011

♦ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಟಾಪಟಿ ♦1000 ಕೋಟಿ ರೂ.ಗೂ ಅಧಿಕ ನಷ್ಟ♦ ಸರಕಾರದ ಬೆಂಬಲದಲ್ಲಿ ಸರಕಾರಿ ವಾಹನಗಳಿಗೆ ಬೆಂಕಿ


ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದ ಬೆನ್ನಿಗೆ ಬಿಜೆಪಿ ಕರೆ ನೀಡಿದ್ದ ‘ಸ್ವಯಂ ಪ್ರೇರಿತ ರಾಜ್ಯ ಬಂದ್’ ಕರೆ ಶನಿವಾರ ಬಲವಂತದ ಬಂದ್ ಆಗಿ ಪರಿವರ್ತನೆಗೊಂಡಿತು. ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ದಾಂಧಲೆಗಳನ್ನು ನಡೆಸಿದ್ದು, ಬಂದ್ ನಡೆಸದ ಅಂಗಡಿಗಳನ್ನು ಧ್ವಂಸಗೊಳಿಸಿದ ಘಟನೆಗಳು ಸಂಭವಿಸಿವೆ. ಹಲವೆಡೆ ವಾಹನಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಸರಕಾರಿ ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಹಲವೆಡೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆದರೆ, ಜನತೆ ರಾಜ್ಯ ಸರಕಾರ ತನ್ನ ವೈಯಕ್ತಿಕ ಹಿತಕ್ಕೆ ಕರೆ ನೀಡಿದ್ದ ಬಂದ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವೆಡೆ ಬಂದ್ ವಿಫಲಗೊಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಬಿಜೆಪಿ ಪ್ರತಿಭಟನೆಗೆ ಅಡ್ಡಿಪಡಿಸಿದ ಘಟನೆಗಳು ನಡೆದಿವೆ. ಬಿಜೆಪಿ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಎಂ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ಹಾಗೂ ಜನ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೊಂದು ಸರಕಾರ ಪ್ರಾಯೋಜಿತ ಬಂದ್. ಸರಕಾರ ನಷ್ಟವನ್ನು ಭರಿಸಬೇಕು ಎಂದು ಆಗ್ರಹಿಸಿವೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಸರಕಾರ ಹಾಗೂ ಬಿಜೆಪಿ ಪಕ್ಷ ಬಂದ್‌ಗೆ ಕರೆ ನೀಡಿದ್ದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಬಂದ್‌ಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರೆ ನೇರ ಹೊಣೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆ ರಾಜ್ಯಪಾಲರ ನಿರ್ಧಾರದಿಂದ ವಿಚಲಿತರಾಗಿರುವ ಬಿಜೆಪಿ ಪಾಳದಲ್ಲಿ ನಡುಕ ಆರಂಭವಾಗಿದ್ದು, ಶನಿವಾರ ಬೆಳಗ್ಗೆ ಇಲ್ಲಿನ ರೇಸ್‌ಕೋರ್ಸ್ ರಸ್ತೆಯಲ್ಲಿನ ಸಿಎಂ ನಿವಾಸದಲ್ಲಿ ಯಡಿಯೂರಪ್ಪ ತುರ್ತು ಶಾಸಕಾಂಗ ಸಭೆ ನಡೆಸಿದರು. ಹಿರಿಯ ಸಚಿವರು ಮತ್ತು ಶಾಸಕರು ರಾಜಭವನಕ್ಕೆ ನಿಯೋಗದ ಮೂಲಕ ಪಾದಯಾತ್ರೆ ನಡೆಸಿ ರಾಜ್ಯಪಾಲರು ಮೊಕದ್ದಮೆ ದಾಖಲಿಸಲು ಹೊರಡಿಸಿರುವ ಅನುಮತಿ ಪತ್ರ ನೀಡಬೇಕೆಂದು ಮನವಿ ಮಾಡಿದರು.
ಈ ಮಧ್ಯೆ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ದಾಂಧಲೆ ನಡೆಸಿದ್ದು, ಹಲವು ಕಡೆ ಕಲ್ಲು ತೂರಾಟ, ವಾಹನಗಳನ್ನು ಜಖಂಗೊಳಿಸಿದ ಘಟನೆ ನಡೆದಿದೆ. ಸರಕಾರಿ ಪ್ರಾಯೋಜಕತ್ವದಲ್ಲಿ ನಡೆದ ಬಂದ್ ವೇಳೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದು, ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿನ್ನೆ ರಾತ್ರಿ ಮೊಕದ್ದಮೆ ಹೂಡಲು ಅನುಮತಿ ನೀಡಿದ ಬಳಿಕ ರಾಜ್ಯ ಬಂದ್‌ಗೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕರೆ ನೀಡುತ್ತಿದ್ದಂತೆ, ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತಕ್ಕೆ, ಶಾಲಾ- ಕಾಲೇಜುಗಳಿಗೆ ರಜೆ ನೀಡುವಂತೆ ಪರೋಕ್ಷವಾಗಿ ಆದೇಶ ನೀಡಲಾಗಿತ್ತೆನ್ನಲಾಗಿದೆ.
ಇದೇ ಹಿನ್ನೆಲೆಯಲ್ಲಿ ರಾತ್ರಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಬಸ್‌ಗಳಿಗೆ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ಟಯರ್‌ಗಳಿಗೆ ಬೆಂಕಿ ಹಚ್ಚಿ ಬಂದ್‌ಗೆ ಬೆಂಬಲಿಸುವಂತೆ ಹಾಗೂ ಜನ ಬೀದಿಗಿಳಿಯದಂತಹ ವಾತಾವರಣವನ್ನು ಸೃಷ್ಟಿಸಿದ್ದರು.
ಅಲ್ಲದೆ ಇಂದು ರಾಜ್ಯಾದ್ಯಂತ ಬಂದ್ ವೇಳೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿ, ಹಲವು ಕಡೆಗಳಲ್ಲಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಜನತೆ ಮಾತ್ರ ಸರಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಬಸ್ ಸಂಚಾರ ಹೊರತುಪಡಿಸಿದಂತೆ ಕಾರು, ಆಟೊ, ದ್ವಿಚಕ್ರ ವಾಹನಗಳು ಎಂದಿನಂತೆ ಇಂದು ರಸ್ತೆಗಿಳಿದಿದ್ದವು. ಮುಖ್ಯರಸ್ತೆಗಳನ್ನು ಹೂರತುಪಡಿಸಿದಂತೆ ಹಲವು ಕಡೆ ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಆದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದರಿಂದ ಮಧ್ಯಾಹ್ನದ ವೇಳೆ ಅಂಗಡಿ ಮಾಲಕರು ಸ್ವಇಚ್ಛೆಯಿಂದ ಅಂಗಡಿ ಬಂದ್ ಮಾಡಿದರು. ಇದರಿಂದ ರಾಜ್ಯಾದ್ಯಂತ ಬಂದ್ ಸಂಪೂರ್ಣ ಯಶಸ್ವಿಯಾಗದೆ, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರಕಾರಿ ಕಚೇರಿಗಳು, ಬ್ಯಾಂಕು ತೆರೆದಿದ್ದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಖ್ಯೆ ಕಡಿಮೆ ಇತ್ತು. ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಜನ ತಮ್ಮ ದೈನಂದಿನ ಚಟುವಟಿಕೆ ನಡೆಸಲು ಪರದಾಟ ನಡೆಸಬೇಕಾಯಿತು. ರಾಜ್ಯಾದ್ಯಂತ ನಡೆದ ಬಂದ್ ವೇಳೆ ಜನ ಬೆಂಬಲ ನೀಡದ ಕಾರಣ ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಂಡ್ಯ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದರೆ, ಜೆಡಿಎಸ್ ಕಾರ್ಯಕರ್ತರು ಅದನ್ನು ತೆರೆಸುತ್ತಿದ್ದ ಘಟನೆ ನಡೆದಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಣ್ಣಗಾಗಿದೆ.
ಗುಲ್ಬರ್ಗದಲ್ಲಿ ಲಾಠಿಚಾರ್ಜ್: ಗುಲ್ಬರ್ಗದ ಸರ್ದಾರ್ ವಲ್ಲಭಬಾಯಿ ಪಾಟೀಲ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು, ಬಸ್ ಹಾಗೂ ಇನ್ನಿತರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪ್ರತಿಭಟನೆ ವಿಕೋಪಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಪೊಲೀಸರು ಮನವಿ ಮಾಡಿದರೂ, ಅವರ ವಾಹನಗಳ ಮೇಲೆಯೂ ಕಲ್ಲು ತೂರಾಟ ನಡೆಸಿದ್ದರಿಂದ ಪ್ರತಿಭಟನಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಬೆಂಗಳೂರು ನಗರದಲ್ಲಿ ಮಿಶ್ರ ಪ್ರತಿಕ್ರಿಯೆ: ರಾಜ್ಯ ಬಂದ್‌ಗೆ ಬಿಜೆಪಿ ಕರೆ ನೀಡಿದ್ದರೂ ಬೆಂಗಳೂರು ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ಬಸ್ ಸಂಚಾರವಿಲ್ಲದ ಕಾರಣ ಬೀದಿ ಗಿಳಿಯಲಿಲ್ಲ. ಆದರೂ ಜನ ಕಾರು, ದ್ವಿಚಕ್ರ ವಾಹನಗಳನ್ನು ಬಳಸಿಕೊಂಡು ಸಂಚಾರ ನಡೆಸುತ್ತಿದ್ದ ದೃಶ್ಯ ಕಂಡು ಬಂತು. ಇನ್ನು ಕೆಲವು ಕಡೆ ಬಸ್‌ಗಳಿಲ್ಲದ ಕಾರಣ ಜನ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ದಾವಣಗೆರೆಯ ಹೊನ್ನಾಳಿಯಲ್ಲಿ ಅಬಕಾರಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ರಸ್ತೆ ಮಧ್ಯೆ ಟಯರ್‌ಗೆ ಬೆಂಕಿ ಹಚ್ಚಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲದೆ ಎರಡು ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಹಾವೇರಿಯಲ್ಲಿ ಜನಶತಾಬ್ದಿ ಹಾಗೂ ಹುಬ್ಬಳ್ಳಿ-ಬೆಂಗಳೂರು ನಡುವಿನ ಪ್ಯಾಸೆಂಜರ್ ರೈಲನ್ನು ತಡೆದ ಬಿಜೆಪಿ ಕಾರ್ಯಕರ್ತರು, ಕೆಲವು ಗಂಟೆ ಸಂಚಾರಕ್ಕೆ ತಡೆಯೊಡ್ಡಿದರು.
ಬಂದ್ ವೇಳೆ ರಾಜ್ಯಾದ್ಯಂತ ನಡೆದ ದಾಂಧಲೆಗೆ ಸಂಬಂಧಿಸಿ ನೂರಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು. ಹುಬ್ಬಳ್ಳಿ, ಧಾರವಾಡ, ರಾಯಚೂರು, ಗದಗ, ಮಂಡ್ಯ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ.
ಅಪರಾಧಿ ನಾನಲ್ಲ: ಯಡಿಯೂರಪ್ಪ
ಬೆಂಗಳೂರು, ಜ.22: ಸಿಎಂ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಇಂದು ರಾಜ್ಯ ಬಂದ್‌ಗೆ ಬಿಜೆಪಿ ಕರೆನೀಡಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಬಂದ್‌ಗೆ ತಾವು ಕರೆ ನೀಡಿಲ್ಲ ಎಂದು ವಿಭಿನ್ನ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡುತ್ತಿದ್ದ ಅವರು, ರಾಜ್ಯಪಾಲರ ಕ್ರಮ ಖಂಡಿಸಿ ಜನ ಬೀದಿಗಿಳಿದಿದ್ದಾರೆ ಎಂದು ತಮ್ಮ ಪಕ್ಷದ ಕಾರ್ಯಕರ್ತರು ನಡೆಸಿದ ದಾಂಧಲೆಗಳನ್ನು ಮರೆಮಾಚಲು ಮುಂದಾದರು. ಅಲ್ಲದೆ ರಾಜ್ಯಪಾಲರ ವಿರುದ್ಧ ಬಂದ್ ನಡೆಸಲು ಸಹಕರಿಸಿದ ರಾಜ್ಯದ ಜನರಿಗೆ ಯಡಿಯೂರಪ್ಪ ಅಭಿನಂದನೆ, ಕೃತಜ್ಞತೆ ಸಲ್ಲಿಸಿದರು.
ಬಂದ್‌ಗೆ ಜನತೆಯ ಆಕ್ರೋಶ:
ರಾಜಕೀಯದ ಹಿನ್ನೆಲೆಯಲ್ಲಿ ಬಿಜೆಪಿ ಸ್ವಯಂಪ್ರೇರಿತವಾಗಿ ಬಂದ್‌ಗೆ ಕರೆ ನೀಡಿದ್ದರಿಂದ ಪರದಾಟ ನಡೆಸಿದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಬಂದ್‌ಗೆ ಕರೆ ನೀಡುವ ಮೂಲಕ ಸಾರ್ವಜನಿಕರ ಬದುಕಿನಲ್ಲಿ ಚೆಲ್ಲಾಟ ನಡೆಸುತ್ತಿದ್ದಾರೆ ಎಂದು ಸರಕಾರದ ವಿರುದ್ಧ ಕಿಡಿಗಾರಿರುವ ಸಾರ್ವಜನಿಕರು ರಾಜಕಾರಣಿಗಳ ಮೇಲೆ ಹಿಡಿಶಾಪ ಹಾಕಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ