ಶನಿವಾರ, ಜೂನ್ 18, 2011

ಸತ್ತದ್ದು ಬರೀ ಆರು ಮಂದಿ; ಯಾಕ್ಹೀಗಾಯ್ತು....? ಮಾಲೆಗಾಂವ್ ಸ್ಫೋಟದ ಬಳಿಕ ಮಾಸ್ಟರ್‌ಮೈಂಡ್ ಸಾಧ್ವಿ ಪ್ರಜ್ಞಾಸಿಂಗ್‌ಳ ಪ್ರಶ್ನೆ ಹೀಗಿತ್ತು..

.

ಗುರುವಾರ - ಜೂನ್ -16-2011

2006, ಸೆಪ್ಟೆಂಬರ್ 8, ಶುಕ್ರವಾರ, ಮಧ್ಯಾಹ್ನ 2.15 ಗಂಟೆ. ಮಾಲೆಗಾಂವ್ ಬಾಂಬ್ ಸ್ಫೋಟದ ರೂವಾರಿಗಳು ತಮ್ಮ ವಿಧ್ವಂಸಕ ಕೃತ್ಯಕ್ಕಾಗಿ ಒಂದು ಕರಾರುವಕ್ಕಾದ ದಿನವನ್ನೇ ಆಯ್ದುಕೊಂಡಿದ್ದರು. ಅಂದು ಶಬೆ ಬರಾತ್ ದಿನವಾಗಿತ್ತು. ಅಂದರೆ ವಿಮೋಚನೆಯ ಪವಿತ್ರ ರಾತ್ರಿ ಎಂದರ್ಥ. ಇಸ್ಲಾಮಿ ಕ್ಯಾಲೆಂಡರ್‌ನಲ್ಲಿ ಎಂಟನೆ ತಿಂಗಳ 15ನೆ ದಿನವಾಗಿತ್ತು ಅದು. ತಮ್ಮ ಪೂರ್ವಿಕರ ಸ್ಮರಿಸಿ, ಗೌರವಿಸಲು ಇದೊಂದು ಪವಿತ್ರವಾದ ದಿನವೆಂದು ಮುಸ್ಲಿಮರು ಭಾವಿಸುತ್ತಾರೆ. ಅದರೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪುಟ್ಟ ನಗರವಾದ ಮಾಲೆಗಾಂವ್‌ನಲ್ಲಿ ಅಂದು ನಡೆದದ್ದೇ ಬೇರೆ. ಮಧ್ಯಾಹ್ನ ಸುಮಾರು 2.15ರವೇಳೆಗೆ ನಗರದ ಮಸೀದಿ ಹಾಗೂ ಪಕ್ಕದ ದಫನಭೂಮಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳು ರಕ್ತದ ಹೊಳೆಯನ್ನು ಹರಿಸಿದವು. ಈ ಭೀಕರ ಸ್ಫೋಟದಲ್ಲಿ 37 ಮಂದಿ ಮೃತಪಟ್ಟು, ಸುಮಾರು 130 ಮಂದಿ ಗಾಯಗೊಂಡಿದ್ದರು.

2008, ಸೆಪ್ಟೆಂಬರ್ 29...

2008ರಲ್ಲಿ ಪಾತಕಿಗಳು ಎರಡನೆ ಬಾರಿಗೆ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಲು ಪವಿತ್ರ ರಂಝಾನ್ ತಿಂಗಳನ್ನೇ ಆಯ್ದುಕೊಂಡರು. ತಾವು ಪ್ರತಿಪಾದಿಸುವ ‘‘ಹಿಂದೂ ತೀವ್ರವಾದ’’ಕ್ಕೆ ಉತ್ತೇಜನ ನೀಡಲು ಈ ಸಲ ಅವರು ಉತ್ತರ ಭಾರತಾದ್ಯಂತ ಸರಣಿ ಸ್ಫೋಟಕ್ಕೆ ಸಂಚು ಹೂಡಿದರು. ಹರ್ಯಾಣದ ಫರೀದಾಬಾದ್ ಹಾಗೂ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಈ ದುಷ್ಕರ್ಮಿಗಳು ಇರಿಸಿದ ಬಾಂಬನ್ನು ಪೊಲೀಸರು ಸಕಾಲದಲ್ಲಿ ನಿಷ್ಕ್ರಿಯಗೊಳಿಸಿದರು. ಆದರೆ ಮಾಲೆಗಾಂವ್‌ನಲ್ಲಿ ಎರಡು ಬಾಂಬ್‌ಗಳು ಸ್ಫೋಟಿಸಿ ಆರು ಮಂದಿ ಮೃತಪಟ್ಟರು ಹಾಗೂ ಗುಜರಾತ್‌ನ ಮೊಡಸ್ಸಾದಲ್ಲಿ ನಡೆದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ.

2008ರ ಮಾಲೆಗಾಂವ್ ಸ್ಫೋಟದ ಹಿಂದೆ ‘ಅಭಿನವ್ ಭಾರತ್’ ಎಂಬ ಕೇಸರಿ ಉಗ್ರಗಾಮಿ ಸಂಘಟನೆಯ ಕೈವಾಡವಿರುವ ಬಗ್ಗೆ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹದಳದ (ಎಟಿಎಸ್)ಪೊಲೀಸರಿಗೆ ಬಲವಾದ ಸುಳಿವು ಸಿಕ್ಕಿತು. ಭಾರತೀಯ ಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲೆ.ಕ.ಪ್ರಸಾದ್ ಶ್ರೀಕಾಂತ್ ಪುರೋಹಿತ್ ಎಂಬಾತನನ್ನು ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ ವಶಕ್ಕೆ ತೆಗೆದುಕೊಂಡರು. ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಅಭಿನವ್ ಭಾರತ್ ಜೊತೆ ತಮಗೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಬಿಜೆಪಿ, ವಿಶ್ವಹಿಂದೂ ಪರಿಷತ್ ಹಾಗೂ ಆರೆಸ್ಸೆಸ್‌ಗಳು ಪದೇ ಪದೇ ಸ್ಪಷ್ಟಪಡಿಸುತ್ತಲೇ ಇದ್ದವು. ಆದರೆ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಹಾಗೂ ನಿವೃತ್ತ ಸೇನಾಧಿಕಾರಿ ಯೊಬ್ಬರ ನಡುವೆ ಪುಣೆಯಲ್ಲಿ ನಡೆದ ಮಾತುಕತೆಗೆ ಸಾಕ್ಷಿಯಾಗಿದ್ದ ವ್ಯಕ್ತಿ ಯೊಬ್ಬರನ್ನು ಖ್ಯಾತ ಆಂಗ್ಲ ಸಾಪ್ತಾಹಿಕ ಪತ್ರಿಕೆ ‘ದಿ ವೀಕ್’ ಇತ್ತೀಚೆಗೆ ಸಂಪ ರ್ಕಿಸಿ, ಅವರಿಂದ ಮಹತ್ವದ ಮಾಹಿತಿಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದೆ.

ಇಂದ್ರೇಶ್ ಕುಮಾರ್ ಹಾಗೂ ನಿವೃತ್ತ ಸೇನಾಧಿಕಾರಿ ನಡುವೆ ನಡೆದ ಮಾತುಕತೆಯ ಬಗ್ಗೆ ಈ ಪ್ರತ್ಯಕ್ಷದರ್ಶಿಯು ‘ದಿ ವೀಕ್’ಗೆ ನೀಡಿದ ವಿವರಗಳನ್ನು ಆತನ ಮಾತುಗಳಲ್ಲಿಯೇ ಓದಿ... ‘‘ ಈ ಸಭೆಯು 2002ರ ಜುಲೈಯಲ್ಲಿ ನಡೆದಿತ್ತು.ನಿವೃತ್ತ ಸೇನಾಧಿಕಾರಿ ಹಾಗೂ ಇಂದ್ರೇಶ್(ಕುಮಾರ್) ನಡುವೆ ನಡೆದ ಆ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಬಲ್ಲಂತಹ ವ್ಯಕ್ತಿಗಾಗಿ ಇಂದ್ರೇಶ್ ಹುಡುಕಾಡುತ್ತಿದ್ದ. ಆತ್ಮಹತ್ಯಾ ದಳಗಳನ್ನು ರಚಿಸುವ ಬಗ್ಗೆ (ನಿವೃತ್ತ) ಸೇನಾಧಿಕಾರಿ ಮಾತನಾಡುತ್ತಿದ್ದ. ಆತನ ಸಾಹಸಕ್ಕೆ ತನ್ನ ಬೆಂಬಲವಿರುವುದಾಗಿ ಇಂದ್ರೇಶ್ ಹೇಳಿದ. ನಾಸಿಕ್‌ನ ಭೋನ್ಸಾಲಾ ಮಿಲಿಟರಿ ಶಾಲೆಯಲ್ಲಿ ನುರಿತ ತಂಡಗಳಿಗೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳ ಬಳಕೆ ಬಗ್ಗೆ ತರಬೇತಿ ನೀಡುವ ಬಗ್ಗೆ ಅವರು ಚರ್ಚಿಸಿದರು. ನಾನು ಈಗಾಗಲೇ ಈ ಬಗ್ಗೆ ಸಿಬಿಐಗೆ ಹೇಳಿಕೆಯೊಂದನ್ನು ನೀಡಿರುವೆ’’.

ಇದೀಗ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಮಹತ್ತರವಾದ ಯಶಸ್ಸೊಂದನ್ನು ಸಾಧಿಸುವ ಸಮಯ ಸನ್ನಿಹಿತವಾಗಿದೆಯೆಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಈ ಪ್ರತ್ಯಕ್ಷದರ್ಶಿಯು ನೀಡಿದ ಮಾಹಿತಿಗಳು ಮಾಲೆಗಾಂವ್ ಪ್ರಕರಣದ ಕೆಲವು ನಿಗೂಢತೆಗಳನ್ನು ಭೇದಿಸುವಲ್ಲಿ ಎನ್‌ಐಎಗೆ ಬಹಳಷ್ಟು ನೆರವಾಗಿವೆ.
ತಮ್ಮ ಉದ್ದೇಶ ಸಾಧನೆಗೆ ಬೇಕಾದ ವ್ಯಕ್ತಿಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಸಂಘಟಿಸಲು ಇಂದ್ರೇಶ್ ಉತ್ಸುಕನಾಗಿದ್ದ. ಏನೇ ಆದರೂ ಈ ಎಲ್ಲ ಚಟುವಟಿಕೆಗಳ ಜೊತೆ ಆರೆಸ್ಸೆಸ್‌ನ ಹೆಸರನ್ನು ಎಳೆದು ತರಕೂಡದು ಎಂದು ಆತ ತಾಕೀತು ಮಾಡಿದ್ದ.
2008ರಲ್ಲಿ ಮಾಲೆಗಾಂವ್‌ನಲ್ಲಿ ಸರಣಿ ಸ್ಫೋಟ ನಡೆಸಲು ವಿಧ್ವಂಸಕರು ಹೆಣೆದ ಸಂಚಿನ ಕುರಿತಾದ ಸಂಕ್ಷಿಪ್ತ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ‘ದಿ ವೀಕ್’ ಪತ್ರಿಕೆಯ ತನಿಖಾ ತಂಡವು ಯಶಸ್ವಿಯಾಗಿದೆ. ಮಾಲೆಗಾಂವ್ ಸ್ಫೋಟ ಸಂಚು ರೂಪಿಸಿದವರು ನಡೆಸಿದ 400 ನಿಮಿಷಗಳ ಸಂಭಾಷಣೆಗಳ ಧ್ವನಿಸುರುಳಿಗಳು ಕೂಡಾ ಈ ತಂಡಕ್ಕೆ ಲಭ್ಯವಾಗಿದೆ.
ಸ್ವಾಮಿ ಅಸೀಮಾನಂದ ಹಾಗೂ 2008ರ ಮಾಲೆಗಾಂವ್ ಸ್ಫೋಟ
ಪ್ರಸ್ತುತ ಎನ್‌ಐಎನ ಕಸ್ಟಡಿಯಲ್ಲಿರುವ ನಭ ಕುಮಾರ್ ಯಾನೆ ಸ್ವಾಮಿ ಅಸೀಮಾನಂದ ಮೂಲತಃ ಆರೆಸ್ಸೆಸ್‌ನ ಸಹಸಂಸ್ಥೆ ವನವಾಸಿ ಕಲ್ಯಾಣ ಆಶ್ರಮದ ಮುಖ್ಯಸ್ಥನಾಗಿದ್ದ. ಈತ ಗುಜರಾತ್‌ನ ಡಾಂಗ್ ಜಿಲ್ಲೆಯಲ್ಲಿ ಶಬರಿ ಮಠವನ್ನು ಸ್ಥಾಪಿಸಿ, ಅಲ್ಲಿ ತನ್ನ ಕೋಮುವಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದ. 2007ರ ಸಂಜೋತಾ ರೈಲು ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ 59 ವರ್ಷ ವಯಸ್ಸಿನ ಅಸೀಮಾನಂದನನ್ನು 2010ರ ನವೆಂಬರ್ 19ರಂದು ಸಿಬಿಐ ಅಧಿಕಾರಿಗಳು ಹರಿದ್ವಾರದಲ್ಲಿ ಬಂಧಿಸಿದ್ದರು.

ಆದರೆ ಅಸೀಮಾನಂದ ನ್ಯಾಯಾಲಯಕ್ಕೆ ಸಲ್ಲಿಸಿದ ತಪ್ಪೊಪ್ಪಿಗೆಯ ಅಫಿದಾವಿತ್‌ನಲ್ಲಿ ಕೆಲವೊಂದು ಮಾಹಿತಿಗಳನ್ನು ಬಚ್ಚಿಟ್ಟಿರುವುದು ‘ದಿ ವೀಕ್’ಗೆ ದೊರೆತ ದಾಖಲೆ ಗಳಿಂದ ಸಾಬೀತಾಗಿದೆ. ಉದಾಹರಣೆಗೆ, 2006ರ ಮಾಲೆಗಾಂವ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ, ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಹಾಗೂ ಅಜ್ಮೀರ್ ಸ್ಫೋಟದ ಬಗ್ಗೆ ಅಸೀಮಾನಂದ ಸಲ್ಲಿಸಿದ ತಪ್ಪೊಪ್ಪಿಗೆಯ ಅಫಿದಾವಿತ್‌ನಲ್ಲಿ ತನಗೆ ‘ಅಭಿನವ್ ಭಾರತ್’ ಅಥವಾ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಜೊತೆ ನಂಟಿರುವ ಬಗ್ಗೆ ಆತ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ಆದರೆ ಸ್ವಾಮಿ ಅಸೀಮಾನಂದನಿಗೆ 2008ರ ಮಾಲೆಗಾಂವ್ ಸ್ಫೋಟ ಸಂಚಿನ ನೀಲನಕ್ಷೆಯೊಂದು ಸಿದ್ಧವಾಗಿರುವ ಬಗ್ಗೆ ಅರಿವಿತ್ತು.ಮಾತ್ರವಲ್ಲ ಆತನಿಗೆ ಆರೋಪಿಗಳ ಜೊತೆ ನಿಕಟ ಸಂಪರ್ಕ ಕೂಡಾ ಇದ್ದಿತ್ತು.

2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಸಾಕ್ಷಿಯೂ ಆಗಿರುವ ಹಿರಿಯ ಸೇನಾಧಿಕಾರಿಯೊಬ್ಬರು ನ್ಯಾಯಾಲಯದ ಮುಂದೆ ಹೀಗೆ ಹೇಳಿಕೆ ನೀಡಿದ್ದಾರೆ. ‘‘2008ರ ಫೆಬ್ರವರಿ 16ರಂದು ಕೋಲ್ಕತಾದಲ್ಲಿ ನಾನು ಮೊದಲ ಬಾರಿಗೆ ಸ್ವಾಮಿ ಅಸೀಮಾನಂದ ಅವರನ್ನು ಭೇಟಿಯಾದೆ. ಆತ ಪುರೋಹಿತ್‌ಗಾಗಿ ಕಾಯುತ್ತಿದ್ದ. ಒಂದು ತಾಸಿನ ಬಳಿಕ ಪುರೋಹಿತ್ ಆಗಮಿಸಿದವನೇ, ವಿಳಂಬಕ್ಕಾಗಿ ಕ್ಷಮೆಯಾಚಿಸಿದ. ಆತ ತನಗೆ ಹಿಮಾನಿ ಸರ್ಕಾರ್ ಎಂಬ ವೃದ್ಧ ಮಹಿಳೆಯೊಬ್ಬರನ್ನು ಪರಿಚಯಿಸಿದ. ವಿನಾಯಕ್ ವೀರ್ ಸಾವರ್ಕರ್ ಅವರ ಸೊಸೆಯಾದ ಈಕೆ ಗಾಂಧೀಜಿಯ ಹಂತಕ ನಾಥೂರಾಮ್ ಗೋಡ್ಸೆಯ ಸೋದರಸೊಸೆಯೂ ಹೌದು.
ಈ ಅಧಿಕಾರಿಯು 2008ರ ಎಪ್ರಿಲ್ 12ರಂದು ಮತ್ತೊಮ್ಮೆ ಪುರೋಹಿತ್‌ನನ್ನು ಭೋಪಾಲ್‌ನ ಶ್ರೀರಾಮ ದೇವಾಲಯದಲ್ಲಿ ಭೇಟಿಯಾದ. ಅಲ್ಲಿ ಉಪಸ್ಥಿತರಿದ್ದ ಇತರರೆಂದರೆ ಹಿಮಾನಿ,ಸಾಧ್ವಿ ಪೂರ್ಣಚೇತನಾನಂದ (ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್), ಸುಧಾಕರ್ ಉದಯಭಾನ್ ಧರ್ ದ್ವಿವೇದಿ ಯಾನೆ ಶಂಕರಾ ಚಾರ್ಯ, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ (ಸುಧಾಕರ್), ಚತುರ್ವೇದಿ ಹಾಗೂ ಭರತ್‌ಭಾಯ್ (ಭರತ್ ರತೇಶ್ವರ್).
‘‘ ಇಲ್ಲಿ,ಅಭಿನವ್ ಭಾರತ್ ಸಂಘಟನೆಯನ್ನು ಬೆಳಕಿಗೆ ತರಲು ಮಾಡಬೇಕಾದ ಕೆಲವೊಂದು ಕಾರ್ಯಗಳ ಬಗ್ಗೆ ಪುರೋಹಿತ್ ಮಾತನಾಡಿದ. ಅಭಿನವ್ ಭಾರತ್‌ನ ಅಧ್ಯಕ್ಷತೆಗೆ ಅಸೀಮಾನಂದನ ಹೆಸರನ್ನು ಪ್ರಸ್ತಾಪಿಸಲಾಯಿತು. ತದನಂತರ ದೇಶಭ್ರಷ್ಟ ಸರಕಾರವೊಂದನ್ನು ರಚಿಸುವ ಬಗ್ಗೆ ಪುರೋಹಿತ್ ಮಾತನಾಡಿದ. (ಈ ದೇಶ ಭ್ರಷ್ಟ ಸರಕಾರಕ್ಕೆ ಮಾನ್ಯತೆ ದೊರೆಯಲು) ತಾನು ಇಸ್ರೇಲ್ ಹಾಗೂ ಥಾಲ್ಯಾಂಡ್ ಜೊತೆ ಸಂಪರ್ಕ ಸ್ಥಾಪಿಸಿರುವುದಾಗಿಯೂ ಆತ ಹೇಳಿದ’’ ಎಂದು ಈ ಅಧಿಕಾರಿಯು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸಭೆಯಲ್ಲಿ ಸಮೀರ್ ಕುಲಕರ್ಣಿಯ ಗುಣಗಾನ ಮಾಡಿದ ಪುರೋಹಿತ್ ಆತನನ್ನು ‘ಚಾಣಕ್ಯ’ ಎಂದು ಬಣ್ಣಿಸಿದ. ಅಸೀಮಾನಂದ ಹಾಗೂ ಹಿಮಾನಿಯನ್ನು ಹೊರತುಪಡಿಸಿದರೆ ಭೋಪಾಲ್ ಸಭೆಯಲ್ಲಿ ಪಾಲ್ಗೊಂಡಿ ದ್ದವರೆಲ್ಲರೂ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಾಗಿದ್ದಾರೆ.
ಬಾಂಬ್ ಸ್ಫೋಟಕ್ಕೆ ಬಳಕೆಯಾದದ್ದು ಸಾಧ್ವಿಯ ಮೋಟಾರ್‌ಬೈಕ್
2008ರ ಮಾಲೆಗಾಂವ್ ಸ್ಫೋಟಕ್ಕೆ ಬಾಂಬರ್ ವಾಹನವಾಗಿ ಪ್ರಜ್ಞಾ ಸಿಂಗ್‌ಳ ಮೋಟಾರ್‌ಬೈಕನ್ನು ಅಭಿನವ್ ಭಾರತ್ ಅಳುಕಿಲ್ಲದೆಯೇ ಉಪಯೋಗಿಸಿತು. ಆದರೆ ಸ್ಫೋಟದಲ್ಲಿ ಈ ಬೈಕ್ ಪೂರ್ಣವಾಗಿ ನಾಶಗೊಳ್ಳಲಿಲ್ಲ. ಇದರಿಂದಾಗಿ ಪೊಲೀಸರಿಗೆ ಸ್ಫೋಟದ ಸಂಚಿನ ಬಗ್ಗೆ ಸಾಕಷ್ಟು ಸುಳಿವುಗಳನ್ನು ಅದು ನೀಡಿದೆ. 2006ರ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯ ಅನುಭವವಿರುವ ಮಹಾರಾಷ್ಟ್ರ ಪೊಲೀಸರು ಹಾಗೂ ಭಯೋತ್ಪಾದನಾ ನಿಗ್ರಹದಳ (ಎಟಿಎಸ್), 2008ರಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದೇ ತಡ ತಕ್ಷಣವೇ ಚುರುಕಾದವು. ಮಾಲೆಗಾಂವ್‌ನ ಸುತ್ತಮುತ್ತ ಆ ಸಮಯದಲ್ಲಿ ಹರಿದಾಡಿದ ಸಾವಿರಾರು ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದ್ದ ಎಟಿಎಸ್‌ಗೆ ದೊರೆತ ಈ ಕುತೂಹಲಕಾರಿ ಸಂಭಾಷಣೆ ತನಿಖೆಯ ಗತಿಯನ್ನೇ ಬದಲಾಯಿಸಿತು.
ಸ್ತ್ರೀಧ್ವನಿ (ಪ್ರಜ್ಞಾ ಸಿಂಗ್): ‘‘ನನ್ನ ಮೋಟಾರ್‌ಸೈಕಲ್ ಉಪಯೋಗಿಸ ಬೇಡವೆಂದು ನಾನು ನಿನಗೆ ಹೇಳಿದ್ದೆ.ಯಾಕೆ ನೀನದನ್ನು ಬಳಸಿದೆ?’’.
ಗಂಡು ಧ್ವನಿ (ರಾಮಚಂದ್ರ ‘ರಾಮ್‌ಜೀ’ ಕಾಲಾಸಂಗ್ರಾ): ‘‘ನಾವದನ್ನು ಕೊನೆಗಳಿಗೆಯಲ್ಲಿ ನಿರ್ಧರಿಸಿದೆವು’’.
ಸ್ತ್ರೀ: ಆದರೆ.. ಸತ್ತದ್ದು ಕೇವಲ ಆರು ಮಂದಿ ಮಾತ್ರ... ಯಾಕೆ?
ಗಂಡು: ಜನರ ಗುಂಪು ಸ್ವಲ್ಪ ದೂರದಲ್ಲಿತ್ತು... ಅಲ್ಲೊಂದು ಪೊಲೀಸ್ ತಡೆಬೇಲಿ ಕೂಡಾ ಇತ್ತು.ಹಾಗಾಗಿ ನಾವು ಅಲ್ಲಿ ಬೈಕನ್ನು ಪಾರ್ಕ್ ಮಾಡಬೇಕಾಯಿತು’’.
ಪೊಲೀಸರು ಈ ದೂರವಾಣಿ ಸಂಖ್ಯೆಯ ಜಾಡು ಹಿಡಿದು, ಪ್ರಜ್ಞಾಸಿಂಗ್‌ಳನ್ನು ಸೂರತ್‌ನಲ್ಲಿ ಬಂಧಿಸಿದರು. ಬಾಂಬ್ ಸ್ಫೋಟಕ್ಕೆ ಬಳಕೆಯಾದ ಬೈಕ್ ಕೂಡಾ ಆಕೆಗೆ ಸೇರಿದ್ದಾಗಿತ್ತು. ಆದರೆ ತಾನದನ್ನು ಎರಡು ವರ್ಷಗಳ ಹಿಂದೆ ಮಧ್ಯಪ್ರದೇಶದ ದೇವಸ್‌ನ ಆರೆಸ್ಸೆಸ್ ಕಾರ್ಯಕರ್ತ ಸುನೀಲ್ ಜೋಶಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಳು. ಈ ಸುನೀಲ್ ಜೋಶಿ 2007ರಲ್ಲಿ ನಿಗೂಢವಾಗಿ ಕೊಲೆಯಾಗಿದ್ದ.
ತನಿಖಾ ಸಂಸ್ಥೆಗಳ ಮೂಲಗಳು ಹೇಳುವ ಪ್ರಕಾರ ಸುನೀಲ್ ಜೋಶಿಯು ಮಧ್ಯಪ್ರದೇಶದಲ್ಲಿ ಅಭಿನವ್ ಭಾರತ್‌ನ ಕಾರ್ಯಾಚರಣೆಗಳ ಸಮನ್ವಯತೆಯನ್ನು ನೋಡಿಕೊಳ್ಳುತ್ತಿದ್ದ. ಆತನಿಗೆ ಗುಜರಾತ್ ರಾಜ್ಯದಲ್ಲಿ ಸಂಸ್ಥೆಯ ಚಟುವಟಿಕೆಗಳ ಸಮನ್ವಯಕಾರನಾಗಿದ್ದ ಅಸೀಮಾನಂದನ ಜೊತೆ ಸಂಪರ್ಕವಿತ್ತು. ತನಗೆ ಜೋಶಿಯು ತಿಳಿದಿರುವುದಾಗಿ ಅಸೀಮಾ ನಂದ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದ.
ಮಕ್ಕಾ ಮಸೀದಿ ಸ್ಫೋಟದ ಬಳಿಕ ತಾನು ಸುನೀಲ್ ಜೋಶಿ ಜೊತೆ ನಡೆಸಿದ ಮಾತು ಕತೆಯ ವಿವರಗಳನ್ನು ನ್ಯಾಯಾ ಲಯದಲ್ಲಿ ಅಸೀಮಾನಂದ ಬಹಿರಂಗ ಪಡಿಸುತ್ತಾ ‘‘ಬಾಂಬ್ ಇರಿ ಸಲು ಇಬ್ಬರು ಮುಸ್ಲಿಂ ಯುವಕರನ್ನು ಇಂದ್ರೇಶ್ ಕುಮಾರ್ ಒದಗಿಸಿಕೊಟ್ಟಿ ರುವು ದಾಗಿ ಜೋಶಿ ತನಗೆ ತಿಳಿಸಿದ್ದ’’ ಎಂದು ಹೇಳಿದ್ದ. ಈ ಪ್ರಕರಣದಲ್ಲಿ ತುಂಬಾ ಜಾಗರೂಕನಾಗಿರು ವಂತೆ ನಾನು ಜೋಶಿಗೆ ಹೇಳಿದ್ದ. ಇಂದ್ರೇಶ್ ನಿಂದ ಆತ ಜೀವಕ್ಕೆ ಅಪಾಯ ಬಂದೀತು ಎಂಬುದಾಗಿ ನಾನ ವನಿಗೆ ಎಚ್ಚರಿಸಿದ್ದೆ’’ ಎಂದು ಅಸೀಮಾನಂದ ನ್ಯಾಯಾ ಲಯಕ್ಕೆ ನೀಡಿದ ಗೌಪ್ಯ ಹೇಳಿಕೆಯಲ್ಲಿ ತಿಳಿಸಿದ್ದ.
ಎರಡು ತಿಂಗಳ ಆನಂತರ ಜೋಶಿ ದೇವಸ್‌ನಲ್ಲಿ ಕೊಲೆ ಯಾದ ಹಾಗೂ ಆತನ ಕುಟುಂ ಬಿಕರು ಆರೆ ಸ್ಸೆಸ್ ಮೇಲೆ ಆರೋಪ ಹೊರಿಸಿ ದ್ದರು. ವಿಶೇಷವೆಂ ದರೆ ಜೋಶಿ ಕೊಲೆ ಪ್ರ ಕರಣದ ಆರೋಪಿಗಳೆ ಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆರೆಸ್ಸೆಸ್ ಜೊತೆ ಸಂಪರ್ಕ ಹೊ ಂದಿದವರಾಗಿದ್ದರು. ಬಹುಶಃ ಆರೆಸ್ಸೆಸ್ ಬಗ್ಗೆ ಸುನೀಲ್ ಜೋಶಿಗೆ ಜಾಸ್ತಿ ತಿಳಿದಿತ್ತೇನೋ...!



2008ರ ಮಾಲೆಗಾಂವ್ ಸ್ಫೋಟಕ್ಕೆ ಬಳಕೆಯಾದ ಬೈಕ್ ಸಾಧ್ವಿ ಪ್ರಜ್ಞಾಸಿಂಗ್‌ಗೆ ಸೇರಿದ್ದಾಗಿತ್ತು. ಆದರೆ ತಾನದನ್ನು ಎರಡು ವರ್ಷಗಳ ಹಿಂದೆಯೇ ಮಧ್ಯಪ್ರದೇಶದ ಆರೆಸ್ಸೆಸ್ ಕಾರ್ಯಕರ್ತ ಸುನೀಲ್ ಜೋಶಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ಆಕೆ ಪೊಲೀಸರ ಮುಂದೆ ಹೇಳಿ ಕೊಂಡಿದ್ದಳು.ಆದರೆ ಈ ಸುನೀಲ್ ಜೋಶಿ 2007ರಲ್ಲಿ ನಿಗೂಢವಾಗಿ ಕೊಲೆಯಾಗಿದ್ದ.



‘ನಿವೃತ್ತ ಸೇನಾಧಿಕಾರಿ ಹಾಗೂ ಇಂದ್ರೇಶ್ ಕುಮಾರ್ ನಡುವೆ ನಡೆದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಬಲ್ಲಂತಹ ವ್ಯಕ್ತಿಗಾಗಿ ಇಂದ್ರೇಶ್ ಹುಡುಕಾಡುತ್ತಿದ್ದ. ಆತ್ಮಹತ್ಯಾ ದಳಗಳನ್ನು ರಚಿಸುವ ಬಗ್ಗೆ (ನಿವೃತ್ತ) ಸೇನಾಧಿಕಾರಿ ಮಾತನಾಡುತ್ತಿದ್ದ. ಆತನ ಸಾಹಸಕ್ಕೆ ತನ್ನ ಬೆಂಬಲವಿರುವುದಾಗಿ ಇಂದ್ರೇಶ್ ಹೇಳಿದ. ನಾಸಿಕ್‌ನ ಭೋನ್ಸಾಲಾ ಮಿಲಿಟರಿ ಶಾಲೆಯಲ್ಲಿ ನುರಿತ ತಂಡಗಳಿಗೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳ ಬಳಕೆ ಬಗ್ಗೆ ತರಬೇತಿ ನೀಡುವ ಬಗ್ಗೆ ಅವರಿಬ್ಬರೂ ಚರ್ಚಿಸಿದರು’.






ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಹಾಗೂ ನಿವೃತ್ತ ಸೇನಾಧಿಕಾರಿಯೊಬ್ಬರ ನಡುವೆ ಪುಣೆಯಲ್ಲಿ ನಡೆದ ರಹಸ್ಯ ಮಾತುಕತೆಗೆ ಸಾಕ್ಷಿಯಾಗಿದ್ದ ವ್ಯಕ್ತಿಯ ಹೇಳಿಕೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ